ಬೆಂಗಳೂರು: ‘ಕುಟುಂಬ ರಾಜಕಾರಣದ ಪ್ರಶ್ನೆ ನನ್ನನ್ನೂ ಕಾಡುತ್ತಿದೆ’ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಹೇಳಿದರು.
‘ವಿಜಯೇಂದ್ರ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿರುವುದರಿಂದ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆಯನ್ನು ಬಿಜೆಪಿ ಕಳೆದುಕೊಂಡಿಲ್ಲವೆ’ ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ಶನಿವಾರ ಉತ್ತರಿಸಿದರು.
‘ನಿಮ್ಮನ್ನು ಕಾಡುತ್ತಿರುವ ರೀತಿಯಲ್ಲಿ ಪ್ರಶ್ನೆಗಳಾಗಿ ಅದು ನನ್ನನ್ನೂ ಕಾಡುತ್ತಿದೆ. ನನಗೂ ಇರುವುದು ಪ್ರಶ್ನೆ ಮಾತ್ರ. ಎಲ್ಲ ಪ್ರಶ್ನೆಗಳಿಗೂ ಈಗ ಉತ್ತರ ಕೊಡುವುದು ಸೂಕ್ತ ಅಲ್ಲ. ನನ್ನಂತಹ ಕಾರ್ಯಕರ್ತರ ಮನಸ್ಸಿನಲ್ಲಿರುವ ಪ್ರಶ್ನೆಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದು ಸೂಕ್ತವಲ್ಲ’ ಎಂದರು.
‘ಈಗ ನಾನು ಕೆಲವು ಸಂಗತಿಗಳ ಬಗ್ಗೆ ಮಾತನಾಡಿದರೆ ತಪ್ಪು ಅರ್ಥ ಕಲ್ಪಿಸುವ ಸಾಧ್ಯತೆ ಜಾಸ್ತಿ ಇದೆ. ಈಗ ಏನಾದರೂ ಮಾತನಾಡಿದರೆ ಹಿಂದಿನ ಮಾತಿನ ವಿಡಿಯೊ ತೋರಿಸುತ್ತೀರಿ. ಎಲ್ಲೆಲ್ಲಿಗೋ ಜೋಡಿಸಲು ಪ್ರಯತ್ನಿಸುತ್ತೀರಿ. ಈ ಸಂದರ್ಭದಲ್ಲಿ ಆ ಪ್ರಶ್ನೆಗೆ ಉತ್ತರಿಸಲು ಹೋಗುವುದಿಲ್ಲ’ ಎಂದು ರವಿ ಹೇಳಿದರು.
ಎಲ್ಲರೂ ಚೆನ್ನಾಗಿ ಆಟ ಆಡಿದರೆ ಮಾತ್ರ ತಂಡ ಗೆಲ್ಲಬಹುದು. ಸಾಮಾನ್ಯ ಕಾರ್ಯಕರ್ತನಿಂದ ರಾಷ್ಟ್ರೀಯ ಅಧ್ಯಕ್ಷರವರೆಗೆ ಸಮನ್ವಯದಿಂದ ಕೆಲಸ ಮಾಡಿದಾಗ ತಂಡ ಗೆಲ್ಲುತ್ತದೆ. ಇಲ್ಲಿ ಗೆಲ್ಲುವುದು ತಂಡ.
ನಾಯಕರ ಪಾತ್ರವೂ ಇರುತ್ತದೆ. ಯೋಗ್ಯ ಮಾರ್ಗದರ್ಶನ, ವಿಶ್ವಾಸ ತುಂಬುವುದು, ಸಮನ್ವಯದಲ್ಲಿ ಕೊಂಡೊಯ್ಯುವುದು ನಾಯಕರ ಜವಾಬ್ದಾರಿ. ತಂಡವನ್ನು ಯಶಸ್ವಿಯಾಗಿ ಅವರು ಮುನ್ನಡೆಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
‘ನಾವೆಲ್ಲ ಸೈದ್ಧಾಂತಿಕ ನೆಲೆಯ ಕಾರ್ಯಕರ್ತರು. ನಮ್ಮ ಬಗ್ಗೆ ಯಾರೂ ವಿಚಲಿತರಾಗಲು ನಾವು ಅವಕಾಶವನ್ನೇ ಕೊಟ್ಟಿಲ್ಲ. ಸೈದ್ಧಾಂತಿಕ ಬದ್ಧತೆಯನ್ನು ಇಟ್ಟುಕೊಂಡು ಕೆಲಸ ಮಾಡುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಕ್ಷಮೆ ಇರಲಿ’: ‘35 ವರ್ಷಗಳ ಸಾರ್ವಜನಿಕ ಜೀವನದಲ್ಲಿ ನನ್ನ ನಂಬಿಕೆಯನ್ನಾಧರಿಸಿ ಯಾರಿಗಾದರೂ ನೋವುಂಟು ಮಾಡಿದ್ದರೆ ಕ್ಷಮಿಸಿ ಎಂದು ದೀಪಾವಳಿಯ ಹಿಂದಿನ ದಿನ ಕೇಳಿಕೊಳ್ಳುವೆ’ ಎಂದು ರವಿ ಕೈಮುಗಿದು ಮನವಿ ಮಾಡಿದರು.
‘ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸುವಂತೆ ಪಕ್ಷದ ವರಿಷ್ಠರ ಮುಂದೆ ನಾನು ಬೇಡಿಕೆ ಇಟ್ಟಿರಲಿಲ್ಲ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು ‘ವಿಜಯೇಂದ್ರ ಅವರ ನೇಮಕವನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಅದರ ಸುಳಿವೂ ಇರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ವರಿಷ್ಠರು ಈ ವಿಚಾರದಲ್ಲಿ ಸೂಕ್ತ ಕಾಲದಲ್ಲಿ ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ’ ಎಂದರು.
‘ವೀರಶೈವ ಸಮಾಜ ಯಾವತ್ತೂ ಬಿಜೆಪಿಯ ಜತೆಗೆ ಇದೆ. ವಿಜಯೇಂದ್ರ ಪಕ್ಷದ ಅಧ್ಯಕ್ಷರಾಗಿರುವುದರಿಂದ ಇನ್ನೂ ಹೆಚ್ಚಿನ ಬೆಂಬಲ ದೊರಕಲಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗಳಿಸುವುದು ನಮ್ಮ ಗುರಿ. ಅದಕ್ಕಾಗಿ ಪಕ್ಷ ಸಂಘಟನೆ ಮಾಡುತ್ತೇನೆ’ ಎಂದು ಹೇಳಿದರು.
‘ಪಕ್ಷದ ಎಲ್ಲರೂ ಒಟ್ಟಾಗಿದ್ದಾರೆ. ಯಾರಲ್ಲೂ ಮುನಿಸಿನ ಪ್ರಶ್ನೆಯೇ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಥಿತಿ ಮಂಗನಿಗೆ ಸಾರಾಯಿ ಕುಡಿಸಿದಂತಾಗಿದೆ’ ಎಂದು ಬಿಜೆಪಿ ಮುಖಂಡ ಮುರುಗೇಶ ನಿರಾಣಿ ಹೇಳಿದರು.
ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು ‘ಮಂಗನಿಗೆ ಸಾರಾಯಿ ಕುಡಿಸಿದಂತೆ ಎಂಬ ಗಾದೆ ಮಾತಿದೆ. ಸಾರಾಯಿ ಕುಡಿಸಿ ಬಾಲಕ್ಕೆ ಪಟಾಕಿ ಕಟ್ಟಿದರೆ ಏನಾಗುತ್ತದೋ ಅದೇ ರೀತಿ ಯತ್ನಾಳಗೂ ಆಗಿದೆ. ಹುಚ್ಚನಂತೆ ಮಾತಾಡಿಕೊಂಡು ಅಡ್ಡಾಡುತ್ತಿದ್ದಾರೆ’ ಎಂದರು.
‘ಅವರ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಬಿ.ಎಸ್. ಯಡಿಯೂರಪ್ಪ ಕುಟುಂಬ ಜಗದೀಶ ಶೆಟ್ಟರ್ ಪ್ರಲ್ಹಾದ ಜೋಶಿ ಸೋಮಣ್ಣ ನನಗೆ ಎಲ್ಲರಿಗೂ ಮಾತನಾಡಿದ್ದಾರೆ. ಯಾರನ್ನೂ ಬಿಟ್ಟಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ನಾನೇ ಮುಂದಿನ ಮುಖ್ಯಮಂತ್ರಿ ನಾನೇ ಬಿಜೆಪಿ ರಾಜ್ಯ ಘಟಕದ ಮುಂದಿನ ಅಧ್ಯಕ್ಷ ನಾನೇ ವಿರೋಧ ಪಕ್ಷದ ನಾಯಕ ಎಂದು ಹೇಳಿಕೊಂಡು ಅಡ್ಡಾಡುತ್ತಾರೆ. ಪಕ್ಷದ ರಾಜ್ಯ ನಾಯಕರಾಗಲೀ ರಾಷ್ಟ್ರೀಯ ನಾಯಕರಾಗಲೀ ಅದನ್ನು ಗಣನೆಗೆ ತೆಗೆದುಕೊಂಡಿಲ್ಲ. ಆತನೊಬ್ಬ ಸ್ವಯಂಘೋಷಿತ ನಾಯಕ’ ಎಂದು ನಿರಾಣಿ ವಾಗ್ದಾಳಿ ನಡೆಸಿದರು.
‘ಲಿಂಗಾಯತರೇ ಸಿ.ಎಂ ಆಗಿದ್ದಾಗ ಏಕೆ ಗೆಲ್ಲಲಿಲ್ಲ?’
ಬಂಗಾರಪೇಟೆ (ಕೋಲಾರ ಜಿಲ್ಲೆ): ‘2013ರ ವಿಧಾನಸಭೆ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದರು. ಅವರೂ ಲಿಂಗಾಯತ ಸಮುದಾಯದವರು. ಆಗ ಏಕೆ ಬಿಜೆಪಿ ಗೆಲ್ಲಲಿಲ್ಲ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಇಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ವಿಜಯೇಂದ್ರ ನೇಮಕ ಕುರಿತ ಪ್ರಶ್ನೆಗೆ ಹೀಗೆ ಪ್ರಕ್ರಿಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಟೀಕೆಗೆ ‘ಮೋದಿ ಪ್ರಧಾನಿಯಾಗುವ ಮುನ್ನ ದೇಶದಲ್ಲಿ ₹53.11ಲಕ್ಷ ಕೋಟಿ ಸಾಲವಿತ್ತು. ಈಗ ₹125ಲಕ್ಷ ಕೋಟಿ ಸಾಲವಿದೆ. ದೇಶವನ್ನು ದಿವಾಳಿ ಮಾಡಿದ್ದು ಯಾರು? ಚರ್ಚೆಗೆ ಕರೆಯಿರಿ ಮೋದಿ ಅವರನ್ನು’ ಎಂದು ಸವಾಲು ಹಾಕಿದರು.
ಹುಬ್ಬಳ್ಳಿ: ‘ಅತ್ತೂ ಕರೆದು ಮಾಡಿದ್ದಾರೆ. ಆರು ತಿಂಗಳ ಹಿಂದೆ ಏಕೆ ಮಾಡಲಿಲ್ಲ. ಎಲ್ಲೋ ಒಂದು ಕಡೆ ಬಿಜೆಪಿ ಫೇಲ್ ಆಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಪ್ರತಿಕ್ರಿಯಿಸಿದರು.
ಬಿ.ವೈ.ವಿಜಯೇಂದ್ರ ನೇಮಕ ಕುರಿತು ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಆರು ತಿಂಗಳಿನಿಂದ ಏನಾಗಿದೆ ಎಂದು ಗಮನಿಸಿದರೆ, ಕಾರ್ಯಕರ್ತರಿಂದ ಕೇಳಿದರೆ ಒಟ್ಟು ಸ್ಥಿತಿ ಗೊತ್ತಾಗುತ್ತದೆ. ಬಿಜೆಪಿ ಹಣೆಬರಹ ವಿಧಾನಸಭೆ ಚುನಾವಣೆಯಲ್ಲೇ ಗೊತ್ತಾಗಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 20 ಸ್ಥಾನಗಳವರೆಗೆ ಗೆಲ್ಲಲಿದೆ’ ಎಂದರು.
ಬೆಳಗಾವಿ: ‘ಬಿಜೆಪಿಯಲ್ಲಿ ಯಡಿಯೂರಪ್ಪ ಮಾತ್ರ ಪ್ರಬಲ ನಾಯಕ. ಅದಕ್ಕೆ ಅವರ ಪುತ್ರನಿಗೆ ರಾಜ್ಯ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಮತಗಳಿಗೆ ಹೀಗೆ ಮಾಡಿರಬಹುದು. ಆದರೆ, ಯಡಿಯೂರಪ್ಪ ಅವರ ಆಕರ್ಷಕ ವ್ಯಕ್ತಿತ್ವ ವಿಜಯೇಂದ್ರಗೆ ಇಲ್ಲ’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಸಿ.ಎಂ. ಸ್ಥಾನದಿಂದ ಯಡಿಯೂರಪ್ಪ ಇಳಿಸಿದ್ದೂ ಕಾರಣ. ಈಗ ಆ ಪಕ್ಷಕ್ಕೆ ಬಿಎಸ್‌ವೈ ಅನಿವಾರ್ಯ ಆಗಿದ್ದಾರೆ. ಮಕ್ಕಳು, ಮೊಮ್ಮಕ್ಕಳ ಸರದಿ ಈಗ ಬಿಜೆಪಿಯಲ್ಲೂ ಆರಂಭವಾಗಿದೆ’ ಎಂದೂ ಹೇಳಿದರು.
ಇದು, ಕುಟುಂಬ ರಾಜಕಾರಣವಲ್ಲವೇ- ಪ್ರಿಯಾಂಕ್ ಪ್ರಶ್ನೆ
ಬೆಂಗಳೂರು: ‘ಕುಟುಂಬ ರಾಜಕಾರಣ ತೊಲಗಿಸಬೇಕು, ಓಲೈಕೆ ರಾಜಕಾರಣ, ಭ್ರಷ್ಟಾಚಾರ ನಾವು ಒಪ್ಪಲ್ಲ ಎಂದು ಕೆಂಪುಕೋಟೆಯ ಮೇಲೆ ನಿಂತು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಿದ್ದರು. ಆದರೆ, ಈಗ ವಿಜಯೇಂದ್ರ ನೇಮಕಕ್ಕೆ ಏನು ಹೇಳಬೇಕು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ಪ್ರಶ್ನಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಾನು ಏನೇ ಮಾಡಿದರೂ ಖರ್ಗೆ ಮಗ ಎನ್ನುತ್ತಾರೆ. ನಾನು ಯುವ ಕಾಂಗ್ರೆಸ್ನಲ್ಲಿ ಕೆಲಸ ಮಾಡಿ ಶಾಸಕನಾದೆ. ಆದರೂ ನಮ್ಮದು ಕುಟುಂಬ ರಾಜಕಾರಣ ಅಂದರು. ಈಗ ಯಡಿಯೂರಪ್ಪ ಮಗನಿಗೆ ಸ್ಥಾನ ನೀಡಿದ್ದಾರೆ. ಇದಕ್ಕೆ ಬಿಜೆಪಿಯವರು ಉತ್ತರ ಕೊಡಬೇಕು’ ಎಂದರು.
‘ವಿಜಯೇಂದ್ರ ನೇಮಕದ ಮೂಲಕ ಬಿ.ಎಲ್. ಸಂತೋಷ್ ಅವರಿಗೆ, ‘ನೀವು ಕೇಶವಕೃಪಾದಲ್ಲೇ ಇರಿ’ ಎಂದು ಬಿಜೆಪಿ ಹೈಕಮಾಂಡ್ ಸಂದೇಶ ಕೊಟ್ಟಂತಿದೆ’ ಎಂದರು. ‘ಬೂತ್ ಮಟ್ಟ, ಸಂಘದಲ್ಲಿ ಕೆಲಸ ಮಾಡಿದ್ದೇನೆ. ವಿಜಯೇಂದ್ರ ನನಗೆ ಬಚ್ಚಾ ಎನ್ನುತ್ತಿದ್ದ ಈಶ್ವರಪ್ಪ ಈಗ ಎಲ್ಲಿಗೆ ಹೋದರು? ಈಗವರು ಪಕ್ಷ ಬಿಡುತ್ತಾರಾ?’ ಎಂದು ವ್ಯಂಗ್ಯವಾಡಿದರು.
‘ರಾಜ್ಯದಲ್ಲಿ ಬಿಜೆಪಿ ಮುಗಿಸಲು ವಿಜಯೇಂದ್ರ ಅವರನ್ನು ನೇಮಿಸಿದಂತಿದೆ. ದೈಹಿಕವಾಗಿ ಸಮರ್ಥರಿದ್ದರೂ ಸದಾನಂದಗೌಡರಿಗೆ ಸ್ವಯಂನಿವೃತ್ತಿ ಕೊಡಿಸಿದ್ದಾರೆ. ಈಗ ಬಿಜೆಪಿ ವರ್ಸಸ್ ಬಿಜೆಪಿ ಆಗಿದೆ’ ಎಂದು ವ್ಯಾಖ್ಯಾನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.