ADVERTISEMENT

ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ: ಆಯೋಗ ರಚಿಸಲು ಸಚಿವ ಸಂಪುಟ ಸಭೆ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 13:11 IST
Last Updated 28 ಅಕ್ಟೋಬರ್ 2024, 13:11 IST
   

ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ನೀಡಲು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ ಅವರು ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಈ ಆಯೋಗ 3 ತಿಂಗಳಲ್ಲಿ ವರದಿ ನೀಡಬೇಕು. ಆಯೋಗ ನೀಡುವ ವರದಿಯನ್ನು ಸರ್ಕಾರ ಜಾರಿ ಮಾಡಲಿದೆ. ಇವತ್ತಿನಿಂದ ವರದಿ ಸಲ್ಲಿಕೆ ಆಗುವವರೆಗೆ ಸರ್ಕಾರದಿಂದ ಹೊಸ ನೇಮಕಾತಿ ಮಾಡುವುದಿಲ್ಲ. ಈಗಾಗಲೇ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿ ಇದ್ದರೆ ಮುಂದುವರೆಯಲಿದೆ ಎಂದು ಹೇಳಿದರು.

ADVERTISEMENT

ಒಳ ಮೀಸಲಾತಿಗೆ ಪರಿಶೀಲನಾರ್ಹ ದತ್ತಾಂಶ ಎಲ್ಲಿಂದ ಪಡೆಯಬೇಕು ಎನ್ನುವುದನ್ನು ಆಯೋಗಕ್ಕೆ ಷರತ್ತುಗಳು ಮತ್ತು ನಿಯಮಗಳಲ್ಲಿ ತಿಳಿಸಲಾಗುವುದು. ಸದಾಶಿವ ಆಯೋಗದ ವರದಿಯನ್ನು 2022 ರಲ್ಲಿ ಬಿಜೆಪಿ ಸರ್ಕಾರ ತಿರಸ್ಕರಿಸಿದೆ. ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ಇನ್ನೂ ಅಂಗೀಕರಿಸಿಲ್ಲ. ಅದರಲ್ಲಿನ ದತ್ತಾಂಶ ಗೊತ್ತಾಗಿಲ್ಲ. ಹೀಗಾಗಿ ದತ್ತಾಂಶ ಪಡೆಯುವ ವಿಚಾರವನ್ನು ಆಯೋಗಕ್ಕೆ ಒಪ್ಪಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು.

ಪರಿಶಿಷ್ಟ ಜಾತಿಯ ಎಲ್ಲ ಎಡ, ಬಲ, ಬೋವಿ, ಲಂಬಾಣಿ ಸಮುದಾಯದ ಶಾಸಕರು ಮತ್ತು ಸಚಿವರು ಒಮ್ಮತದಿಂದ ಆಯೋಗ ರಚಿಸಲು ಒಪ್ಪಿಗೆ ನೀಡಿದ್ದಾರೆ. ಇದು ಕಾಲ ಹರಣ ಮಾಡುವ ತಂತ್ರವಲ್ಲ. ಸರ್ಕಾರ ಒಳಮೀಸಲಾತಿ ನೀಡುವ ಬಗ್ಗೆ ಬದ್ಧತೆ ಇದೆ ಎಂದು ಪ್ರಶ್ನೆಯೊಂದಕ್ಕೆ ಅವರು ಸ್ಪಷ್ಟಪಡಿಸಿದರು.

ಸಚಿವ ಸಂಪುಟದ ಪ್ರಮುಖ ತೀರ್ಮಾನಗಳು
  • ಹೊಸ ಪ್ರವಾಸೋದ್ಯಮ ನೀತಿ 2024–29 ಕ್ಕೆ ಒಪ್ಪಿಗೆ. ಐತಿಹಾಸಿಕ, ನಿಸರ್ಗ, ಧಾರ್ಮಿಕ, ಸಾಹಿತ್ಯ, ಕೃಷಿ, ಸಾಹಸ, ಕಡಲತೀರ, ಸೇರಿದಂತೆ ಒಟ್ಟು 44 ಬಗೆಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಒತ್ತು ನೀಡಲಾಗುವುದು

  • ಹಾಸನ ನಗರ ಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲು ಒಪ್ಪಿಗೆ

  • ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಎಂದು ಪುನರ್‌ನಾಮಕರಣ ಮಾಡಲು ಅನುಮೋದನೆ

  • ಸಮಾಜ ಕಲ್ಯಾಣ ಇಲಾಖೆ ಅಧೀನದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ 33 ಘಟಕಗಳನ್ನು ವಿಶೇಷ ಪೊಲೀಸ್ ಠಾಣೆಯಾಗಿ ಪರಿವರ್ತಿಸಲು ಮತ್ತು ಇದಕ್ಕೆ 450 ಸಿಬ್ಬಂದಿ ನೇಮಕಕ್ಕಾಗಿ ಅಧಿಸೂಚನೆ ಹೊರಡಿಸಲು ಒಪ್ಪಿಗೆ

  • ದೇವನಹಳ್ಳಿ, ವಿಜಯಪುರ, ವೇಮಗಲ್‌, ಮಾಲೂರು, ಹೊಸಕೋಟೆ ಮೂಲಕ ತಮಿಳುನಾಡು ಗಡಿಯನ್ನು ಸಂಪರ್ಕಿಸುವ 110.4 ಕಿ.ಮೀ ಉದ್ದದ ರಸ್ತೆಗೆ ಸಂಪುಟ ಸಭೆಯ ಒಪ್ಪಿಗೆ. ಕೇಂದ್ರ ಸರ್ಕಾರದ ನೆರವಿನೊಂದಿಗೆ ಅನುಷ್ಠಾನಗೊಳಿಸಲಾಗುವುದು. ₹3,190 ಕೋಟಿ ವಚ್ಚವಾಗಲಿದೆ.

  • ಕೃಷಿ ಇಲಾಖೆ ಅಧೀನದ ರೈತ ಸಂಪರ್ಕ ಕೇಂದ್ರ, ಕೃಷಿ ತರಬೇತಿ ಕೇಂದ್ರ, ಜೈವಿಕ ನಿಯಂತ್ರಣ ಘಟಕ ಮುಂತಾದವುಗಳನ್ನು ಒಂದೇ ಸೂರಿನಡಿ ತರಲು ಕೃಷಿ ಅಭಿವೃದ್ಧಿ ಏಜೆನ್ಸಿ ಸ್ಥಾಪಿಸಲು ತೀರ್ಮಾನ

  • ಬೆಳಗಾವಿಯಲ್ಲಿ ಡಿಸೆಂಬರ್‌ನಲ್ಲಿ ವಿಧಾನಮಂಡಲ ಅಧಿವೇಶನ ನಡೆಸುವ ಸಂಬಂಧ ದಿನಾಂಕ ತೀರ್ಮಾನಿಸುವ ಅಧಿಕಾರ ಮುಖ್ಯಮಂತ್ರಿಯವರಿಗೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.