ಶಿವಮೊಗ್ಗ: ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನದ ಚುಕ್ಕಾಣಿ ನಾಲ್ಕನೇ ಬಾರಿಗೆ ಒಲಿದ ಶ್ರೇಯ ಬಿ.ವೈ.ವಿಜಯೇಂದ್ರ ಮೂಲಕ ಶಿವಮೊಗ್ಗ ಜಿಲ್ಲೆಗೆ ಸಂದಿದೆ.
ಈ ಮೊದಲು ಬಿ.ಎಸ್. ಯಡಿಯೂರಪ್ಪ 1985 ರಿಂದ 1988ರವರೆಗೆ ಹಾಗೂ 2016ರಲ್ಲಿ ಹೀಗೆ ಎರಡು ಬಾರಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಹೊಣೆ ನಿರ್ವಹಿಸಿದ್ದರು. ನಂತರ ಕೆ.ಎಸ್.ಈಶ್ವರಪ್ಪ 2010ರಿಂದ 12ರವರೆಗೆ ರಾಜ್ಯಾಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿದಿದ್ದರು.
ಈಗ ಅತ್ಯಂತ ಕಿರಿಯ ವಯಸ್ಸಿನಲ್ಲಿ ಅಧ್ಯಕ್ಷ ಸ್ಥಾನ ಪಡೆದ ಗರಿ ಬಿ.ವೈ.ವಿಜಯೇಂದ್ರಗೆ ಮೂಡಿದೆ.
ಬಿ.ವೈ.ವಿಜಯೇಂದ್ರ ಮೂರು ವರ್ಷಗಳ ಹಿಂದೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಏರಿದ್ದರು. ನಂತರ ತುಮಕೂರು ಜಿಲ್ಲೆ ಶಿರಾ ಹಾಗೂ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಪಕ್ಷದಿಂದ ಉಸ್ತುವಾರಿ ವಹಿಸಿಕೊಂಡು ತಮ್ಮ ಸಂಘಟನಾ ಸಾಮರ್ಥ್ಯ ಪ್ರದರ್ಶಿಸಿದ್ದರು. ಅದೂ ಜೆಡಿಎಸ್-ಕಾಂಗ್ರೆಸ್ ನ ಸುಭದ್ರ ನೆಲೆಯಲ್ಲಿ ಅವರು ಬಿಜೆಪಿಯ ಫಸಲು ಬಿತ್ತುವಲ್ಲಿ ಯಶಸ್ವಿಯಾಗಿ ಆಗಲೇ ವರಿಷ್ಠರ ಗಮನ ಸೆಳೆದಿದ್ದರು.
ಕಳೆದ ಬಾರಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪತನ, 19 ಶಾಸಕರ ಪಕ್ಷಾಂತರ ಪರ್ವ, ಉಪಚುನಾವಣೆ, ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರದ ರಚನೆಯಲ್ಲಿ ವಿಜಯೇಂದ್ರ ಅವರೂ ತೆರೆಮರೆಯಲ್ಲಿ ಪಾತ್ರ ವಹಿಸಿದ್ದು ಗುಟ್ಟಾಗೇನೂ ಉಳಿದಿರಲಿಲ್ಲ.
ಯಡಿಯೂರಪ್ಪ ಅವರು ಚುನಾವಣಾ ರಾಜಕಾರಣದಿಂದ ನಿವೃತ್ತಿ ಹೊಂದಿದ ನಂತರ ನಡೆದ ಬೆಳವಣಿಗೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದು ಗೆದ್ದು ಬಂದಿದ್ದ ವಿಜಯೇಂದ್ರ, ಈಗ ರಾಜ್ಯ ಬಿಜೆಪಿಯ ಸಂಕಷ್ಟ ಕಾಲದಲ್ಲಿ ಸಂಘಟನೆಯ ಹೊಣೆ ಪಡೆದಿದ್ದಾರೆ ಎನ್ನಲಾಗುತ್ತಿದೆ.
ಉತ್ತಮ ಸಂಘಟಕ, ರಾಜಕೀಯ ತಂತ್ರಗಾರ ಎಂಬ ಶ್ರೇಯದೊಂದಿಗೆ ವೀರಶೈವ-ಲಿಂಗಾಯತ ಸಮುದಾಯದಲ್ಲೂ ಪ್ರಭಾವಿ ಆಗಿರುವುದರಿಂದ ಅತ್ಯಂತ ಕಿರಿಯ ವಯಸ್ಸಿನಲ್ಲಿ ಈ ಮಹತ್ವದ ಜವಾಬ್ದಾರಿ ದೊರೆತಿದೆ. ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಬಿಜೆಪಿ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ. ಪುತ್ರನಿಗೆ ಪಟ್ಟ ಕೊಡಿಸಿ ಪಕ್ಷದಲ್ಲಿ ಯಡಿಯೂರಪ್ಪ ಮತ್ತೆ ಹಿಡಿತ ಸಾಧಿಸಿದ್ದಾರೆ ಎಂಬ ವಿಶ್ಲೇಷಣೆ ಸ್ಥಳೀಯವಾಗಿ ನಡೆಯುತ್ತಿದೆ.
ವಿಶೇಷವೆಂದರೆ ಶಿಕಾರಿಪುರ ಪ್ರತಿನಿಧಿಸುವ ಶಾಸಕರು ಎರಡನೇ ಬಾರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಪಡೆದಿದ್ದಾರೆ. ಅಪ್ಪ ಬಿ.ಎಸ್.ಯಡಿಯೂರಪ್ಪ ನಂತರ ರಾಜ್ಯಾಧ್ಯಕ್ಷ ಸ್ಥಾನ ಈಗ ವಿಜಯೇಂದ್ರಗೆ ಒಲಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.