ADVERTISEMENT

ಹೈನುಗಾರರ ₹ 716 ಕೋಟಿ ಬಿಡುಗಡೆಗೆ ವಿಜಯೇಂದ್ರ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2024, 15:45 IST
Last Updated 5 ಫೆಬ್ರುವರಿ 2024, 15:45 IST
<div class="paragraphs"><p>ಬಿ.ವೈ. ವಿಜಯೇಂದ್ರ </p></div>

ಬಿ.ವೈ. ವಿಜಯೇಂದ್ರ

   

ಬೆಂಗಳೂರು: ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ನೈಜ ಕಾಳಜಿ ಇದ್ದರೆ ಬಾಕಿ ಉಳಿಸಿಕೊಂಡಿರುವ ಹೈನುಗಾರರ ₹716 ಕೋಟಿ ಪ್ರೋತ್ಸಾಹಧನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದ ಧೋರಣೆಯಿಂದ ಜನರು ಮಾತ್ರವಲ್ಲ, ಜಾನುವಾರುಗಳೂ ಈ ಸರ್ಕಾರಕ್ಕೆ ಶಾಪ ಹಾಕುತ್ತಿವೆ ಎಂದು ಕಿಡಿಕಾರಿದರು.

ADVERTISEMENT

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನವನ್ನು ನೀಡುತ್ತಿದ್ದರು. ಅದರ ಪರಿಣಾಮವಾಗಿ ಬಿಜೆಪಿ ಆಡಳಿತದಲ್ಲಿದ್ದಾಗ 26 ಲಕ್ಷ ಗ್ರಾಮೀಣ ರೈತರಿಂದ ಪ್ರತಿ ದಿನ 80–85 ಲಕ್ಷ ಲೀಟರ್‌ ಹಾಲು ಸಂಗ್ರಹಿಸಲಾಗುತ್ತಿತ್ತು. ಈಗ ಹಾಲು ಪೂರೈಕೆ ಇಳಿಕೆಯಾಗಿದೆ ಎಂದರು.

‘ಈ ಸರ್ಕಾರವು ಹಾಲು ಉತ್ಪಾದಕರಿಗೆ ₹716 ಕೋಟಿ ಪ್ರೋತ್ಸಾಹ ಧನ ಉಳಿಸಿಕೊಂಡಿದೆ. ಇದರ ಪರಿಣಾಮವಾಗಿ 10 ಲಕ್ಷ ಲೀಟರ್‌ಗಳಷ್ಟು ಹಾಲು ಸಂಗ್ರಹಣೆ ಕಡಿಮೆ ಆಗಿದೆ. ಕಾಂಗ್ರೆಸ್‌ ಪಕ್ಷದ ಕೆಲವು ನಾಯಕರು ಬಿಜೆಪಿ ಬಗ್ಗೆ ಟೀಕಿಸುವಾಗ ಮಾನ ಮರ್ಯಾದೆ ಇದ್ದರೆ ಎಂಬ ಪದ ಬಳಸುತ್ತಾರೆ. ನಾನು ಆ ಭಾಷೆ ಬಳಸುವುದಿಲ್ಲ. ರೈತರ ಬಗ್ಗೆ ಕಾಳಜಿ ಇದ್ದರೆ ಗೌರವದಿಂದ ಕೂಡಲೇ ಬಿಡುಗಡೆ ಮಾಡಬೇಕು' ಎಂದು ವಿಜಯೇಂದ್ರ ಆಗ್ರಹಿಸಿದರು.

ಇದೇ 10 ರಂದು ಪ್ರಮುಖ ನಾಯಕರ ಸಭೆ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಇದೇ 10 ರಂದು ಬೆಂಗಳೂರಿಗೆ ಬರಲಿದ್ದಾರೆ. ಅಂದು ಲೋಕಸಭಾ ಕ್ಷೇತ್ರಗಳ ಕ್ಲಸ್ಟರ್‌ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಪಕ್ಷದ ಪ್ರಮುಖ ನಾಯಕರ ಸಭೆಯಲ್ಲಿ ಭಾಗವಹಿಸಿ ಸಮಾಲೋಚನೆ ನಡೆಸಲಿದ್ದಾರೆ. ಅಂದು ಸಂಜೆ 5 ಗಂಟೆಗೆ ಸುತ್ತೂರು ಜಾತ್ರೆಯಲ್ಲೂ ಭಾಗವಹಿಸಲಿದ್ದಾರೆ ಎಂದರು.

‘ಯಾವ ಕ್ಷೇತ್ರದಿಂದ ಯಾರು ಸ್ಪರ್ಧಿಸಬೇಕು ಎಂಬುದನ್ನು ನಮ್ಮ ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ. 28 ಕ್ಷೇತ್ರಗಳ ಅಭ್ಯರ್ಥಿಗಳು ಯಾರು ಯಾರೆಂಬುದನ್ನು ವರಿಷ್ಠರೇ ನಿರ್ಧರಿಸುತ್ತಾರೆ. ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ಸೂಕ್ತ ಅಭ್ಯರ್ಥಿಗಳನ್ನು ಘೋಷಿಸಲಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.