ಬೆಂಗಳೂರು: ‘ಚಿಕ್ಕಮಗಳೂರು ಜಿಲ್ಲೆಯ ಶ್ರೀಗುರು ದತ್ತಾತ್ರೇಯ ದೇವರ ಹೆಸರಿನ 1,860 ಎಕರೆ ಜಾಗ ಇರುವ ದಾಖಲೆ ಇದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಜಾಗವನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಅಕ್ರಮ ಮಂಜೂರಾತಿ ರದ್ದು ಮಾಡಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಗ್ರಹಿಸಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಮತೀಯ ರಾಜಕೀಯದ ಜೊತೆಗೆ ಆಸ್ತಿ ಹೊಡೆಯುವ ಸಂಚು ಇತ್ತು ಎಂಬುದು ಮೇಲ್ನೋಟಕ್ಕೆ ಅನಿಸುತ್ತಿದೆ. ಅಕ್ರಮ ಮಂಜೂರಾತಿ ರದ್ದುಗೊಳಿಸಿ ದತ್ತಾತ್ರೇಯ ದೇವರ ಹೆಸರಿನಲ್ಲಿ ಜಮೀನು ಕಾಯ್ದಿರಿಸಬೇಕು. ತನಿಖೆಗೆ ರಾಜ್ಯ ಮಟ್ಟದ ಅಧಿಕಾರಿಗಳನ್ನು ನೇಮಿಸಬೇಕು’ ಎಂದು ಒತ್ತಾಯಿಸಿದರು.
‘ದತ್ತ ಪೀಠ ವಿಚಾರದಲ್ಲಿ ನಮ್ಮ ಸರ್ಕಾರ ಮತ್ತು ಪಕ್ಷ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ನ್ಯಾಯಾಲಯದ ಆದೇಶದ ಅನುಗುಣವಾಗಿ ಸಂಪುಟ ಉಪ ಸಮಿತಿಯ ನಿರ್ಣಯದ ಶಿಫಾರಸು ಅಂಗೀಕರಿಸಿದ್ದೇವೆ. ಅದರಂತೆ ವ್ಯವಸ್ಥಾಪನಾ ಸಮಿತಿಯನ್ನು ಸರ್ಕಾರ ನೇಮಕ ಮಾಡಿದೆ. ಅರ್ಚಕರ ನೇಮಕಕ್ಕೆ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ. ನಾಲ್ಕು ದಶಕಗಳ ಹೋರಾಟದ ಈಡೇರಿದ ಹಿನ್ನೆಲೆಯಲ್ಲಿ ಈ ಬಾರಿ ವೈಭವದ ದತ್ತ ಜಯಂತಿ ಆಚರಿಸುತ್ತೇವೆ’ ಎಂದರು.
ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ: ‘ಗುಜರಾತ್‌ನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಶತಸಿದ್ಧ. ಹಿಮಾಚಲ ಪ್ರದೇಶದಲ್ಲೂ ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ. ಗುಜರಾತ್ ಚುನಾವಣಾ ಫಲಿತಾಂಶ ಲೋಕಸಭೆ ಚುನಾವಣೆಗೆ ದಿಕ್ಸೂಚಿ’ ಎಂದು ಸಿ.ಟಿ. ರವಿ ಹೇಳಿದರು.
‘ಕಾಂಗ್ರೆಸ್‌ನ ಅಳಿದುಳಿದ ಪಳೆಯುಳಿಕೆ 2024ರ ವೇಳೆಗೆ ನಶಿಸಿಹೋಗಲಿದೆ. ಕಾಂಗ್ರೆಸ್‌ನವರದ್ದು ರಾಜಕೀಯ ನಿಮಿತ್ತಂ ಬಹುಕೃತ ವೇಷಂ. ಇವತ್ತಿನ ರಾಹುಲ್ ಗಾಂಧಿ ವೇಷ ಅದರಲ್ಲಿ ಒಂದು. ರಾಹುಲ್ ಗಾಂಧಿಯವರ ಈ ವೇಷ ನೋಡಿ ಸಿದ್ದರಾಮಯ್ಯ ಅವರಿಗೆ ಏನು ಅನಿಸುತ್ತದೆ ಎಂದು ಹೇಳಲಿ. ಊಸರವಳ್ಳಿಯಂತೆ ಬಣ್ಣ ಬದಲಾಯಿಸುವವರ ಬಗ್ಗೆ ಏನು ಅನಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಲಿ’ ಎಂದರು.
‘ಸಿದ್ದರಾಮಯ್ಯ ಅವರ ದೃಷ್ಟಿಯಲ್ಲಿ ಆರೆಸ್ಸೆಸ್ ಕಮ್ಯೂನಲ್. ಬಾಂಬ್ ಹಾಕುವವರು ಸೆಕ್ಯುಲರ್. ಸಿದ್ದರಾಮಯ್ಯ ಅವರ ಜಾತ್ಯತೀತ ಹಣೆಬರಹ ಎಲ್ಲರಿಗೂ ಗೊತ್ತಾಗಿದೆ. ಹೋದಲ್ಲೆಲ್ಲ ನಾನು ಮುಖ್ಯಮಂತ್ರಿ ಅಂತಾರೆ. ತಾವು ಸಮಾಜವಾದಿ, ಜಾತ್ಯತೀತವಾದಿ ಎಂದು ಹೇಳುತ್ತಾರೆ. ಆದರೆ, ಸಿದ್ದರಾಮಯ್ಯ ವಾಸ್ತವವಾಗಿ ಮಜಾವಾದಿ. ಬೇರೆಯವರನ್ನು ಮುಗಿಸಲು ಸಿದ್ದರಾಮಯ್ಯ ಜಾತಿ ಗುರಾಣಿ ಬಳಸಿಕೊಳ್ಳುತ್ತಿದ್ದಾರೆ’ ಎಂದರು.
‘ಹಿಂದೂವಾದವೇ ಕಮ್ಯೂನಲ್ ಎಂದಾದರೆ ನಾನೊಬ್ಬ ಹಿಂದೂವಾದಿ. ಆ ವಿಚಾರದ ಪ್ರತಿಪಾದಕ ನಾನು. ಪರಮೇಶ್ವರ ಸೋತಿದ್ದು ಹೇಗೆ ಎಂದು ಅವರಿಗೇ ಗೊತ್ತು. ಪರಮೇಶ್ವರ ಅವರನ್ನು ಸೋಲಿಸಿದ್ದು ಯಾರು? ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ’ ಎಂದರು.
‘ಮೋದಿ ಆಧುನಿಕ ಭಸ್ಮಾಸುರ’ ಎಂಬ ಕಾಂಗ್ರೆಸ್ ಟೀಕೆ ವಿಚಾರ, ‘ಹೌದು ಭ್ರಷ್ಟರ, ಕೆಟ್ಟವರ ಪಾಲಿಗೆ ಮೋದಿ ಭಸ್ಮಾಸುರ. ಶ್ರೀಮನ್ನಾರಾಯಣನಂತೆ ಮೋದಿಯವರು ರಕ್ಷಕ. ಜನರ ಪಾಲಿಗೆ ಮೋದಿ ಕಾಮಧೇನು’ ಎಂದರು.
ಬಿಜೆಪಿಯಲ್ಲಿ ರೌಡಿ ರಾಜಕಾರಣ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ರೌಡಿ ಪಟ್ಟಿಯಲ್ಲಿ ಇದ್ದವರನ್ನು ರೌಡಿಗಳು ಎಂದು ಪಟ್ಟ ಕಟ್ಟಲು ನಾವು ತಯಾರಿಲ್ಲ. ನಮ್ಮಂಥವರನ್ನು, ನಮ್ಮ ಕೆಲವು ಕಾರ್ಯಕರ್ತರನ್ನು ರಾಜಕೀಯ ಕಾರಣಕ್ಕೆ ರೌಡಿಗಳು ಎಂದು ಕೇಸ್ ಹಾಕಿದಾರೆ. 90ರ ದಶಕದಲ್ಲಿ ಪೊಲೀಸ್ ಠಾಣೆ ಎದುರು ನನ್ನ ಫೋಟೊ ಹಾಕಿದ್ದರು. ಅದನ್ನು ರಾಜಕೀಯ ಕಾರಣಕ್ಕೆ ಕಾಂಗ್ರೆಸ್ ಮಾಡಿತ್ತು’ ಎಂದರು.
‘ನಾವು ರೌಡಿಗಳನ್ನು ಸೇರಿಸಿಕೊಂಡಿಲ್ಲ ಎಂದು ನಮ್ಮ ಪಕ್ಷದ ಅಧ್ಯಕ್ಷರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ನಟೋರಿಯಸ್ ರೌಡಿಗಳನ್ನು ಸೇರಿಸಿಕೊಂಡು ವಿಧಾನಸೌಧದ ಮೂರನೇ ಮಹಡಿಯಲ್ಲಿ ಮೀಟಿಂಗ್ ಮಾಡುತ್ತಿದ್ದರು. ನಾವು ಆ ರೀತಿ ಏನಾದರೂ ಮಾಡಿದ್ದೇವೆಯಾ’ ಎಂದೂ ಪ್ರಶ್ನಿಸಿದರು.
‘ನಮ್ಮದು ರಾಷ್ಟ್ರೀಯ ಪಕ್ಷ. ಪ್ರವಾಹದ ಜತೆಗೆ ನೀರೂ ಬರುತ್ತದೆ. ಕೆಸರು, ಕಸಕಡ್ಡಿ ಬರುತ್ತದೆ. ಮುಂದೆ ಎಲ್ಲವನ್ನೂ ಫಿಲ್ಟರ್ ಮಾಡುತ್ತೇವೆ. ನಮ್ಮ ನೀತಿ, ನಿಯತ್ತು ಬದಲಾಗಿಲ್ಲ. ತಂತ್ರಗಾರಿಕೆ ಬದಲಾಗುತ್ತದೆ. ನಾವು ಡಿ.ಕೆ. ಶಿವಕುಮಾರ್ ಅವರನ್ನು ಕೊತ್ವಾಲ್ ರಾಮಚಂದ್ರನ ಶಿಷ್ಯ ಎಂದು ಕರೆದಿಲ್ಲ. ಹಾಗಂತ ಕರೆದಿದ್ದು, ‘ಆ ದಿನಗಳು’ ಚಿತ್ರದ ಅಗ್ನಿಶ್ರೀಧರ್. ನಾನು ಡಿಕೆಶಿಗೆ ರೌಡಿ, ಮಾಜಿ ರೌಡಿ ಎಂದು ಕರೆಯಲ್ಲ‘ ಎಂದರು.
ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ಪ್ರತಿಕ್ರಿಯಿಸಿದ ರವಿ, ‘ಅದನ್ನು ಜಾರಿ ಮಾಡುತ್ತೇವೆಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ. ಬೊಮ್ಮಾಯಿ ಹೇಳಿಕೆ ಸ್ವಾಗತಿಸುತ್ತೇನೆ. ಬಹಳ ವರ್ಷಗಳಿಂದ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಆಗ್ರಹಿಸುತ್ತಿದ್ದೇವೆ. ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಕಾಂಗ್ರೆಸ್, ಜೆಡಿಎಸ್ ನಾಯಕರು ಏನಂತಾರೆ? ಅವರ ಅಭಿಪ್ರಾಯ ಏನು?’ ಎಂದರು.
ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಎರಡೂ ರಾಜ್ಯಗಳ ನಡುವೆ ಸೌಹಾರ್ದಯುತ ಸಂಬಂಧ ಅಗತ್ಯ. ನಮ್ಮ, ಅವರ ಸಂಸ್ಕೃತಿ ಒಂದೇ. ಭಾಷೆಗಳ ನಡುವೆಯೂ ಸಂಬಂಧ ಇದೆ. ಸಂಬಂಧ ಗಟ್ಟಿ ಮಾಡುವ ಕೆಲಸ ಮಾಡಬೇಕು. ಸಂಬಂಧ ಗಟ್ಟಿಗೊಳಿಸಬೇಕು. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಡಿಸೆಂಬರ್ ನಂತರ ನಮ್ಮ ಪಕ್ಷ ಕರ್ನಾಟಕ ಕಡೆಗೆ ಗಮನ ಕೊಡಲಿದೆ. ಜನಸಂಕಲ್ಪ ಯಾತ್ರೆ ಈಗ ನಡೆಯುತ್ತಿದೆ. ಜನಸಂಕಲ್ಪ ಬಳಿಕ ನಮ್ಮ ವಿಜಯಸಂಕಲ್ಪ ಯಾತ್ರೆ ನಡೆಯಲಿದೆ. 150 ಸ್ಥಾನ ಗೆಲ್ಲಲು ಏನೆಲ್ಲ ತಂತ್ರ ಮಾಡಬೇಕೋ ಅದೆಲ್ಲವನ್ನು ಮಾಡುತ್ತೇವೆ. ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯಕ್ಕೆ ಕರೆದುಕೊಂಡು ಬರುತ್ತೇವೆ. 150 ಗಡಿ ದಾಟಲು ನಮ್ಮ ಮುಂದೆ ಇರುವ ಎಲ್ಲ ತಂತ್ರಗಳನ್ನು ನಾವು ಬಳಸಿಕೊಳ್ಳುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.