ಬೆಂಗಳೂರು: ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆದಿದೆ ಎನ್ನಲಾಗಿರುವ ಭ್ರಷ್ಟಾಚಾರ ಪ್ರಕರಣಗಳ ಕುರಿತು ತನಿಖೆಗೆ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಸಚಿವ ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ, ‘ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಔಷಧಿ, ಯಂತ್ರೋಪಕರಣ, ಇತರ ಚಿಕಿತ್ಸಾ ಪರಿಕರಗಳ ಖರೀದಿಯಲ್ಲಿನ ಅಕ್ರಮ, ಸಂಭವಿಸಿದ ಸಾವುಗಳ ಮಾಹಿತಿ ಮುಚ್ಚಿಟ್ಟಿರುವುದು ಸೇರಿದಂತೆ ಎಲ್ಲ ಬಗೆಯ ಅಕ್ರಮಗಳ ಕುರಿತು ಎಸ್‌ಐಟಿ ತನಿಖೆ ನಡೆಸಲು ನಿರ್ಧರಿಸಲಾಗಿದೆ’ ಎಂದರು.
ಕೋವಿಡ್ ಅವಧಿಯಲ್ಲಿನ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ ಪ್ರಕರಣಗಳ ಕುರಿತು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿಕುನ್ಹ ನೇತೃತ್ವದ ಆಯೋಗವು ವಿಚಾರಣೆ ನಡೆಸುತ್ತಿದೆ. ಔಷಧಿ, ಯಂತ್ರೋಪಕರಣ ಖರೀದಿಯಲ್ಲಿ ಅಕ್ರಮ ನಡೆಸಿರುವ ಹಲವು ಪ್ರಕರಣಗಳಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆಯೋಗವು ಇತ್ತೀಚೆಗೆ ಸಲ್ಲಿಸಿದ ಮಧ್ಯಂತರ ವರದಿಯಲ್ಲಿ ಶಿಫಾರಸು ಮಾಡಿದೆ.
ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ, ಆಗಿನ ಆರೋಗ್ಯ ಸಚಿವ ಬಿ. ಶ್ರೀರಾಮುಲು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧ ತನಿಖೆಗೆ ಶಿಫಾರಸು ಮಾಡಲಾಗಿದೆ. ಅಂತಹ ಎಲ್ಲ ಪ್ರಕರಣಗಳ ತನಿಖೆಯನ್ನೂ ಎಸ್‌ಐಟಿಗೆ ವಹಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
‘ಜನರು ಕೋವಿಡ್‌ನಿಂದ ಸಂಕಷ್ಟದಲ್ಲಿದ್ದಾಗ ಆಗಿನ ಸರ್ಕಾರವು ಅಮಾನವೀಯವಾಗಿ ನಡೆದುಕೊಂಡಿತ್ತು. ಭ್ರಷ್ಟಾಚಾರ, ಬೇಜವಾಬ್ದಾರಿಯುತ ವರ್ತನೆ, ಸಾವಿನ ಮಾಹಿತಿಯನ್ನೇ ಮುಚ್ಚಿಟ್ಟ ಪ್ರಕರಣಗಳೂ ನಡೆದಿದ್ದವು. ಆ ಕುರಿತು ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ತನಿಖೆ ನಡೆಸುವುದಕ್ಕೂ ಅಡ್ಡಿಪಡಿಸಲಾಗಿತ್ತು. ಈಗ ವಿಚಾರಣಾ ಆಯೋಗದ ಶಿಫಾರಸಿನ ಅನುಸಾರ ತನಿಖೆಗೆ ನಿರ್ಧರಿಸಲಾಗಿದೆ’ ಎಂದು ಪಾಟೀಲ ವಿವರಿಸಿದರು.
₹330ರಿಂದ ₹400 ದರದಲ್ಲಿ ರಾಜ್ಯದಲ್ಲೇ ಪಿಪಿಇ ಕಿಟ್ ಲಭ್ಯವಿತ್ತು. ಆದರೆ, ವಿದೇಶಿ ಕಂಪನಿಗಳಿಗೆ ₹2,117 ದರ ನೀಡಿ ಮೂರು ಲಕ್ಷ ಕಿಟ್ ಖರೀದಿ ಮಾಡಲಾಗಿತ್ತು. ಒಂದೇ ದಿನ ಎರಡು ದರಗಳಲ್ಲೂ ಖರೀದಿಸಲಾಗಿತ್ತು. ಖಾಸಗಿ ಪ್ರಯೋಗಾಲಯಗಳಿಗೆ ಅಕ್ರಮವಾಗಿ ₹6.93 ಕೋಟಿ ಪಾವತಿಸಲಾಗಿತ್ತು. ಮಾನ್ಯತೆಯೇ ಇಲ್ಲದ ನಾಲ್ಕು ಪ್ರಯೋಗಾಲಯಗಳಿಗೆ ₹4.28 ಕೋಟಿಯನ್ನು ಅಕ್ರಮವಾಗಿ ಪಾವತಿಸಲಾಗಿದೆ ಎಂದು ಆಯೋಗ ವರದಿಯಲ್ಲಿ ಹೇಳಿದೆ. ಈ ಎಲ್ಲ ಪ್ರಕರಣಗಳ ಬಗ್ಗೆಯೂ ಎಸ್‌ಐಟಿ ತನಿಖೆ ನಡೆಸಲಿದೆ ಎಂದರು.
‘ಆಗ ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ಅಪವಿತ್ರ ಮೈತ್ರಿಯು ನಡೆಸಿದ್ದ ದುರಾಡಳಿತ ಜನರಲ್ಲಿ ನಡುಕ ಹುಟ್ಟಿಸಿತ್ತು. ಆ ಬಗ್ಗೆ ಸರಿಯಾದ ತನಿಖೆಯೇ ನಡೆದಿರಲಿಲ್ಲ. ಮೈಕಲ್ ಡಿಕುನ್ಹ ಆಯೋಗ ಸಲ್ಲಿಸಿದ್ದ ಮಧ್ಯಂತರ ವರದಿಯನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯ ಸಂಪುಟ ಉಪ ಸಮಿತಿ ಪರಿಶೀಲಿಸಿ, ಸಲಹೆಗಳನ್ನು ನೀಡಿದೆ. ಅದರ ಆಧಾರದಲ್ಲಿ ಎಸ್‌ಐಟಿ ಮೂಲಕ ತನಿಖೆ ನಡೆಸುವ ನಿರ್ಧಾರಕ್ಕೆ ಬರಲಾಯಿತು’ ಎಂದು ಹೇಳಿದರು.
ಐಜಿಪಿ ಅಥವಾ ಅದಕ್ಕಿಂತ ಹೆಚ್ಚಿನ ದರ್ಜೆಯ ಐಪಿಎಸ್ ಅಧಿಕಾರಿಯೊಬ್ಬರು ಎಸ್‌ಐಟಿ ನೇತೃತ್ವ ವಹಿಸಲಿದ್ದಾರೆ. ಅಧಿಕಾರಿಗಳ ನಿಯೋಜನೆ ಕುರಿತು ಪ್ರತ್ಯೇಕ ಆದೇಶ ಹೊರಡಿಸಲಾಗುವುದು. ಪ್ರಕರಣಗಳಲ್ಲಿ ಯಾರು ಭಾಗಿಯಾಗಿದ್ದಾರೋ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದರು.
ಗಣಿಗಾರಿಕೆ: 10 ಪ್ರಕರಣ ಎಸ್‌ಐಟಿಗೆ
ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಹತ್ತು ‘ಸಿ’ ದರ್ಜೆ ಗಣಿಗಳಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತ ತನಿಖೆಯನ್ನು ಲೋಕಾಯುಕ್ತದ ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ವಹಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಶೇಕಡ 15ಕ್ಕಿಂತ ಹೆಚ್ಚು ಪ್ರಮಾಣದ ನಿಯಮ ಉಲ್ಲಂಘನೆ, ಗಡಿಯ ಹೊರಗೆ ಅಕ್ರಮ ಗಣಿಗಾರಿಕೆ ನಡೆದ ಗಣಿ ಗುತ್ತಿಗೆಗಳನ್ನು ‘ಸಿ’ ದರ್ಜೆಯಲ್ಲಿ ಗುರುತಿಸಲಾಗಿತ್ತು. 49 ಗಣಿಗಳನ್ನು ‘ಸಿ’ ದರ್ಜೆಗೆ ಸೇರಿಸಲಾಗಿತ್ತು.
ಈ ಪೈಕಿ ಮೈಸೂರು ಮ್ಯಾಂಗನೀಸ್ ಕಂಪನಿ, ದಶರಥ ರಾಮಿ ರೆಡ್ಡಿ, ಅಲ್ಲಂ ವೀರಭದ್ರಪ್ಪ, ಕರ್ನಾಟಕ ಲಿಂಪೊ, ಅಂಜನಾ ಮಿನರಲ್ಸ್, ರಾಝಿಯಾ ಖಾನುಂ, ಮಿಲನಾ ಮಿನರಲ್ಸ್ (ಮಹಾಲಕ್ಷ್ಮಿ ಆ್ಯಂಡ್ ಕೋ), ಎಂ. ಶ್ರೀನಿವಾಸುಲು, ಚನ್ನಕೇಶವ ರೆಡ್ಡಿ (ಲಕ್ಷ್ಮೀನಾರಾಯಣ ಮೈನಿಂಗ್ ಕಂಪನಿ) ಮತ್ತು ಜಿ. ರಾಜಶೇಖರ್ ಗಣಿ ಗುತ್ತಿಗೆ ಪ್ರದೇಶಗಳಲ್ಲಿನ ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ಎಸ್‌ಐಟಿಗೆ ವಹಿಸಲಾಗುವುದು ಎಂದು ಪಾಟೀಲ ವಿವರಿಸಿದರು.
ಆರು ಪ್ರಕರಣಗಳ ವಸ್ತುಸ್ಥಿತಿ ವರದಿಗೆ ಸೂಚನೆ
ರಾಜ್ಯ ಹಾಗೂ ಹೊರ ರಾಜ್ಯಗಳ ಬಂದರುಗಳ ಮೂಲಕ ರಾಜ್ಯದ ಅದಿರಿನ ಅಕ್ರಮ ರಫ್ತು, ರೈಲಿನ ಮೂಲಕ ಅದಿರು ಕಳ್ಳಸಾಗಣೆ ಸೇರಿದಂತೆ ಸಿಬಿಐ ತನಿಖೆ ನಡೆಸದೇ ವಾಪಸು ನೀಡಿದ್ದ ಆರು ಪ್ರಕರಣಗಳಿಗೆ ಸಂಬಂಧಿಸಿದ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಸೂಚಿಸಲಾಗಿದೆ.
ಆಂಧ್ರ ಪ್ರದೇಶದ ಕೃಷ್ಣಪಟ್ಟಣ, ಕಾಕಿನಾಡ, ವಿಶಾಖಪಟ್ಟಣ, ಗೋವಾದ ಮರ್ಮಗೋವಾ, ಪಣಜಿ, ತಮಿಳುನಾಡಿನ ಎನ್ನೋರ್, ಚೆನ್ನೈ ಮತ್ತು ರಾಜ್ಯದ ನವಮಂಗಳೂರು ಮತ್ತು ಕಾರವಾರ ಬಂದರುಗಳ ಮೂಲಕ ಅದಿರಿನ ಅಕ್ರಮ ರಫ್ತು ಮಾಡಿರುವ ಆರೋಪದ ಕುರಿತು ಪ್ರಾಥಮಿಕ ತನಿಖೆ ನಡೆಸಿದ್ದ ಸಿಬಿಐ, ಪ್ರಕರಣಗಳನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ನೀಡಿತ್ತು. ರೈಲುಗಳ ಮೂಲಕ ಅಕ್ರಮವಾಗಿ ಅದಿರು ಸಾಗಿಸಿದ ಪ್ರಕರಣದ ತನಿಖೆಯೂ ಬಾಕಿ ಇದೆ. ಈ ಎಲ್ಲ ಪ್ರಕರಣಗಳ ಕುರಿತು ಪರಿಶೀಲಿಸಿ ವರದಿ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಲಾಯಿತು ಎಂದು ಎಚ್.ಕೆ. ಪಾಟೀಲ ತಿಳಿಸಿದರು.
ಸಿಬಿಐ ವಾಪಸ್ ನೀಡಿದ್ದ ಪ್ರಕರಣಗಳ ತನಿಖೆಯನ್ನು ಲೋಕಾಯುಕ್ತ ಎಸ್‌ಐಟಿಗೆ ವಹಿಸಿ 2018ರ ಮಾರ್ಚ್ 21ರಂದು ಆದೇಶ ಹೊರಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.