ADVERTISEMENT

ಬಿಎಸ್‌ವೈ ಪ್ರಕರಣ | ಪರಕಾಯ ಪ್ರವೇಶ ಮಾಡಿ, ಜೀವ ಕೊಟ್ಟವರು ಯಾರು?: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 15:39 IST
Last Updated 14 ಜೂನ್ 2024, 15:39 IST
ಸಿ.ಟಿ.ರವಿ
ಸಿ.ಟಿ.ರವಿ   

ಬೆಂಗಳೂರು: ‘ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ವಿರುದ್ಧದ ಪ್ರಕರಣದಲ್ಲಿ ಆ ರೀತಿ ಏನೂ ನಡೆದಿಲ್ಲ ಎಂದು ಪೊಲೀಸರು ತಿಳಿಸಿ, ಬಿ ರಿಪೋರ್ಟ್ ಹಾಕುವ ಹಂತದಲ್ಲಿರುವಾಗ ಏಕಾಏಕಿ ಈ ಪ್ರಕರಣದಲ್ಲಿ ಪರಕಾಯ ಪ್ರವೇಶ ಮಾಡಿ, ಜೀವ ಕೊಟ್ಟವರು ಯಾರು’ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಪ್ರಶ್ನಿಸಿದರು.

‘ರಾಜಕೀಯ ಕಾರಣಕ್ಕೆ ಈ ಪ್ರಕರಣವನ್ನು ಬಳಸುವ ಅನುಮಾನ ವ್ಯಕ್ತವಾಗಿದೆ. ಹಾಗಿಲ್ಲದೆ ಇದ್ದರೆ 3 ತಿಂಗಳ ಕಾಲ ಇಲ್ಲದ ಜೀವ ಈಗ ಯಾಕೆ ಬಂತು’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕೇಳಿದರು.

‘ದೂರು ದಾಖಲಿಸಿದ ಮಹಿಳೆ ಸುಮಾರು 50ಕ್ಕೂ ಹೆಚ್ಚು ಗಣ್ಯರ ಮೇಲೆ ದೂರು ನೀಡಿದ್ದರು ಎಂದು  ಗೃಹ ಸಚಿವರೇ ಸಾರ್ವಜನಿಕವಾಗಿ ಹೇಳಿದ್ದರು. ‘ಮಾನಸಿಕವಾಗಿ ಸ್ವಲ್ಪ..’ ಎಂಬ ಹೇಳಿಕೆಯನ್ನೂ ನೀಡಿದ್ದರು’ ಎಂದರು.

ADVERTISEMENT

ನಿಲುವು ಬದಲಾಗಲು ಕಾರಣ ಏನು?

‘ಗೃಹ ಸಚಿವರ ಹಿಂದಿನ ಹೇಳಿಕೆಗೂ, ಇವತ್ತಿನ ಹೇಳಿಕೆಗೂ ಬಹಳಷ್ಟು ವ್ಯತ್ಯಾಸವಿದೆ. ಆವತ್ತು ಅವರು ದೂರದಾರರ ವ್ಯಕ್ತಿತ್ವವನ್ನೇ ಅನಾವರಣಗೊಳಿಸಿದ್ದರು. ಈಗ ಅಗತ್ಯವಿದ್ದರೆ ಯಡಿಯೂರಪ್ಪ ಅವರನ್ನು ಬಂಧಿಸಲು ಸಿದ್ದ ಎಂದು ಹೇಳಿದ್ದಾರೆ. ಸರ್ಕಾರದ ನಿಲುವು ಬದಲಾಗಲು ಕಾರಣವೇನು? ಲೋಕಸಭಾ ಚುನಾವಣೆಯಲ್ಲಿನ ಸೋಲು ಕಾರಣವೇ? ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ತವರು ಜಿಲ್ಲೆಗಳಲ್ಲೇ ಸೋತಿದ್ದು ಕಾರಣ ಇರಬಹುದೇ’ ಎಂದು ಪ್ರಶ್ನಿಸಿದರು.

‘ನಮ್ಮ ಪಕ್ಷದ ಮೇಲಿನ ಸುಳ್ಳು ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ರಾಹುಲ್‌ಗಾಂಧಿಯವರು ನ್ಯಾಯಾಲಯದ ಕಟಕಟೆಗೆ ಬಂದು ನಿಲ್ಲಬೇಕಾಯಿತು. ಈ ಕಾರಣಕ್ಕಾಗಿ ಹತಾಶೆಯಿಂದ ಯಡಿಯೂರಪ್ಪ ಅವರ ಮೇಲೆ ರಾಜಕೀಯ ದುರುದ್ದೇಶದಿಂದ ಸೇಡು ತೀರಿಸಿಕೊಳ್ಳಲು ಸಂಚು ಮಾಡಿರಬಹುದು’ ಎಂದು ರವಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಮುಖ್ಯಸಚೇತಕ ಎನ್‌.ರವಿಕುಮಾರ್, ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ವಕ್ತಾರ ಡಾ.ನರೇಂದ್ರ ರಂಗಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.