ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತದಾನ ಇಂದು ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಈ ಮೂರೂ ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆಯಿದೆ. ಮೂರೂ ಕ್ಷೇತ್ರಗಳ ಮತದಾನದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.
ಉಪಚುನಾವಣೆ ನಡೆಯುತ್ತಿರುವ ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಜನ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸುತ್ತಿದ್ದಾರೆ. ಮತದಾನ ಆರಂಭಕ್ಕೂ ಮುನ್ನ ಜನ ಉತ್ಸಾಹದ ಮತಗಟ್ಟೆಗೆ ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದರು.
ಬಳ್ಳಾರಿ: ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಇಂದು ಬೆಳಿಗ್ಗೆ 7ರಿಂದ ಮತದಾನ ಆರಂಭವಾಗಿದೆ.ಾಂ ಗ್ರೆಸ್ ನಿಂದ ಇ. ಅನ್ನಪೂರ್ಣ, ಬಿಜೆಪಿಯಿಂದ ಬಂಗಾರು ಹನುಮಂತ, ಪಕ್ಷೇತರರಾಗಿ ನಾಲ್ವರು ಸ್ಪರ್ಧೆ ಮಾಡಿದ್ದಾರೆ.
ಸಂಡೂರು ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟು 2,36,402 ಮತದಾರರಿದ್ದು, ಇದರಲ್ಲಿ 1,17,935 ಪುರುಷರು, 1,18,438 ಮಂದಿ ಮಹಿಳೆ ಮತದಾರರು. 29 ಮಂದಿ ಲೈಂಗಿಕ ಅಲ್ಪಸಂಖ್ಯಾತ ಮತಗಳಿವೆ.
ಕ್ಷೇತ್ರದಲ್ಲಿ ಭದ್ರತೆಗೆ ಸಿವಿಲ್ ಪೊಲೀಸ್-676, ಡಿವೈಎಸ್ಪಿ 03, ಪಿಐ 06, ಪಿಎಸ್ಐ 14, ಎಎಸ್ಐ 22, ಹೆಚ್ ಸಿ 190, ಕಾನ್ಸ್ ಟೇಬಲ್ 281, ಗೃಹರಕ್ಷಕ ದಳ 160, ಕೆಎಸ್ಆರ್ಪಿ 360 ಅಧಿಕಾರಿ ಮತ್ತು ಸಿಬ್ಬಂದಿ ಸೇರಿ ಒಟ್ಟು 1036 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಶುರುವಾಗಿದ್ದು, ಕ್ಷೇತ್ರದ 241 ಮತಗಟ್ಟೆಗಳಲ್ಲಿ ಜನರು ಸರದಿಯಲ್ಲಿ ನಿಂತು ಹಕ್ಕು ಚಲಾವಣೆ ಮಾಡುತ್ತಿದ್ದಾರೆ.
ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನಲ್ಲಿ ಮತಗಟ್ಟೆಗಳನ್ನು ತೆರೆಯಲಾಗಿದೆ. ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಕ್ಷೇತ್ರದಲ್ಲಿ ಹಿಂಗಾರು ಬಿತ್ತನರ ಹಾಗೂ ಕೃಷಿಚಟುವಟಿಕೆಗಳು ನಡೆಯುತ್ತಿವೆ. ರೈತರು, ಬೆಳಿಗ್ಗೆಯೇ ಮತಗಟ್ಟೆಗೆ ಬಂದು ಸರದಿಯಲ್ಲಿ ನಿಂತು ಮತ ಹಾಕಿ ಹೊಲದತ್ತ ಹೊರಟಿದ್ದಾರೆ.
ಚನ್ನಪಟ್ಟಣ (ರಾಮನಗರ): ಉಪಚುನಾಚಣೆಯ 276 ಮತಗಟ್ಟೆಗಳಲ್ಲಿಯು ಶಾಂತಿಯುತ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. 7 ಗಂಟೆಯಿಂದ 9 ಗಂಟೆಯವರೆಗೆ ಶೇ 8.20 ಮತದಾನವಾಗಿದೆ.
ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತದಾನ ಚುರುಕಿನಿಂದ ನಡೆಯುತ್ತಿದ್ದು, ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಶೇ. 10.08ರಷ್ಟು ಮತದಾನವಾಗಿದೆ.
ಕ್ಷೇತ್ರದಲ್ಲಿ 2,37,525 ಮತದಾರರಿದ್ದಾರೆ. ಈ ಪೈಕಿ 23,951 ಮತದಾರರು ಈಗಾಗಲೇ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಇದರಲ್ಲಿ 13,074 ಪುರುಷರು ಹಾಗೂ 10,877 ಮಹಿಳಾ ಮತದಾರರು ಮತದಾನ ಮಾಡಿದ್ದಾರೆ. 241 ಮತಗಟ್ಟೆಯಲ್ಲಿ ಮತದಾನ ನಡೆಯುತ್ತಿದೆ.
ಸಂಡೂರು(ಬಳ್ಳಾರಿ): ಸಂಡೂರು ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಬುಧವಾರ ಪಟ್ಟಣದ 67ನೇ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ನಾನು ಮತ ಚಲಾವಣೆ ಮಾಡಿದ್ದೇನೆ, ಖುಷಿಯಾಗಿದೆ. ಎಲ್ಲ ಕಡೆ ಉತ್ತಮ ಸ್ಪಂದನೆ ಇದೆ. ನಾನು ಮೊದಲ ಬಾರಿ ಅಭ್ಯರ್ಥಿ ಆಗಿ ಮತದಾನ ಮಾಡಿದ್ದೇನೆ. ಇದು ಹೊಸ ಅನುಭವ. ಮತದಾನದ ಮೂಲಕ ಎಲ್ಲರೂ ಹಕ್ಕು ಚಲಾವಣೆಮಾಡಬೇಕುಅನ್ನಪೂರ್ಣ, ಸಂಡೂರು ಅಭ್ಯರ್ಥಿ
ನಾವು ಕುಟುಂಬ ಸಮೇತರಾಗಿ ಮತದಾನ ಮಾಡಿದ್ದೇವೆ. ಸಂವಿಧಾನದ ಆಶಯದಂತೆ ಎಲ್ಲರೂ ಮತದಾನ ಮಾಡಬೇಕು. ಸಂವಿಧಾನ ವ್ಯವಸ್ಥೆಯಲ್ಲಿ ಯಾರೂ ಮತದಾನದಿಂದ ಹೊರಗೆ ಉಳಿಯಬಾರದು ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕು. ಕಾಂಗ್ರೆಸ್ ಸದಾ ಸಂವಿಧಾನದ ಆಶಯದಂತೆ ಕೆಲಸ ಮಾಡುತ್ತದೆತುಕಾರಾಂ, ಸಂಸದ
ಸಂಡೂರು ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆ: ಬೆಳಗ್ಗೆ 9 ಗಂಟೆ ವರೆಗೆ ಶೇ. 10.11ರಷ್ಟು ಮತದಾನವಾಗಿದೆ.
ಹಾವೇರಿ: ಶಿಗ್ಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ತಮ್ಮ ತಂದೆಯಾದ ಸಂಸದ ಬಸವರಾಜ ಬೊಮ್ಮಾಯಿ ಜೊತೆ ಮತದಾನ ಮಾಡಿದರು.
ಶಿಗ್ಗಾವಿ ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ-1ರಲ್ಲಿ ಸರತಿ ಸಾಲಿನಲ್ಲಿ ನಿಂತು ಇಬ್ಬರೂ ಮತ ಚಲಾಯಿಸಿದರು.
ಚನ್ನಪಟ್ಟಣ (ರಾಮನಗರ): ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಬೆಳಿಗ್ಗೆ 10.30ರ ಸುಮಾರಿಗೆ ತಾಲ್ಲೂಕಿನ ಕೆಂಗಲ್ ನಲ್ಲಿರುವ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದರು.
ಬಳಿಕ ಚನ್ನಪಟ್ಟಣದ ಕೆಂಪೇಗೌಡ ಬಡಾವಣೆಯ ಮತಗಟ್ಟೆಗೆ ತೆರಳಿದರು. ಹೊರಗಡೆ ಇದ್ದ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರನ್ನು ಮಾತನಾಡಿದರು.
ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತದಾನ ಆರಂಭವಾಗಿ ನಾಲ್ಕು ಗಂಟೆಯಾಗಿದ್ದು, ಬೆಳಿಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ಶೇ. 26.01ರಷ್ಟು ಮತದಾನವಾಗಿದೆ.
ಕ್ಷೇತ್ರದಲ್ಲಿ 2,37,525 ಮತದಾರರಿದ್ದಾರೆ. ಈ ಪೈಕಿ 61,776 ಮತದಾರರು ಈಗಾಗಲೇ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಇದರಲ್ಲಿ 32,315 ಪುರುಷರು ಹಾಗೂ 29,461 ಮಹಿಳೆಯರು ಮತದಾನ ಮಾಡಿದ್ದಾರೆ.
ಚನ್ನಪಟ್ಟಣ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬೆಳಿಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ಶೇ. 27.02ರಷ್ಟು ಮತದಾನವಾಗಿದೆ.
31160 ಪುರುಷರು, 31781 ಮಹಿಳೆಯರು ಮತ ಚಲಾಯಿಸಿದ್ದಾರೆ.
ಸಂಡೂರು(ಬಳ್ಳಾರಿ): ಸಂಡೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಈ ವರೆಗೆ ಶೇ 26ರಷ್ಟು ಮತದಾನವಾಗಿದೆ.
ಚುನಾವಣಾ ಅಯೋಗದ ವೆಬ್ ಸೈಟ್ ನಲ್ಲಿ ಅಧಿಕೃತ ಅಂಕಿ ಅಂಶ ಪ್ರಕಟಿಸಲಾಗಿದೆ.
ಶಿಗ್ಗಾವಿ: ಶೇ. 43.50
ಚನ್ನಪಟ್ಟಣ: ಶೇ 48
ಸಂಡೂರು: ಶೇ 43.46
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.