ADVERTISEMENT

ಸಿಬಿಐ ತನಿಖೆಗೆ ಡಿಕೆಶಿ ಹಿಂದೇಟೇಕೆ: ಶಾಸಕ ಅಶ್ವತ್ಥನಾರಾಯಣ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2023, 7:35 IST
Last Updated 25 ನವೆಂಬರ್ 2023, 7:35 IST
ಡಾ. ಸಿ.ಎನ್. ಅಶ್ವತ್ಥನಾರಾಯಣ
ಡಾ. ಸಿ.ಎನ್. ಅಶ್ವತ್ಥನಾರಾಯಣ   

ಕಲಬುರಗಿ: ಉಪ‌ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆದಾಯಕ್ಕೆ ಮೀರಿದ ಆಸ್ತಿ ಗಳಿಸಿದ್ದಾರೆ ಎಂಬ ಆರೋಪದ ಮೇರೆಗೆ ಸಿಬಿಐ ತನಿಖೆ ನಡೆಸುತ್ತಿದೆ. ಇದೀಗ ತನಿಖೆಗೆ ನೀಡಿದ್ದ ಅನುಮತಿಯನ್ನು ಅವರದೇ ಸರ್ಕಾರ ವಾಪಸ್ ಪಡೆದಿದೆ. ಹೆಚ್ಚು ಆದಾಯ ಗಳಿಸಿಲ್ಲವಾದರೆ ಶಿವಕುಮಾರ್ ತನಿಖೆಗೆ ಏಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಪ್ರಶ್ನಿಸಿದರು.

ಜಿಲ್ಲೆಯ ಕಡಗಂಚಿ ಗ್ರಾಮಕ್ಕೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತೆ ಸಿಬಿಐ ತನಿಖೆಗೆ ಅನುಮತಿ ನೀಡುವಾಗ ಸ್ಪೀಕರ್ ಅನುಮತಿ ಪಡೆದಿಲ್ಲ ಎಂದು ಸರ್ಕಾರ ವಾದ ಮಾಡುತ್ತದೆ. ಕಾನೂನು ಪ್ರಕ್ರಿಯೆ ಸರಿಯಾಗಿ ನಡೆಯದಿದ್ದರೆ ನ್ಯಾಯಾಲಯ ಪ್ರಕರಣವನ್ನು ವಿಚಾರಣೆಗೇ ಅಂಗೀಕರಿಸುತ್ತಿರಲಿಲ್ಲ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಪ್ಪದೆ ಇರುವ ಮೂಲಕ ರಾಜ್ಯ ಸರ್ಕಾರ ತಪ್ಪು ಹೆಜ್ಜೆ ಇಟ್ಟಿದೆ. ಸಿದ್ದರಾಮಯ್ಯ ಅವರಿಗೆ ಶಿಕ್ಷಣ ನೀತಿಯ ಪಠ್ಯಕ್ರಮದ ಮಹತ್ವವೇ ಅರ್ಥವಾಗಿಲ್ಲ ಎಂದು ಟೀಕಿಸಿದರು.

ADVERTISEMENT

ಪಕ್ಷದ ಮುಖಂಡರಾದ ವಿ. ಸೋಮಣ್ಣ ಸೇರಿದಂತೆ ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ತಮ್ಮ ಭಾವನೆಗಳನ್ನು ಹೈಕಮಾಂಡ್ ಎದುರು ವ್ಯಕ್ತಪಡಿಸಲು ಎಲ್ಲರಿಗೂ ಅವಕಾಶವಿದೆ ಎಂದು ಪ್ರತಿಕ್ರಿಯಿಸಿದರು.

ಐದು ರಾಜ್ಯಗಳ ಚುನಾವಣೆಗಳಿಗೆ ದುಡ್ಡು ಹೊಂದಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ಗುತ್ತಿಗೆದಾರರು, ಅಧಿಕಾರಿಗಳ ಜೇಬಿಗೆ ಕೈ ಹಾಕಿದೆ. ಹಣವನ್ನು ಚುನಾವಣೆಯಲ್ಲಿ ನೀರಿನಂತೆ ಹರಿಸುತ್ತಿದೆ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.