ಬೆಂಗಳೂರು/ಬೈಲಹೊಂಗಲ: ವಿಧಾನಸೌಧದ ಎದುರು ಸೋಮವಾರ ಬೆಳಿಗ್ಗೆ ಅಪಘಾತ ಸಂಭವಿಸಿದ್ದು, ಬೈಲಹೊಂಗಲ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಹಾಂತೇಶ್ ಕೌಜಲಗಿ ಅವರ ಕಾರು ಭಾಗಶಃ ಜಖಂಗೊಂಡಿದೆ.
‘ಬೆಳಿಗ್ಗೆ 9.30 ಗಂಟೆ ಸುಮಾರಿಗೆ ಎರಡು ಕಾರುಗಳ ನಡುವೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಶಾಸಕ ಮಹಾಂತೇಶ್ ಅಪಾಯದಿಂದ ಪಾರಾಗಿದ್ದಾರೆ’ ಎಂದು ಕಬ್ಬನ್ ಪಾರ್ಕ್ ಸಂಚಾರ ಠಾಣೆ ಪೊಲೀಸರು ಹೇಳಿದರು.
‘ಮಹಾಂತೇಶ್ ಅವರು ಸರ್ಕಾರಿ ಕಾರಿನಲ್ಲಿ ವಿಧಾನಸೌಧದಿಂದ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆಗೆ ಬಂದಿದ್ದರು. ಸರ್ಜಾಪುರದ ಅಜಯ್ ಎಂಬುವವರು ಇದೇ ಮಾರ್ಗದಲ್ಲಿ ಕಾರಿನಲ್ಲಿ ಹೊರಟಿದ್ದರು. ಅಜಯ್ ಅತೀ ವೇಗದಲ್ಲಿ ಕಾರು ಚಲಾಯಿಸಿದ್ದರು. ಅವರ ಕಾರು, ಶಾಸಕರ ಕಾರಿಗೆ ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಎರಡೂ ಕಾರುಗಳು ಭಾಗಶಃ ಜಖಂಗೊಂಡವು’ ಎಂದರು.
‘ಅಪಘಾತಕ್ಕೆ ಕಾರಣ ಎನ್ನಲಾದ ಅಜಯ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕಾರು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ಅಪಘಾತದ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಮಹಾಂತೇಶ್ ಕೌಜಲಗಿ, ‘ಸಣ್ಣ ಪ್ರಮಾಣದಲ್ಲಿ ಅಪಘಾತವಾಗಿದ್ದು, ನಾನು ಆರೋಗ್ಯವಾಗಿದ್ದೇನೆ. ಕುಟುಂಬಸ್ಥರು ಹಾಗೂ ಕ್ಷೇತ್ರದ ಜನತೆ ಭಯಪಡುವ ಅವಶ್ಯಕತೆ ಇಲ್ಲ. ಚೇತರಿಸಿಕೊಂಡ ಬಳಿಕ ಕ್ಷೇತ್ರಕ್ಕೆ ಬರುವೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.