ಬೆಂಗಳೂರು: ರಾಜ್ಯ ಶಿಕ್ಷಣ ನೀತಿಯ ತಾತ್ಕಾಲಿಕ ವರದಿಯ ಮೂಲಕ ಶಿಕ್ಷಣದ ಕ್ಷೇತ್ರದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ದೂರಿದರು.
ವಿದ್ಯಾರ್ಥಿಗಳ ಹಿತಕ್ಕೆ ಧಕ್ಕೆ ತರುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣದ ಗುಣಮಟ್ಟ ಹೆಚ್ಚಳ, ಅದರಲ್ಲಿನ ನ್ಯೂನತೆಗಳನ್ನು ಹೋಗಲಾಡಿಸಲು ಪೂರಕವಾಗಿದೆ. ಸಾಕಷ್ಟು ಪೂರ್ವ ತಯಾರಿ ಮಾಡಿ, ಆರು ವರ್ಷಕ್ಕಿಂತ ಹೆಚ್ಚು ಸಮಯ ಸಮಾಲೋಚನೆ ಬಳಿಕ ಜಾರಿಗೊಳಿಸಲಾಗಿದೆ. ಅದರ ಅನುಷ್ಠಾನ ಆಗಿ ಮೂರು ವರ್ಷಗಳಾಗಿದ್ದು, 2020 ರಲ್ಲಿ ಕ್ರಿಯಾ ಯೋಜನೆಯನ್ನು ಸಚಿವ ಸಂಪುಟ ಒಪ್ಪಿದೆ. ಅದರ ಆಧಾರದಲ್ಲೇ ಅನುಷ್ಠಾನ ಕಾರ್ಯ ನಡೆದಿದೆ ಎಂದರು.
ಈಗಿನ ಕಾಲಕ್ಕೆ ಅನುಗುಣವಾಗಿ 4 ವರ್ಷದ ಪದವಿ ಶಿಕ್ಷಣ ಅತ್ಯಂತ ಅವಶ್ಯಕ. ಕೆಲವು ಸಂಸ್ಥೆಗಳು ಇದಕ್ಕೆ ಪೂರಕ ವ್ಯವಸ್ಥೆಗಳನ್ನು ಹೊಂದಿವೆ. ಸಂಶೋಧನೆ ಸಹಿತ ಹಾಗೂ ಸಂಶೋಧನೆ ರಹಿತ ಹಾನರ್ಸ್ ಮಾಡಲು ಅವಕಾಶವಿದೆ. ಅರ್ಧದಲ್ಲೇ ಕಲಿಕೆ ಕೈಬಿಟ್ಟ ವಿದ್ಯಾರ್ಥಿಗಳು ಅವರ ನೆರವಿಗೆ ಬರುವ ಕಾರ್ಯವನ್ನು ಮಲ್ಟಿ ಎಂಟ್ರಿ, ಮಲ್ಟಿ ಎಕ್ಸಿಟ್ ವ್ಯವಸ್ಥೆ ಮಾಡಲಿದೆ. ನ್ಯಾಷನಲ್ ಸ್ಕಿಲ್ ಕ್ವಾಲಿಫಿಕೇಶನ್ ಫ್ರೇಮ್ ವರ್ಕ್ ಮೂಲಕ ಅರ್ಧದಲ್ಲಿ ಕಲಿಕೆ ಕೈಬಿಟ್ಟ ವಿದ್ಯಾರ್ಥಿಗಳ ಸಾಮರ್ಥ್ಯ ಅಳೆಯಲು ಸಾಧ್ಯವಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.