ಮೈಸೂರು/ಹುಣಸೂರು: ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಮರು ಸೇರ್ಪಡೆಯಾಗುವುದು ಬಹುತೇಕ ಖಚಿತಪಟ್ಟಿದೆ.
ಹುಣಸೂರು ಉಪಚುನಾವಣೆ ದೃಷ್ಟಿಯಿಂದ ಬಿಜೆಪಿಯ ಹಿರಿಯ ಮುಖಂಡರು ಈಗಾಗಲೇ ವಿಜಯಶಂಕರ್ ಜತೆ ಚರ್ಚಿಸಿದ್ದು, ಸೇರ್ಪಡೆ ದಿನಾಂಕ ನಿಗದಿಯಾಗುವುದಷ್ಟೇ ಬಾಕಿ ಉಳಿದಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.
ಈ ರಾಜಕೀಯ ಬೆಳವಣಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಹಿನ್ನಡೆ ಉಂಟು ಮಾಡಲಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ವಿಜಯಶಂಕರ್ ಬಿಜೆಪಿ ತೊರೆದಾಗ, ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಕರೆ ತಂದು ಮೈಸೂರು ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡಿಸಿದ್ದರು.
ಕಾಂಗ್ರೆಸ್‌ನಲ್ಲಿ ಭವಿಷ್ಯ ಕಷ್ಟಸಾಧ್ಯ: ‘ಕಾಂಗ್ರೆಸ್‌ನಲ್ಲಿ ಭವಿಷ್ಯದ ರಾಜಕಾರಣ ಕಷ್ಟಸಾಧ್ಯವಾಗಿದ್ದು, ಈ ಕಾಲಘಟದಲ್ಲಿ ಸೂಕ್ತ ತೀರ್ಮಾನ ಅನಿವಾರ್ಯವಾಗಿದೆ. ಕ್ಷೇತ್ರದ ಮತದಾರರ ತೀರ್ಮಾನಕ್ಕೆ ಬದ್ಧವಾಗಲು ಸಿದ್ದನಿದ್ದೇನೆ’ ಎಂದು ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಶುಕ್ರವಾರ ಹುಣಸೂರಿನ ತಮ್ಮ ಸ್ವಗೃಹದಲ್ಲಿ ನಡೆಸಿದ ಬೆಂಬಲಿಗರು, ಅಭಿಮಾನಿಗಳ ಸಭೆಯಲ್ಲಿ ಹೇಳಿದರು.
‘ಪ್ರಸ್ತುತ ಕಾಂಗ್ರೆಸ್‌ನಲ್ಲಿ ಭವಿಷ್ಯದ ರಾಜಕಾರಣಕ್ಕೆ ದಾರಿಯಿಲ್ಲ ಎಂಬ ಸೂಚನೆ ಸಿಕ್ಕುತ್ತಿದ್ದು, ಎಚ್ಚೆತ್ತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಯಾವೊಂದು ಸ್ಥಾನಮಾನ ಸಿಗುವುದು ಕಷ್ಟ ಸಾಧ್ಯ ಎಂಬುದು ಮನವರಿಕೆಯಾಗಿದೆ. ಇಂಥಹ ಕಾಲಘಟ್ಟದಲ್ಲಿ ಮೌನವಾಗಿ ಉಳಿಯುವುದು ಅಸಾಧ್ಯವಾಗಿದೆ’ ಎಂದು ತಿಳಿಸಿದರು.
‘ಮಾತೃ ಪಕ್ಷದಿಂದ ಮತ್ತೆ ಆಹ್ವಾನ ಬಂದಿದೆ. ಹೋಗಬೇಕೆ, ಬೇಡವೆ ? ಎಂಬ ವಿಷಯದಲ್ಲಿ ಗೊಂದಲ ನಿರ್ಮಾಣವಾಗಿದೆ. ಹೀಗಾಗಿ ರಾಜಕೀಯ ಜೀವನ ನೀಡಿದ ಕ್ಷೇತ್ರದ ಮತದಾರರ ಅಭಿಪ್ರಾಯ ಸಂಗ್ರಹಕ್ಕೆ ಈ ಸಭೆ ಕರೆದಿರುವೆ. ರಾಜ್ಯ ರಾಜಕಾರಣದಲ್ಲೇ ಮುಂದುವರೆಯುವೆ’ ಎಂದು ವಿಜಯಶಂಕರ್ ಹೇಳಿದರು.
ಕುರುಬ ಸಮಾಜದ ಅಧ್ಯಕ್ಷ ಕುನ್ನೇಗೌಡ, ಎ.ಪಿ.ಸ್ವಾಮಿ, ವಾಸೇಗೌಡ, ರಮೇಶ್ ಧರ್ಮಾಪುರ, ರಮೇಶ್, ಸತೀಶ್, ಗಣೇಶ್, ಸಿಂಡೇನಹಳ್ಳಿ ಬಸವರಾಜ್, ಕಮಲಮ್ಮ ಸೇರಿದಂತೆ ಹಲವರು ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಹಲವರು ಒಕ್ಕೊರಲಿನಿಂದ ಬಿಜೆಪಿಗೆ ಸೇರ್ಪಡೆಯಾಗುವಂತೆ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.