ADVERTISEMENT

ಉಪಚುನಾವಣೆ | 2 ದಿನದಲ್ಲಿ ಆಕಾಂಕ್ಷಿಗಳ ಪಟ್ಟಿ ಕಳುಹಿಸಿ: KC ವೇಣುಗೋಪಾಲ್ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 22:47 IST
Last Updated 16 ಅಕ್ಟೋಬರ್ 2024, 22:47 IST
   

ಬೆಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಗೆ ತಲಾ ಇಬ್ಬರು ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸಿ, ಎರಡು ದಿನಗಳ ಒಳಗೆ ಕಳುಹಿಸಿಕೊಡುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ.

ಲೋಕಸಭೆ ಸಾರ್ವಜನಿಕ ಲೆಕ್ಕಪತ್ರಸಮಿತಿ ಅಧ್ಯಕ್ಷರೂ ಆಗಿರುವ ವೇಣುಗೋಪಾಲ್‌ ಅವರು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜತೆ ಉಪಚುನಾವಣೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ.

ಶಿಗ್ಗಾವಿ ಕ್ಷೇತ್ರದಲ್ಲಿ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಹಾವೇರಿ ಜಿಲ್ಲೆ ಹಾಗೂ ಶಿಗ್ಗಾವಿ ಕ್ಷೇತ್ರದ ಮುಖಂಡರ ಜತೆ ಚರ್ಚಿಸಿ, ಇಬ್ಬರ ಹೆಸರು ಕಳುಹಿಸಿಕೊಡಬೇಕು. ಸಂಡೂರು ಕ್ಷೇತ್ರದಲ್ಲಿ ಸಂಸದ ಇ.ತುಕಾರಾಂ ಮಗಳು ಅಥವಾ ಪತ್ನಿ ಪೈಕಿ ಯಾರನ್ನು ಕಣಕ್ಕೆ ಇಳಿಸಿದರೆ ಅನುಕೂಲವಾಗುತ್ತದೆ ಎನ್ನುವುದನ್ನು ನೀವೇ ನಿರ್ಧರಿಸಬೇಕೆಂದು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.

ADVERTISEMENT

ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ಕುರಿತು ಬಿಜೆಪಿ–ಜೆಡಿಎಸ್‌ ಮಿತ್ರ ಪಕ್ಷಗಳಲ್ಲಿ ಒಮ್ಮತ ಇರುವಂತೆ ಕಾಣುತ್ತಿಲ್ಲ. ಬಿಜೆಪಿಯ ಯೋಗೇಶ್ವರ ನಡೆ ನೋಡಿಕೊಂಡು ಯಾರನ್ನು ಕಣಕ್ಕೆ ಇಳಿಸಬೇಕೆಂಬ ನಿರ್ಧಾರ ಡಿ.ಕೆ. ಶಿವಕುಮಾರ್ ಮಾಡಲಿ. ಯಾರನ್ನೇ ನಿಲ್ಲಿಸಿದರೂ ಗೆಲ್ಲಿಸುವ ಜವಾಬ್ದಾರಿ ಅವರಿಗೆ ಬಿಡೋಣ ಎಂದಿದ್ದಾರೆ ಎಂದು ಮೂಲಗಳು ಹೇಳಿವೆ.

ಉಪಚುನಾವಣೆಗೆ ಬಿಜೆಪಿ–ಜೆಡಿಎಸ್‌ಮಾಡಿಕೊಂಡಿರುವ ಸಿದ್ಧತೆ, ಕಣಕ್ಕಿಳಿಸಲಿರುವ ಅಭ್ಯರ್ಥಿಗಳು, ಕ್ಷೇತ್ರ
ಗಳಲ್ಲಿ ಪಕ್ಷಕ್ಕಿರುವ ಅನುಕೂಲ, ಮೈತ್ರಿ ಪಕ್ಷಗಳನ್ನು ಎದುರಿಸುವ ಮಾರ್ಗಗಳ ಕುರಿತು ಚರ್ಚಿಸಿದ್ದಾರೆ. 

ಮುಡಾ, ವಾಲ್ಮೀಕಿ ನಿಗಮದ ಚರ್ಚೆ: ಮುಡಾ, ವಾಲ್ಮೀಕಿ ನಿಗಮದ ಪ್ರಕರಣಗಳ ತನಿಖೆ, ಪ್ರಸ್ತುತ ಸನ್ನಿವೇಶ
ಗಳ ಕುರಿತು ವೇಣುಗೋಪಾಲ್‌ ಮಾಹಿತಿ ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿ ಪತ್ನಿ ಹೆಸರಿನಲ್ಲಿದ್ದ ನಿವೇಶನಗಳನ್ನು ವಾಪಸ್‌ ನೀಡಿದ ನಂತರ ಆಗಿರುವ ಅನುಕೂಲ, ಲೋಕಾಯುಕ್ತ ತನಿಖೆಯ ಪ್ರಗತಿ ಕುರಿತು ವಿಚಾರ ವಿನಿಮಯ ನಡೆಸಿದ್ದಾರೆ. 

ಮುಖ್ಯಮಂತ್ರಿ ಬದಲಾವಣೆ ಕುರಿತು ಸಚಿವರು, ಶಾಸಕರು ನೀಡಿರುವ ಹೇಳಿಕೆಗಳು, ದಲಿತ ಮುಖ್ಯಮಂತ್ರಿ ಹೇಳಿಕೆ, ಸಚಿವರ ರಹಸ್ಯ ಸಭೆಗೆ ತಡೆ ಹಾಕಿರುವ ಕುರಿತು ಚರ್ಚಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.