ADVERTISEMENT

ಸತೀಶ ಜಾರಕಿಹೊಳಿ ಭೇಟಿ ಮಾಡಿದ ಬಿ.ವೈ.ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 15:15 IST
Last Updated 7 ಅಕ್ಟೋಬರ್ 2024, 15:15 IST
   

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ, ಶಿಕಾರಿಪುರ ತಾಲ್ಲೂಕು ರೈತರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.

ಸಚಿವರ ಭೇಟಿಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಶಿಕಾರಿಪುರ ತಾಲ್ಲೂಕಿನ ಟೋಲ್‌ನಿಂದಾಗಿ ರೈತರು ಮತ್ತು ಬಡವರಿಗೆ ಅನನುಕೂಲ ಆಗಿದೆ. ಮೂರು ಜಿಲ್ಲೆಗಳ ಜನರು ಈ ಹೆದ್ದಾರಿಯನ್ನೇ ಬಳಸುತ್ತಿದ್ದಾರೆ. ಒಂದೇ ಜಿಲ್ಲೆಯಲ್ಲಿ ಎರಡು ಟೋಲ್‌ಗಳಿವೆ. ಟೋಲ್‌ ವರ್ಗಾಯಿಸಿ ಬಡವರು ಮತ್ತು ರೈತರಿಗೆ ಅನುಕೂಲ ಮಾಡಿಕೊಡಲು ಮನವಿ ಮಾಡಿದ್ದೇನೆ’ ಎಂದರು.

ಟೋಲ್‌ ವರ್ಗಾವಣೆ ಕುರಿತಂತೆ ಎರಡು–ಮೂರು ಬಾರಿ ಹೋರಾಟ ನಡೆದಿದೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ವಿಚಾರದಲ್ಲಿ ಚರ್ಚಿಸಲು ಶೀಘ್ರವೇ ಅಧಿಕಾರಿಗಳ ಸಭೆ ಕರೆಯುವುದಾಗಿ ಭರವಸೆ ನೀಡಿದ್ದಾರೆ ಎಂದರು. 

ADVERTISEMENT

‘ನಾನೊಬ್ಬ ಜನಪ್ರತಿನಿಧಿಯಾಗಿ, ಶಾಸಕನಾಗಿ ನನ್ನ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಆದ್ಯ ಕರ್ತವ್ಯ. ಬೇರೆಯವರಿಂದ ಕೇಳಿ ತಿಳಿದುಕೊಳ್ಳುವ ಅಗತ್ಯವಿಲ್ಲ. ತಲೆ ಹಿಡಿಯುವ ರಾಜಕಾರಣ ಮಾಡುವುದಿಲ್ಲ. ತಂದೆಯವರಾದ ಯಡಿಯೂರಪ್ಪ ಅವರ ರಾಜಕೀಯ ಜೀವನವನ್ನು ನೋಡಿದ್ದೀರಿ. ರಾಜ್ಯಾಧ್ಯಕ್ಷನಾಗಿ ಪಕ್ಷವನ್ನು ಮುನ್ನಡೆಸುವುದರ ಕುರಿತು, ನನಗೆ ಸ್ಪಷ್ಟತೆ ಇದೆ. ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸುವುದು ನನ್ನ ಕರ್ತವ್ಯ. ಆ ದಿಸೆಯಲ್ಲಿ ಸಚಿವರನ್ನು ಭೇಟಿ ಮಾಡಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.