ADVERTISEMENT

ಉಪಚುನಾವಣೆ | ಮೂರು ಕ್ಷೇತ್ರ: ಅಭ್ಯರ್ಥಿ ಆಯ್ಕೆಗೆ ಕಸರತ್ತು

ಶಿಗ್ಗಾವಿಗೆ ಭರತ್, ಚನ್ನಪಟ್ಟಣಕ್ಕೆ ನಿಖಿಲ್ ಬಹುತೇಕ ಖಚಿತ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 22:09 IST
Last Updated 18 ಅಕ್ಟೋಬರ್ 2024, 22:09 IST
<div class="paragraphs"><p>ಉಪಚುನಾವಣೆ (ಪ್ರಾತಿನಿಧಿಕ ಚಿತ್ರ)</p></div>

ಉಪಚುನಾವಣೆ (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಶುಕ್ರವಾರದಿಂದ ಆರಂಭವಾಗಿದ್ದು, ಆಡಳಿತಾರೂಢ ಕಾಂಗ್ರೆಸ್‌ ಹಾಗೂ ಮೈತ್ರಿ ಪಕ್ಷಗಳಾದ ಬಿಜೆಪಿ–ಜೆಡಿಎಸ್‌ ತಮ್ಮ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ಮುಂದುವರಿಸಿವೆ.

ಮೂರೂ ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕುರಿತು ಬಿಜೆಪಿ ರಾಜ್ಯ ಘಟಕ ಅ.19ರಂದು ಪಕ್ಷದ ಪ್ರಮುಖರ ಸಭೆ ನಡೆಸಲಿದೆ. ಸಭೆಯ ನಂತರ ವ್ಯಕ್ತವಾದ ಅಭಿಪ್ರಾಯ ಹಾಗೂ ತಲಾ ಇಬ್ಬರು ಆಕಾಂಕ್ಷಿಗಳ ಪಟ್ಟಿಯನ್ನು ತೆಗೆದುಕೊಂಡು ದೆಹಲಿಗೆ ತೆರಳಲಿರುವ ಪಕ್ಷದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅದನ್ನು ವರಿಷ್ಠರ ಮುಂದೆ ಮಂಡಿಸಲಿದ್ದಾರೆ. 

ADVERTISEMENT

ಅ.20ರಂದು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ದೆಹಲಿಗೆ ತೆರಳಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಜತೆ ಚರ್ಚೆ ನಡೆಸಲಿದ್ದು, ಅಂದೇ ಮೈತ್ರಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಲಿದೆ ಎಂದು ಬಿಜೆಪಿ–ಜೆಡಿಎಸ್‌ ಮೂಲಗಳು ಹೇಳಿವೆ.

ಬಸವರಾಜ ಬೊಮ್ಮಾಯಿ ಅವರಿಂದ ತೆರವಾದ ಶಿಗ್ಗಾವಿ ಕ್ಷೇತ್ರಕ್ಕೆ ಅವರ ಪುತ್ರ ಭರತ್‌ ಬೊಮ್ಮಾಯಿ ಅವರನ್ನೇ ಕಣಕ್ಕೆ ಇಳಿಸಲು ರಾಜ್ಯ ನಾಯಕರು ಒಲವು ತೋರಿದ್ದಾರೆ. ಕಾಂಗ್ರೆಸ್‌ನ ಇ. ತುಕಾರಂ ಅವರಿಂದ ತೆರವಾದ ಸಂಡೂರಿನಲ್ಲಿ ಜನಾರ್ದನ ರೆಡ್ಡಿ, ಬಿ. ಶ್ರೀರಾಮುಲು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೆಲ್ಲುವ ಸಾಧ್ಯತೆ ಇರುವ ಅಭ್ಯರ್ಥಿ ಅಂತಿಮಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

ಎಚ್‌.ಡಿ. ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ಚನ್ನಪಟ್ಟಣ ಕ್ಷೇತ್ರಕ್ಕೆ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರನ್ನೇ ಕಣಕ್ಕೆ ಇಳಿಸುವುದು ಬಹುತೇಕ ಅಂತಿಮವಾಗಿದೆ. ಆ ಕ್ಷೇತ್ರದಲ್ಲಿ ಟಿಕೆಟ್‌ಗೆ ಪ್ರಬಲ ಬೇಡಿಕೆ ಇಟ್ಟಿರುವ ವಿಧಾನಪರಿಷತ್‌ನ ಬಿಜೆಪಿ ಸದಸ್ಯ ಸಿ.ಪಿ. ಯೇಗೇಶ್ವರ್‌ ಅವರಿಗೆ ಕೇಂದ್ರದ ಯಾವುದಾದರೂ ನಿಗಮ–ಮಂಡಳಿ ಸ್ಥಾನ ನೀಡುವ ಮೂಲಕ ಭಿನ್ನಮತ ಶಮನಗೊಳಿಸುವ ಪ್ರಯತ್ನವನ್ನು ಬಿಜೆಪಿ ನಾಯಕರು ನಡೆಸಿದ್ದಾರೆ ಎಂದು ಗೊತ್ತಾಗಿದೆ.

ಜೆಡಿಎಸ್‌ ಶಾಸಕ ಎ.ಮಂಜು, ಮಾಜಿ ಸಚಿವ ಸಿ.ಎಸ್‌. ಪುಟ್ಟರಾಜು, ಮಾಜಿ ಶಾಸಕರಾದ ಕೆ. ಅನ್ನದಾನಿ, ಸುರೇಶ್‌ ಗೌಡ ಮತ್ತಿತರರು ಬೆಂಗಳೂರಿನ ಏಟ್ರಿಯಾ ಹೋಟೆಲ್‌ನಲ್ಲಿ ಯೋಗೇಶ್ವರ್‌ ಜತೆ ಚರ್ಚೆ ನಡೆಸಿದ್ದು, ಅವರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.

ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಯೋಗೇಶ್ವರ್, ‘ನಮ್ಮದು ಎನ್‌ಡಿಎ ಕೂಟ. ಅಭ್ಯರ್ಥಿ ನೆಪ ಮಾತ್ರ. ಮೈತ್ರಿ ಅಭ್ಯರ್ಥಿಯಾಗಿ ನನಗೇ ಟಿಕೆಟ್‌ ನೀಡಿ ಎಂದು ವಿನಂತಿಸಿದ್ದೇನೆ. ಎಚ್‌.ಡಿ. ಕುಮಾರಸ್ವಾಮಿ ದೆಹಲಿಗೆ ತೆರಳಿದ ನಂತರ ಅಭ್ಯರ್ಥಿ ಆಯ್ಕೆ ಅಂತಿಮವಾಗಲಿದೆ. ಅಲ್ಲಿಯವರೆಗೂ ನಾನು ಟಿಕೆಟ್‌ ಕೇಳುತ್ತಲೇ ಇರುತ್ತೇನೆ. ನನ್ನ ಕ್ಷೇತ್ರದ ಕಾರ್ಯಕರ್ತರಿಗಾಗಿ ಬೇಡಿಕೆ ಇಡುತ್ತೇನೆ’ ಎಂದರು. 

ಅಂತಿಮಗೊಳ್ಳದ ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆ

ಕಾಂಗ್ರೆಸ್‌ ಸಂಸದ ಇ. ತುಕಾರಾಂ ಅವರ ರಾಜೀನಾಮೆಯಿಂದ ತೆರವಾದ ಸಂಡೂರು ಕ್ಷೇತ್ರಕ್ಕೆ ಅವರ ಕುಟುಂಬದ ಸದಸ್ಯರಿಗೇ ಟಿಕೆಟ್‌ ನೀಡುವ ಕುರಿತು ಹೈಕಮಾಂಡ್‌ ಒಲವು ತೋರಿದೆ.ಆದರೆ, ಕಾಂಗ್ರೆಸ್‌ ಮುಖಂಡರ ಒಂದು ಗುಂಪು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರನ್ನು ಭೇಟಿ ಮಾಡಿ, ತುಕಾರಾಂ ಕುಟುಂಬ ಹೊರತುಪಡಿಸಿ ಈ ಬಾರಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಅವಕಾಶ ನೀಡಬೇಕು ಎಂದು ಬೇಡಿಕೆ ಸಲ್ಲಿಸಿದೆ. 

‘ಅಂತಿಮ ನಿರ್ಧಾರ ಹೈಕಮಾಂಡ್‌ ಮಾಡುತ್ತದೆ. ಯಾರಿಗೆ ಟಿಕೆಟ್‌ ಕೊಟ್ಟರೂ ಕಾಂಗ್ರೆಸ್‌ ಗೆಲುವಿಗೆ ಎಲ್ಲರೂ ಶ್ರಮಿಸೋಣ ಎಂದು’ ಲಾಡ್‌
ಸಮಾಧಾನಪಡಿಸಿದ್ದಾರೆ.

ಶಿಗ್ಗಾವಿಯಲ್ಲಿ ಪ್ರಬಲ ಅಭ್ಯರ್ಥಿ ಕಣಕ್ಕೆ ಇಳಸಲು ಚರ್ಚೆ ನಡೆಸಿದ್ದು, ಭಾನುವಾರದ ಒಳಗೆ ಇಬ್ಬರು ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ, ಎಐಸಿಸಿಗೆ ಕಳುಹಿಸಲಾಗುತ್ತದೆ.  ಚನ್ನಪಟ್ಟಣ ಅಭ್ಯರ್ಥಿ ಕುರಿತು ಶುಕ್ರವಾರ ಮಾತನಾಡಿದ ಮಾಜಿ ಸಂಸದ ಡಿ.ಕೆ. ಸುರೇಶ್‌, ‘ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆ ಮಾಡಿದ್ದು, ಚನ್ನಪಟ್ಟಣಕ್ಕೆ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು’ ಎಂದು ತಿಳಿಸಿದರು.

‘ಮೈತ್ರಿ ಪಕ್ಷಗಳ ಟಿಕೆಟ್‌ ಸಿಗದೇ ಅಸಮಾಧಾನಗೊಂಡವರು ಅಚ್ಚರಿಯ ಅಭ್ಯರ್ಥಿ ಎಂದು ಭಾವಿಸಬೇಕಿಲ್ಲ, ಅವರಿಗೂ ನಮಗೂ ಸಂಬಂಧವಿಲ್ಲ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.