ಬೆಂಗಳೂರು: ರಾಜ್ಯದಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ಸಿ.ಟಿ ಸ್ಕ್ಯಾನ್‌ಗೆ ಗರಿಷ್ಠ ₹ 1,500 ಮತ್ತು ಎದೆಯ ಡಿಜಿಟಲ್ ಅಥವಾ ಸಾಮಾನ್ಯ ಸ್ವರೂಪದ ಎಕ್ಸ್‌ರೇಗೆ ಗರಿಷ್ಠ ₹ 250 ದರ ನಿಗದಿಪಡಿಸಿ ಆರೋಗ್ಯ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.
ಕೋವಿಡ್ ರೋಗಿಗಳಲ್ಲಿ ಶ್ವಾಸಕೋಶದ ಸೋಂಕಿನ ಪ್ರಮಾಣ ತಿಳಿಯಲು ಹೆಚ್ಚಿನ ರೋಗಿಗಳಿಗೆ ಸಿ.ಟಿ ಸ್ಕ್ಯಾನ್ ಮತ್ತು ಎಕ್ಸ್‌ರೇ ಮಾಡಿಸಲಾಗುತ್ತಿದೆ. ಸಾಮಾನ್ಯ ಸಂದರ್ಭಗಳಲ್ಲಿ ₹ 2,000ದಿಂದ ₹ 3,000 ಇದ್ದ ಸಿ.ಟಿ ಸ್ಕ್ಯಾನ್ ದರ ಇದೀಗ ₹ 6,000ದಿಂದ ₹ 8,000ವರೆಗೆ ಏರಿಕೆಯಾಗಿತ್ತು. ಖಾಸಗಿ ಆಸ್ಪತ್ರೆಗಳು, ಪ್ರಯೋಗಾಲಯಗಳು ಜನರನ್ನು ಶೋಷಿಸುತ್ತಿವೆ ಎಂಬ ದೂರುಗಳಿದ್ದವು.
ಜನರ ಒತ್ತಾಯಕ್ಕೆ ಮಣಿದ ಆರೋಗ್ಯ ಇಲಾಖೆ ಸಿ.ಟಿ ಸ್ಕ್ಯಾನ್ ಮತ್ತು ಎಕ್ಸ್‌ರೇಗೆ ದರ ನಿಗದಿಪಡಿಸಿ ಆದೇಶ ಹೊರಡಿಸಿದೆ. ಇದನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಪ್ರಯೋಗಾಲಯ ನಿಲ್ಲಿಸುವುದು ವಾಸಿ: ಫಾನಾ
ಸರ್ಕಾರ ನಿಗದಿ ಮಾಡಿರುವ ದರದಲ್ಲಿ ಸೇವೆ ಒದಗಿಸುವುದು ತುಂಬಾ ಕಷ್ಟ. ಅವರ ಆದೇಶ ಒಪ್ಪಿಕೊಂಡರೆ ಸಿಬ್ಬಂದಿಗೆ ಸಂಬಳ ಕೊಡಲೂ ಆಗುವುದಿಲ್ಲ. ಅದರ ಬದಲು ಪ್ರಯೋಗಾಲಯಗಳಿಗೆ ಬೀಗ ಹಾಕುವುದು ವಾಸಿ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳ ಸಂಘದ (ಫಾನಾ) ಅಧ್ಯಕ್ಷ ಎಚ್.ಎಂ. ಪ್ರಸನ್ನ ಹೇಳಿದ್ದಾರೆ.
ಹೊಸ ದರದಿಂದಾಗಿ ಕೋವಿಡ್ ರೋಗಿಗಳು ಪರದಾಡಬೇಕಾಗಬಹುದು. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಲಿ. ₹3,000 ಅಥವಾ ₹4,000 ದರ ನಿಗದಿ ಮಾಡಿದರೆ ಒಪ್ಪಿಕೊಳ್ಳಬಹುದು. ತೀರಾ ಇಷ್ಟು ಕಡಿಮೆ ದರ ನಿಗದಿ ಮಾಡಿದರೆ ಹೇಗೆ. ಅದಕ್ಕೊಂದು ಬೆಲೆ ಬೇಡವೆ? ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಪಿಪಿಇ ಕಿಟ್ ಒದಗಿಸಬೇಕು. ಅದಕ್ಕೆ ಹಣ ಎಲ್ಲಿಂದ ತರಬೇಕು. ನಮ್ಮ ಬೇಡಿಕೆ ಪಟ್ಟಿ ಸಿದ್ಧಪಡಿಸುತ್ತಿದ್ದು, ಅದನ್ನು ಸರ್ಕಾರಕ್ಕೆ ಕಳುಹಿಸುತ್ತೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.