ಪ್ರಜಾವಾಣಿ ವಾರ್ತೆ
ಬೆಂಗಳೂರು: ಸಿ.ಎ ನಿವೇಶನ ಹಂಚಿಕೆಗೆ ಸಂಬಂಧಿಸಿ ರಾಜ್ಯಪಾಲ ಮತ್ತು ರಾಜ್ಯ ಸರ್ಕಾರದ ನಡುವೆ ಸಂಘರ್ಷ ಹೆಚ್ಚುವ ಸಾಧ್ಯತೆ ಕಾಣಿಸಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಬದಲಿ ನಿವೇಶನ ಹಂಚಿರುವುದು ವಿವಾದ ಸೃಷ್ಟಿಸಿದ್ದರ ಬೆನ್ನಿಗೇ ಈಗ, ಈ ಪ್ರಕರಣವೂ ಮುನ್ನೆಲೆಗೆ ಬಂದಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಸೇರಿದ ಸಿದ್ಧಾರ್ಥ ವಿಹಾರ ಟ್ರಸ್ಟ್ಗೆ ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ) ನಿಯಮ ಉಲ್ಲಂಘಿಸಿ ನಾಗರಿಕ ಸೌಲಭ್ಯದ (ಸಿ.ಎ) ನಿವೇಶನ ಹಂಚಿರುವ ಆರೋಪದ ಕುರಿತು ಸ್ಪಷ್ಟನೆ ನೀಡುವಂತೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಯವರ ಪುತ್ರ ರಾಹುಲ್ ಖರ್ಗೆ ನೇತೃತ್ವದ ಸಿದ್ದಾರ್ಥ ವಿಹಾರ ಟ್ರಸ್ಟ್ಗೆ ಬೆಂಗಳೂರಿನ ಏರೋಸ್ಪೇಸ್ ಪಾರ್ಕ್‌ನಲ್ಲಿ ರಾಜ್ಯ ಸರ್ಕಾರ ತರಾತುರಿಯಲ್ಲಿ ಮತ್ತು ನಿಯಮಗಳನ್ನು ಉಲ್ಲಂಘಿಸಿ ಐದು ಎಕರೆ ನಾಗರಿಕ ಸೌಲಭ್ಯದ ನಿವೇಶನವನ್ನು ಮಂಜೂರು ಮಾಡಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ. ಈ ಬಗ್ಗೆ ರಾಜ್ಯಪಾಲರಿಗೆ ಅವರು ದೂರು ನೀಡಿದ್ದರು.
ಸಿ.ಎ ನಿವೇಶನಕ್ಕೆ ಕೆಐಎಡಿಬಿಗೆ ಒಟ್ಟು 193 ಸಂಸ್ಥೆಗಳು ಅರ್ಜಿ ಹಾಕಿದ್ದವು. ಈ ಪೈಕಿ, 43 ಸಂಸ್ಥೆಗಳು ಆಯ್ಕೆ ಆಗಿದ್ದವು. ಅವುಗಳಲ್ಲಿ ಖರ್ಗೆ ಕುಟುಂಬಕ್ಕೆ ಸೇರಿದ ಸಿದ್ದಾರ್ಥ ವಿಹಾರ ಟ್ರಸ್ಟ್ ಕೂಡಾ ಒಂದು. ಈ ರೀತಿ ಭೂಮಿ ಹಂಚಿಕೆ ಆಗಿರುವುದರ ಹಿಂದೆ ಪ್ರಭಾವ ಕೆಲಸ ಮಾಡಿದೆ. ಸ್ವಜನಪಕ್ಷಪಾತ ಎದ್ದು ಕಾಣುತ್ತಿದ್ದು, ಈ ಕಾರಣಕ್ಕೆ ತನಿಖೆ ಆಗಬೇಕು ಎಂದು ನಾರಾಯಣಸ್ವಾಮಿ ದೂರಿನಲ್ಲಿ ಆಗ್ರಹಿಸಿದ್ದರು.
ಮಾರ್ಚ್ 4ರಂದು ಅರ್ಜಿಗಳ ಪರಿಶೀಲನೆ ನಡೆದಿದ್ದು, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅಧ್ಯಕ್ಷತೆಯಲ್ಲಿ ಮಾರ್ಚ್ 5ರಂದು ಸಭೆ ನಡೆಸಿ ನಿರ್ಣಯ ಕೈಗೊಂಡು ಮಾರ್ಚ್ 6ರಿಂದ ಹಂಚಿಕೆ ಪತ್ರಗಳನ್ನು ನೀಡಲಾಗಿದೆ. ಈ ಎಲ್ಲ ಪ್ರಕ್ರಿಯೆಗಳನ್ನು ಇಷ್ಟೊಂದು ತರಾತುರಿಯಲ್ಲಿ ಏಕೆ ಮಾಡಲಾಗಿದೆ. ಅರ್ಜಿ ಸಲ್ಲಿಸಲು 14 ದಿನಗಳ ಕಾಲಾವಕಾಶ ನೀಡಲಾಗಿದೆ. ಅವಸರದಲ್ಲಿ ಪ್ರಕ್ರಿಯೆ ಮುಗಿಸಲು ಸ್ವಜನಪಕ್ಷಪಾತವೇ ಕಾರಣ ಎಂದು ದೂರಿನಲ್ಲಿ ಆರೋಪಿಸಿದ್ದರು.
ಈ ಪ್ರಕರಣದಲ್ಲಿ ನಿಯಮ ಉಲ್ಲಂಘನೆ ಆಗಿದೆಯೇ ಮತ್ತು ತರಾತುರಿಯಲ್ಲಿ ನಿರ್ಣಯ ಕೈಗೊಂಡಿರುವುದಕ್ಕೆ ಕಾರಣ ಏನು ಎಂಬುದರ ಕುರಿತು ರಾಜ್ಯಪಾಲರು ವಿವರಣೆ ಕೇಳಿದ್ದಾರೆ ಎಂದು ಗೊತ್ತಾಗಿದೆ.
ರಾಹುಲ್ ಖರ್ಗೆಯವರ ಸಹೋದರನೂ ಆಗಿರುವ ಸಚಿವ ಪ್ರಿಯಾಂಕ್ ಖರ್ಗೆ ಈ ವಿಷಯವನ್ನು ಖಚಿತಪಡಿಸಿದ್ದಾರೆ.
‘ಬಿಜೆಪಿ- ಜೆಡಿಎಸ್ ನಾಯಕರಿಗೆ ಸಂಬಂಧಿಸಿದ ದೂರುಗಳು ರಾಜ್ಯಪಾಲರ ಬಳಿ ಕೊಳೆಯುತ್ತಿವೆ. ಆ ದೂರುಗಳಿಗೆ ಸಂಬಂಧಿಸಿ ರಾಜ್ಯಪಾಲರು ವಿವರಣೆ ಕೇಳಿಲ್ಲ. ಕೆಲವು ಸ್ಪಷ್ಟನೆ ಕೋರಿ ಎನ್ಡಿಎ ನಾಯಕರ ವಿರುದ್ಧದ ಪ್ರಕರಣಗಳನ್ನು ವಾಪಸ್ ಕಳುಹಿಸಿದ್ದಾರೆ. ಬಿಜೆಪಿ ನಾಯಕರ ಪ್ರಕರಣಕ್ಕೆ ಸಂಬಂಧಿಸಿ ಕಡತಗಳು ನನ್ನ ಬಳಿ ಇಲ್ಲ ಎಂದು ರಾಜ್ಯಪಾಲರು ತಪ್ಪು ಮಾಹಿತಿ ಕೊಡುತ್ತಿದ್ದಾರೆ’ ಎಂದೂ ಆರೋಪಿಸಿದರು.
‘ರಾಜ್ಯಪಾಲರಿಗೆ ಎರಡು ಸಂವಿಧಾನ ಇದೆ. ಬಿಜೆಪಿ, ಜೆಡಿಎಸ್ಗೆ ಒಂದು ಸಂವಿಧಾನ. ಕಾಂಗ್ರೆಸ್ಗೊಂದು ಸಂವಿಧಾನ’ ಎಂದು ವಾಗ್ದಾಳಿ ನಡೆಸಿದರು.
‘ಛಲವಾದಿ ನಾರಾಯಣಸ್ವಾಮಿ ಬಿಟ್ಟು ಬೇರೆ ಯಾರೂ ಏಕೆ ಸಿ.ಎ ನಿವೇಶನ ವಿಚಾರ ಮಾತನಾಡುತ್ತಿಲ್ಲ’ ಎಂದು ಪ್ರಶ್ನಿಸಿದ ಪ್ರಿಯಾಂಕ್, ‘ಬಿ.ವೈ. ವಿಜಯೇಂದ್ರ, ಆರ್. ಅಶೋಕ ಅವರು ನನ್ನ ವಿಚಾರದಲ್ಲಿ ಯಾಕೆ ಮಾತನಾಡುತ್ತಿಲ್ಲ. ನಾನು ಕೆಳಮನೆ ಸದಸ್ಯ ಅಲ್ಲವೇ? ದಲಿತರು ಬಡಿದಾಡುವಂತೆ ಮಾಡುವುದು, ಕೋಮುವಾದ ಸೃಷ್ಟಿಸುವುದು ಆರ್‌ಎಸ್‌ಎಸ್, ಬಿಜೆಪಿ ಸಂಚು’ ಎಂದೂ ಆರೋಪಿಸಿದರು.
‘ರಾಜ್ಯಪಾಲರಿಗೆ ಎರಡು ಸಂವಿಧಾನ’
‘ಬಿಜೆಪಿ- ಜೆಡಿಎಸ್ ನಾಯಕರಿಗೆ ಸಂಬಂಧಿಸಿದ ದೂರುಗಳು ರಾಜ್ಯಪಾಲರ ಬಳಿ ಕೊಳೆಯುತ್ತಿವೆ. ಆ ದೂರುಗಳಿಗೆ ಸಂಬಂಧಿಸಿ ರಾಜ್ಯಪಾಲರು ವಿವರಣೆ ಕೇಳಿಲ್ಲ. ಕೆಲವು ಸ್ಪಷ್ಟನೆ ಕೋರಿ ಎನ್ಡಿಎ ನಾಯಕರ ವಿರುದ್ಧದ ಪ್ರಕರಣ ಗಳನ್ನು ವಾಪಸ್ ಕಳುಹಿಸಿದ್ದಾರೆ. ಬಿಜೆಪಿ ನಾಯಕರ ಪ್ರಕರಣಕ್ಕೆ ಸಂಬಂಧಿಸಿ ಕಡತಗಳು ನನ್ನ ಬಳಿ ಇಲ್ಲ ಎಂದು ರಾಜ್ಯಪಾಲರು ತಪ್ಪು ಮಾಹಿತಿ ಕೊಡುತ್ತಿದ್ದಾರೆ’ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.
‘ರಾಜ್ಯಪಾಲರಿಗೆ ಎರಡು ಸಂವಿಧಾನ ಇದೆ. ಬಿಜೆಪಿ, ಜೆಡಿಎಸ್ಗೆ ಒಂದು ಸಂವಿಧಾನ. ಕಾಂಗ್ರೆಸ್ಗೊಂದು ಸಂವಿಧಾನ’ ಎಂದು ವಾಗ್ದಾಳಿ ನಡೆಸಿದರು.
‘ಛಲವಾದಿ ನಾರಾಯಣಸ್ವಾಮಿ ಬಿಟ್ಟು ಬೇರೆ ಯಾರೂ ಏಕೆ ಸಿ.ಎ ನಿವೇಶನ ವಿಚಾರ ಮಾತನಾಡುತ್ತಿಲ್ಲ’ ಎಂದು ಪ್ರಶ್ನಿಸಿದ ಪ್ರಿಯಾಂಕ್, ‘ಬಿ.ವೈ. ವಿಜಯೇಂದ್ರ, ಆರ್. ಅಶೋಕ ಅವರು ನನ್ನ ವಿಚಾರದಲ್ಲಿ ಯಾಕೆ ಮಾತನಾಡುತ್ತಿಲ್ಲ. ನಾನು ಕೆಳಮನೆ ಸದಸ್ಯ ಅಲ್ಲವೇ? ದಲಿತರು ಬಡಿದಾಡುವಂತೆ ಮಾಡುವುದು, ಕೋಮು ವಾದ ಸೃಷ್ಟಿಸುವುದು ಆರ್‌ಎಸ್‌ಎಸ್, ಬಿಜೆಪಿ ಸಂಚು’ ಎಂದೂ ಆರೋಪಿಸಿದರು.
ಮುಡಾ: 9ರವರೆಗೆ ಸಿ.ಎಂ ನಿರಾಳ
‘ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ವಿಚಾರಣೆಯನ್ನು ಜನಪ್ರತಿನಿಧಿ ಗಳ ವಿಶೇಷ ನ್ಯಾಯಾಲಯ ಮುಂದೂಡಬೇಕು’ ಎಂಬ ಈ ಹಿಂದಿನ ಆದೇಶವನ್ನು ಹೈಕೋರ್ಟ್, ಇದೇ 9ರವರೆಗೆ ಪುನಃ ವಿಸ್ತರಿಸಿದೆ.
ಸಿದ್ದರಾಮಯ್ಯ ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆಯನ್ನು, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಸೋಮವಾರ ಮುಂದುವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.