ADVERTISEMENT

ಭಾರತವನ್ನು ಧರ್ಮಾಧಾರಿತ ದೇಶವಾಗಿಸುವ ಯತ್ನ: ಜ್ಞಾನಪ್ರಕಾಶ ಸ್ವಾಮೀಜಿ

ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮ * ಜ್ಞಾನಪ್ರಕಾಶ ಸ್ವಾಮೀಜಿ ಕಳವಳ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 23:24 IST
Last Updated 30 ಜುಲೈ 2024, 23:24 IST
<div class="paragraphs"><p>ಬಿ.ಆರ್‌.ಅಂಬೇಡ್ಕರ್ ಅವರ 133ನೇ ಜನ್ಮದಿನಾಚರಣೆ ಕಾರ್ಯಕ್ರಮ</p></div>

ಬಿ.ಆರ್‌.ಅಂಬೇಡ್ಕರ್ ಅವರ 133ನೇ ಜನ್ಮದಿನಾಚರಣೆ ಕಾರ್ಯಕ್ರಮ

   

ಬೆಂಗಳೂರು: ‘ಭಾರತವನ್ನು ಧರ್ಮಾಧಾರಿತ ದೇಶವನ್ನಾಗಿಸುವ ಯತ್ನ ನಡೆಯುತ್ತಿದೆ. ಹಾಗೆ ಮಾಡಲು ಮಾಡಲು ಬಿಟ್ಟರೆ, 500 ವರ್ಷಗಳಷ್ಟು ಹಿಂದೆ ಹೋಗಬೇಕಾಗುತ್ತದೆ. ಅದನ್ನು ತಡೆಯಲು ನಮ್ಮ ಬಳಿ ಇರುವ ರಕ್ಷಾ ಕವಚ ಸಂವಿಧಾನ’ ಎಂದು ಮೈಸೂರಿನ ಉರಿಲಿಂಗಪೆದ್ದಿ ಮಹಾಸಂಸ್ಥಾನ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರು ಜಲಮಂಡಳಿ ಮತ್ತು ಬೆಂಗಳೂರು ಜಲಮಂಡಳಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕ್ಷೇಮಾಭಿವೃದ್ಧಿ ಸಂಘವು ಆಯೋಜಿಸಿದ್ದ ‘ಬಿ.ಆರ್‌.ಅಂಬೇಡ್ಕರ್ ಅವರ 133ನೇ ಜನ್ಮದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ನಮ್ಮ ಮಂದಿರ, ಮಠ, ಮಸೀದಿ ಮತ್ತು ಚರ್ಚುಗಳನ್ನೆಲ್ಲಾ ರಕ್ಷಿಸುತ್ತಿರುವುದು ಸಂವಿಧಾನ’ ಎಂದರು.

ADVERTISEMENT

‘ಭಾರತವನ್ನು ಧರ್ಮಾಧಾರಿತ ದೇಶವನ್ನಾಗಿಸುವ ಯತ್ನಗಳ ಮತ್ತು ಏಕವ್ಯಕ್ತಿ ಪೂಜೆಯ ಅಪಾಯಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. 330 ಕೋಟಿ ದೇವರುಗಳು ನಮಗ್ಯಾರಿಗೂ ಯಾವ ಹಕ್ಕು ಮತ್ತು ಅಧಿಕಾರಗಳನ್ನು ನೀಡಿಲ್ಲ. ನಮಗೆಲ್ಲರಿಗೂ ಹಕ್ಕುಗಳನ್ನು ನೀಡಿದ್ದು ಅಂಬೇಡ್ಕರ್ ಮತ್ತು ಸಂವಿಧಾನ. ಸಂವಿಧಾನವನ್ನು ನಾವೆಲ್ಲರೂ ಜೀವಿಸಬೇಕು’ ಎಂದರು.

‘ಸಂವಿಧಾನ ಮತ್ತು ಮಹಿಳಾ ಹಕ್ಕುಗಳು’ ಕುರಿತು ಮಾತನಾಡಿದ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ಅವರು, ‘ಸಂವಿಧಾನವು ದೇಶದ ಎಲ್ಲ ಮಹಿಳೆಯರಿಗೆ ಶಿಕ್ಷಣ, ಉದ್ಯೋಗಾವಕಾಶ, ಸಮಾನತೆ ನೀಡಿದೆ. ವಿವಾಹ, ವಿಚ್ಛೇಧನ, ಕೌಟುಂಬಿಕ ದೌರ್ಜನ್ಯ ಸೇರಿ ಎಲ್ಲ ಸಂದರ್ಭಗಳಲ್ಲೂ ಮಹಿಳೆಯ ನೆರವಿಗೆ ನಿಲ್ಲುವ ಕಾನೂನುಗಳನ್ನು ಸಂವಿಧಾನ ಹೊಂದಿದೆ. ಆದರೆ, ಆ ಕಾನೂನುಗಳು ಎಷ್ಟರಮಟ್ಟಿಗೆ ಅನುಷ್ಠಾನವಾಗುತ್ತಿವೆ ಎಂಬುದೇ ಕಳವಳಕಾರಿ ವಿಷಯ’ ಎಂದರು.

ಧರ್ಮಶಾಸ್ತ್ರಗಳು ಮಹಿಳೆಯನ್ನು ಪೂಜನೀಯ ಸ್ಥಾನದಲ್ಲಿ ಇರಿಸಿ ಆಕೆಯ ಬಾಯಿಮುಚ್ಚಿಸಿವೆ. ಆಕೆಗೆ ಮಾತನಾಡುವ ದುಡಿಯುವ ಎಲ್ಲ ಹಕ್ಕು ನೀಡಿದ್ದು ಸಂವಿಧಾನ ಮಾತ್ರ
ಮಂಜುಳಾ ಚೆಲ್ಲೂರ್ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ

ಹೋರಾಟದ ಎಚ್ಚರಿಕೆ

‘ಬೆಂಗಳೂರು ಜಲಮಂಡಳಿಯಲ್ಲಿ ಹಲವು ಉನ್ನತ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ಬಡ್ತಿ ನೀಡಿ ಆ ಹುದ್ದೆಗೆ ನೇಮಕ ಮಾಡಬಹುದಾದ ಹಲವು ಮಂದಿ ಜಲಮಂಡಳಿಯಲ್ಲಿ ಹಲವರು ಇದ್ದಾರೆ. ಆದರೆ ಬೇರೆಡೆಯಿಂದ ಆ ಹುದ್ದೆಗಳಿಗೆ ನಿಯೋಜನೆ ಮಾಡಲಾಗುತ್ತಿದೆ. ಇದರಿಂದ ಜಲಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರಿಗೆ ಅನ್ಯಾಯವಾಗುತ್ತಿದೆ’ ಎಂದು ಜಲಮಂಡಳಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ನೌಕರರ ಸಂಘದ ಅಧ್ಯಕ್ಷ ಸದಾಶಿವ ಕಾಂಬಳೆ ಹೇಳಿದರು. ಜ್ಞಾನಪ್ರಕಾಶ್‌ ಸ್ವಾಮೀಜಿ  ‘ಮಂಡಳಿಯ ಎಲ್ಲ ನೌಕರರ ಪಟ್ಟಿಯನ್ನುಜ್ಯೇಷ್ಠತೆ ಆಧಾರದಲ್ಲಿ ಮಾಡಬೇಕು. ಎಲ್ಲ ಸಮುದಾಯಗಳ ನೌಕರರಿಗೂ ನ್ಯಾಯ ಸಿಗುವಂತೆ ಮಾಡಬೇಕು. ಇಲ್ಲದೇ ಇದ್ದಲ್ಲಿ ಹೋರಾಟ ನಡೆಸುತ್ತೇವೆ’ ಎಂದು ಜಲಮಂಡಳಿ ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ ಅವರನ್ನು ಉದ್ದೇಶಿಸಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.