ಬೆಂಗಳೂರು: ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಸಂಸ್ಥೆಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ದಳ (ಎಸ್ಐಟಿ) ರಚಿಸಲು ಗುರುವಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ, 'ಕೋವಿಡ್ ಅವಧೊಯಲ್ಲಿನ ಅಕ್ರಮಗಳ ಕುರಿತು ನ್ಯಾಯಮೂರ್ತಿ ಮೈಕಲ್ ಡಿಕುನ್ಹ ಆಯೋಗ ವಿಚಾರಣೆ ನಡೆಸುತ್ತಿದೆ. ಆಯೋಗವು ಮಧ್ಯಂತರ ವರದಿ ಸಲ್ಲಿಸಿದೆ. ಆಯೋಗದ ಶಿಫಾರಸಿನಂತೆ ಕೆಲವು ಪ್ರಕರಣಗಳ ತನಿಖೆಗೆ ಎಸ್ಐಟಿ ನೇಮಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು' ಎಂದರು.
ಪಿಪಿಇ ಕಿಟ್, ಔಷಧಿ, ಯಂತ್ರೋಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ, ಕೋವೊಡ್ ಸಾಂಕ್ರಾಮಿಕದಿಂದ ಸಂಭವಿಸಿದ ಸಾವುಗಳ ಮಾಹಿತಿ ಮುಚ್ಚಿಟ್ಟಿರುವುದು, ದಾಖಲೆಗಳ ನಾಶ ಸೇರಿದಂತೆ ಹಲವು ವಿಷಯಗಳ ಬಗ್ಗೆ ಎಸ್ಐಟಿ ತನಿಖೆ ನಡೆಸಲಿದೆ. ಐಜಿಪಿ ಅಥವಾ ಅದಕ್ಕಿಂತ ಹೆಚ್ಚಿನ ದರ್ಜೆಯ ಪೊಲೀಸ್ ಅಧಿಕಾರಿ ಎಸ್ಐಟಿ ನೇತೃತ್ವ ವಹಿಸಲಿದ್ದಾರೆ ಎಂದರು.
ಹತ್ತು ಪ್ರಕರಣ ಎಸ್ಐಟಿ ತನಿಖೆಗೆ: ಹತ್ತು ಸಿ ದರ್ಜೆ ಗಣಿ ಗುತ್ತಿಗೆ ಪ್ರದೇಶಗಳಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತ ತನಿಖೆಯನ್ನು ಲೋಕಾಯುಕ್ತದ ವಿಶೇಷ ತನಿಖಾ ದಳಕ್ಕೆ ವಹಿಸಲು ಸಂಪುಟ ಸಭೆ ತೀರ್ಮಾನಿಸಿದೆ. ಈ ಕುರಿತು ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಪಾಟೀಲ ಹೇಳಿದರು.
ಚೆನ್ನೈ, ಕೃಷ್ಣಪಟ್ಟಣ, ವಿಶಾಖಪಟ್ಟಣ ಸೇರಿದಂತೆ ಹೊರ ರಾಜ್ಯಗಳ ಬಂದರುಗಳ ಮೂಲಕ ರಾಜ್ಯದ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿರುವುದು, ರೈಲಿನಲ್ಲಿ ಕಬ್ಬಿಣದ ಆದಿರು ಕಳ್ಳಸಾಗಣೆ ಸೇರಿದಂತೆ ಆರು ಪ್ರಕರಣಗಳ ತನಿಖೆಗೆ ಸಿಬಿಐ 2019ರಲ್ಲಿ ನಿರಾಕರಿಸಿತ್ತು. ಆ ಸಂಬಂಧ ಮುಂದಿನ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಸದರಿ ಪ್ರಕರಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಸಂಪುಟದ ಮುಂದಿನ ಸಭೆಗೆ ಮಂಡಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಲಾಯಿತು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.