ADVERTISEMENT

ಉಪಚುನಾವಣೆ | ಶಿಗ್ಗಾವಿಗೆ ಭರತ್‌, ಸಂಡೂರಿಗೆ ಬಂಗಾರು: ಬಿಜೆಪಿಯ ಅಚ್ಚರಿ ಆಯ್ಕೆ

ರಾಜ್ಯ ನಾಯಕರ ಜತೆ ಚರ್ಚಿಸದೇ ‘ಅಚ್ಚರಿ‘ ಕೊಟ್ಟ ಬಿಜೆಪಿ ವರಿಷ್ಠರು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 0:04 IST
Last Updated 20 ಅಕ್ಟೋಬರ್ 2024, 0:04 IST
<div class="paragraphs"><p>ಭರತ್‌ ಬೊಮ್ಮಾಯಿ,&nbsp;ಬಂಗಾರು ಹನುಮಂತು</p></div>

ಭರತ್‌ ಬೊಮ್ಮಾಯಿ, ಬಂಗಾರು ಹನುಮಂತು

   

ಬೆಂಗಳೂರು: ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ರಾಜ್ಯ ಘಟಕದ ಪ್ರಮುಖರು ಚರ್ಚೆ ನಡೆಸಿ, ಶಿಫಾರಸು ಮಾಡುವ ಮುನ್ನವೇ, ಎರಡು ಕ್ಷೇತ್ರಗಳ ಹುರಿಯಾಳು ಹೆಸರು ಘೋಷಿಸಿರುವ ಬಿಜೆಪಿ ವರಿಷ್ಠರು ಕರ್ನಾಟಕದ ನಾಯಕರನ್ನು ಅಚ್ಚರಿಗೆ ದೂಡಿದ್ದಾರೆ. 

ಸಂಸದ ಬಸವರಾಜ ಬೊಮ್ಮಾಯಿ ಪ್ರತಿನಿಧಿಸಿದ್ದ ಶಿಗ್ಗಾವಿಯಲ್ಲಿ, ಅವರ ಪುತ್ರ, ಉದ್ಯಮಿ ಭರತ್‌ ಬೊಮ್ಮಾಯಿಗೆ ಟಿಕೆಟ್ ನೀಡಿರುವ ಬಿಜೆಪಿ ವರಿಷ್ಠರು, ತಾವೇ ಟೀಕಿಸುತ್ತಿರುವ ಕುಟುಂಬ ರಾಜಕಾರಣದ ಪದ್ದತಿಗೆ ಮಣೆ ಹಾಕಿದ್ದಾರೆ. ಸಂಡೂರು ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡ ಮೋರ್ಚಾದ ಅಧ್ಯಕ್ಷ ಬಂಗಾರು ಹನುಮಂತು ಅವರಿಗೆ ಟಿಕೆಟ್ ನೀಡಲಾಗಿದೆ.

ADVERTISEMENT

ಚನ್ನಪಟ್ಟಣ ಸೇರಿದಂತೆ ಮೂರೂ ಕ್ಷೇತ್ರಗಳ ಮೈತ್ರಿ ಅಭ್ಯರ್ಥಿ ಆಯ್ಕೆ ಕುರಿತು ಚರ್ಚಿಸಿ, ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸಿ ಭಾನುವಾರ ವರಿಷ್ಠರಿಗೆ ಕಳುಹಿಸಲು ಬಿಜೆಪಿಯ ರಾಜ್ಯ ನಾಯಕರು ಶನಿವಾರ ಸಂಜೆ ಸಭೆ ಕರೆದಿದ್ದರು. ಮೂರು ಕ್ಷೇತ್ರಗಳಲ್ಲಿ ಎರಡು ಸ್ಥಾನ ಬಿಜೆಪಿಗೆ ಎಂಬುದು ಮೊದಲೇ ನಿಗದಿಯಾಗಿತ್ತು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ಚನ್ನಪಟ್ಟಣವನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕೇ ಅಥವಾ ಬಿಜೆಪಿಗೆ ಉಳಿಸಿಕೊಳ್ಳಬೇಕೇ ಎಂಬ ಚರ್ಚೆಯೂ ನಡೆದಿತ್ತು. ಹಿಂದೆ ಪರಾಜಿತರಾಗಿದ್ದ ಸಿ.ಪಿ. ಯೋಗೇಶ್ವರ್‌ಗೆ ಬಿಟ್ಟುಕೊಡಬೇಕು ಎಂದು ಬಿಜೆಪಿ ನಾಯಕರು ಪ್ರತಿಪಾದಿಸಿದ್ದರು.

ಶನಿವಾರ ಮಧ್ಯಾಹ್ನ ಸುದ್ದಿಗಾರರ ಜತೆ ಮಾತನಾಡಿದ್ದ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಭಾನುವಾರ ಪಟ್ಟಿ ಸಹಿತ ದೆಹಲಿಗೆ ತೆರಳಲಿದ್ದು, ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಸಮಾಲೋಚಿಸುವುದಾಗಿ ಹೇಳಿದ್ದರು. ಬೆಂಗಳೂರಿನಲ್ಲಿ ಸಭೆ ಆರಂಭವಾಗುವ ಹೊತ್ತಿಗೆ ಎರಡೂ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟವಾಗಿದೆ. ಟಿಕೆಟ್ ನೀಡುವ ವಿಷಯದಲ್ಲಿ ರಾಜ್ಯ ಘಟಕವನ್ನು ಲೆಕ್ಕಕ್ಕೇ ತೆಗೆದುಕೊಂಡಿಲ್ಲ ಎಂಬ ಚರ್ಚೆಯೂ ಶುರುವಾಗಿದೆ.

ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದ ಬಸವರಾಜ ಬೊಮ್ಮಾಯಿ, ಸುದ್ದಿಗಾರರ ಜತೆ ಮಧ್ಯಾಹ್ನ ಮಾತನಾಡಿದ್ದರು. ‘ಉದ್ಯಮಿಯೂ ಆದ ತಮ್ಮ ಪುತ್ರ ಭರತ್‌ಗೆ ವೈಯಕ್ತಿಕ ಕಾರಣಗಳಿಂದ ಶಿಗ್ಗಾವಿ ಕ್ಷೇತ್ರದ ಟಿಕೆಟ್‌ ನೀಡುವುದು ಬೇಡ ಎಂದು ವಿನಂತಿಸಿದ್ದೇನೆ. ಬದಲಿ ಆಯ್ಕೆ ಕುರಿತು ಮನವಿ ಮಾಡಿದ್ದೇನೆ’ ಎಂದಿದ್ದರು. ಅವರು ಹೇಳಿಕೆ ನೀಡಿದ ಕೆಲ ಗಂಟೆಗಳಲ್ಲೇ ಅವರ ಪುತ್ರನ ಹೆಸರನ್ನು ಬಿಜೆಪಿ ಪ್ರಕಟಿಸಿದೆ. 

ಸಂಡೂರು ಕ್ಷೇತ್ರದ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಸೇರಿದಂತೆ ಪಕ್ಷದ ಸ್ಥಳೀಯ ನಾಯಕರ ಅಭಿಪ್ರಾಯ ಪಡೆದು ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸುವ ಭರವಸೆಯನ್ನು ರಾಜ್ಯ ನಾಯಕರು ನೀಡಿದ್ದರು.

2023ರ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್‌ನ ತುಕಾರಾಂ ವಿರುದ್ಧ ಸೋಲುಕಂಡಿದ್ದ ಶಿಲ್ಪಾ ರಾಘವೇಂದ್ರ, ಅದೇ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಸ್ಥಾಪಿಸಿದ್ದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸ್ಪರ್ಧಿಸಿದ್ದ ದಿವಾಕರ್‌, 2018ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಬಂಗಾರು ಹನುಮಂತು, ಮಾಜಿ ಸಂಸದ ದೇವೇಂದ್ರಪ್ಪ ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ಅವರಲ್ಲಿ ಹನುಮಂತು ಅವರಿಗೆ ಟಿಕೆಟ್ ಸಿಕ್ಕಿದೆ.

ಶ್ರೀರಾಮುಲು ಅವರ ಒಂದು ಕಾಲದ ಶಿಷ್ಯ ಹನುಮಂತು 2023ರ ಚುನಾವಣೆಯಲ್ಲಿ ಕೂಡ್ಲಿಗಿ ಕ್ಷೇತ್ರದ ಟಿಕೆಟ್‌ ಸಿಗಲಿಲ್ಲ ಎನ್ನುವ ಕಾರಣಕ್ಕೆ ತಮ್ಮ ಗುರುವಿನ ವಿರುದ್ಧ ಮುನಿಸಿಕೊಂಡಿದ್ದರು. ನಂತರ ಜನಾರ್ದನ ರೆಡ್ಡಿ ಜತೆ ಗುರುತಿಸಿಕೊಂಡಿದ್ದರು. ಅವರ ಆಯ್ಕೆಯ ಹಿಂದೆ ರೆಡ್ಡಿ ಪ್ರಭಾವ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸಂಡೂರಿಗೆ ಅನ್ನಪೂರ್ಣ: 2 ಕ್ಷೇತ್ರಕ್ಕೆ ‘ಕೈ’ ಬಾಕಿ

ಉಪ ಚುನಾವಣೆ ನಡೆಯಲಿರುವ ಮೂರು ಕ್ಷೇತ್ರಗಳ ಪೈಕಿ ಸಂಡೂರಿನಿಂದ ಸಂಸದ ಇ. ತುಕಾರಾಂ ಅವರ ಪತ್ನಿ ಅನ್ನಪೂರ್ಣ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಮುಂದಾಗಿದೆ. ಆದರೆ, ಚನ್ನಪಟ್ಟಣ ಮತ್ತು ಶಿಗ್ಗಾವಿ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಾದು ನೋಡಲು ‘ಕೈ’ ನಾಯಕರು ನಿರ್ಧರಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶುಕ್ರವಾರ ರಾತ್ರಿ ಭೇಟಿ ಮಾಡಿದ್ದ ಕೆಲವು ಮುಖಂಡರು, ತುಕಾರಾಂ ಕುಟುಂಬದವರಿಗೆ ಟಿಕೆಟ್‌ ನೀಡಬಾರದೆಂದು ಆಗ್ರಹಿಸಿದ್ದರು. ಈ ಬೆಳವಣಿಗೆಯ ನಡುವೆಯೇ ಅನ್ನಪೂರ್ಣ ಅವರಿಗೆ ಟಿಕೆಟ್‌ ನೀಡಲು ಒಲವು ವ್ಯಕ್ತವಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಸಂಡೂರು ಟಿಕೆಟ್ ಕುರಿತು ಶನಿವಾರ ಪ್ರತಿಕ್ರಿಯಿಸಿರುವ ಸಚಿವ ಸಂತೋಷ್ ಲಾಡ್, ‘ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲವೂ ಬಗೆಹರಿದಿದೆ. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇವೆ. ಪಕ್ಷ ಯಾರಿಗೇ ಟಿಕೆಟ್ ಕೊಟ್ಟರೂ ಒಟ್ಟಿಗೆ ಕೆಲಸ ಮಾಡಬೇಕಿದೆ’ ಎಂದರು.

ಚನ್ನಪಟ್ಟಣ ಕ್ಷೇತ್ರದಿಂದ ಬಿಜೆಪಿ– ಜೆಡಿಎಸ್‌ ಅಭ್ಯರ್ಥಿಯಾಗಿ ಸಿ.ಪಿ. ಯೋಗೇಶ್ವರ್ ಕಣಕ್ಕಿಳಿದರೆ ಮಾಜಿ ಶಾಸಕ ಎಂ.ಸಿ. ಅಶ್ವಥ್ ಅಥವಾ ರಘುನಂದನ್ ರಾಮಣ್ಣ ಅವರಿಗೆ ಟಿಕೆಟ್ ನೀಡುವ ಬಗ್ಗೆ ಕಾಂಗ್ರೆಸ್‌ನಲ್ಲಿ ಚರ್ಚೆ ನಡೆದಿದೆ. ಸಿ.ಪಿ. ಯೋಗೇಶ್ವರ್ ಅವರು ‘ಮೈತ್ರಿ’ ಅಭ್ಯರ್ಥಿ ಆಗದಿದ್ದರೆ ಡಿ.ಕೆ. ಸುರೇಶ್‌ ಅವರನ್ನು ಹುರಿಯಾಳಾಗಿಸಲು ಚಿಂತನೆ ನಡೆದಿದೆ.

ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರಿಂದ ಶನಿವಾರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಪಕ್ಷದಿಂದ ಯಾರೇ ನಿಂತರೂ ನಾನೇ ಅಭ್ಯರ್ಥಿ ಎಂದು ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಹೇಳಿದ್ದೇನೆ’ ಎಂದರು.

‘ಚನ್ನಪಟ್ಟಣದಲ್ಲಿ ವಿರೋಧ ಪಕ್ಷದ ನಾಯಕರು ಹೆದರಿ ಶರಣಾಗುತ್ತಿದ್ದಾರೆ. ಅವರು ಇಷ್ಟೊಂದು ದುರ್ಬಲರಾಗುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ರಾತ್ರಿಯಿಡೀ ಸಭೆಗಳು ನಡೆದಿವೆ. ಜೆಡಿಎಸ್‌ನವರೇ ಸೀಟು ಬಿಟ್ಟುಕೊಡುತ್ತಿದ್ದಾರೆ ಎಂದು ಯಾರೋ ಹೇಳಿದರು. ಅದು ಎಷ್ಟು ಸತ್ಯವೋ ನನಗೆ ಗೊತ್ತಿಲ್ಲ’ ಎಂದರು.

ಶಿಗ್ಗಾವಿ ಟಿಕೆಟ್‌ ವಿಚಾರದಲ್ಲಿ ಡಿ.ಕೆ. ಶಿವಕುಮಾರ್‌ ಅವರು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮತ್ತು ಜಿಲ್ಲೆಯ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಟಿಕೆಟ್‌ ಆಕಾಂಕ್ಷಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಮಾಜಿ ಶಾಸಕ ಅಜ್ಜಂಫೀರ್‌ ಖಾದ್ರಿ, ಯಾಸೀರ್‌ ಖಾನ್‌ ಪಠಾಣ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಸೋಮಣ್ಣ ಬೇವಿನಮರದ, ಮಾಜಿ ಸಚಿವ ಆರ್‌. ಶಂಕರ್‌ ಟಿಕೆಟ್‌ಗಾಗಿ ಪ್ರಯತ್ನ ಮುಂದುವರಿಸಿದ್ದಾರೆ.

ಚನ್ನಪಟ್ಟಣ: ಎಚ್‌ಡಿಕೆ ನಿರ್ಧಾರಕ್ಕೆ

ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ಸಂಪೂರ್ಣ ಅಧಿಕಾರವನ್ನು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ನೀಡಲು ಶನಿವಾರ ನಡೆದ ಬಿಜೆಪಿ–ಜೆಡಿಎಸ್‌ ಸಮನ್ವಯ ಸಮಿತಿ ಸಭೆ ತೀರ್ಮಾನಿಸಿದೆ.

ಬೆಂಗಳೂರಿನಲ್ಲಿ ಶನಿವಾರ ಸಂಜೆ ಈ ಕುರಿತು ಎರಡೂ ಪಕ್ಷಗಳ ನಾಯಕರು ಮಾತುಕತೆ ನಡೆಸಿದರು. ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ, ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ, ಶಾಸಕಾಂಗ ಪಕ್ಷದ ನಾಯಕ ಸುರೇಶ ಬಾಬು, ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್ ಹಾಗೂ ನಿಖಿಲ್ ಕುಮಾರಸ್ವಾಮಿ ಪಾಲ್ಗೊಂಡಿದ್ದರು.

‘ಇದು ಜೆಡಿಎಸ್ ಪ್ರತಿನಿಧಿಸುವ ಸ್ಥಾನವಾಗಿದ್ದು, ನೀವೇ ಕುಳಿತು ತೀರ್ಮಾನ ಮಾಡಿಕೊಳ್ಳಿ’ ಎಂದು ವಿಜಯೇಂದ್ರ ಹಾಗೂ ಅಶೋಕ ಸಲಹೆ ನೀಡಿದರು ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.