ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯ ಅಸಮಾಧಾನ ಮತ್ತೊಮ್ಮೆ ಭುಗಿಲೇಳುವ ಲಕ್ಷಣಗಳು ಗೋಚರಿಸಿವೆ. ಗೃಹ ಸಚಿವ ಅಮಿತ್ ಶಾ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಖಡಕ್ ಸೂಚನೆ ಕೊಟ್ಟು ಹೋಗಿದ್ದರೂ ಅತೃಪ್ತರ ಸಿಟ್ಟು ಇನ್ನೂ ತಣಿದಿಲ್ಲ.
ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರಿಗೆ ದೂರು ನೀಡಿದ್ದರೆ, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಮತ್ತು ಕೆ. ಶಿವನಗೌಡ ನಾಯಕ್ ಅವರು ಬೆಂಗಳೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.
ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿರುವ ಶಾಸಕರಾದ ಅರವಿಂದ ಬೆಲ್ಲದ ಮತ್ತು ಬಿ.ಸಿ.ನಾಗೇಶ್ (ತಿಪಟೂರು) ಜತೆ ಮಾತುಕತೆ ನಡೆಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅವರನ್ನು ಸಮಾಧಾನಪಡಿಸಿದ್ದಾರೆ. ಅತೃಪ್ತ ಶಾಸಕರು ಬುಧವಾರ ಸಭೆ ಸೇರಲಿದ್ದಾರೆ ಎಂಬ ಮಾಹಿತಿ ಸಿಕ್ಕಿದ ಬೆನ್ನಲ್ಲೇ ಯಡಿಯೂರಪ್ಪ ಅವರು ಬಸವರಾಜ ಬೊಮ್ಮಾಯಿ ಮೂಲಕ ಶಾಸಕರನ್ನು ಸಂಪರ್ಕಿಸಿ ಸಮಾಧಾನಗೊಳಿಸುವ ಪ್ರಯತ್ನ ನಡೆಸಿದರು.
ದೆಹಲಿಯಲ್ಲಿ ಪ್ರಲ್ಹಾದ ಜೋಶಿ ಭೇಟಿಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರೇಣುಕಾಚಾರ್ಯ, ‘ಸಚಿವ ಸಂಪುಟ ವಿಸ್ತರಣೆ ಮತ್ತು ಆ ಬಳಿಕ ನಡೆದ ರಾಜಕೀಯ ಬೆಳವಣಿಗಳ ಬಗ್ಗೆ ಮಾತನಾಡಿದ್ದೇನೆ. ಸೋತವರನ್ನು ಮಂತ್ರಿ ಮಾಡಿದ್ದು ಸರಿಯಲ್ಲ. ನನಗಿಂತಲೂ ಹಿರಿಯರಾದ ಹಲವು ಶಾಸಕರು ಇದ್ದಾರೆ. ಅವರನ್ನು ಮಂತ್ರಿ ಮಾಡಬಹುದಿತ್ತು ಎಂದು ಹೇಳಿದ್ದೇನೆ’ ಎಂದರು.
‘ಯೋಗೇಶ್ವರ್ ಅವರನ್ನು ಮಂತ್ರಿ ಮಾಡಿದ್ದು ಸರಿಯಲ್ಲ ಎಂಬುದನ್ನು ಮುಖ್ಯಮಂತ್ರಿ ಮತ್ತು ವರಿಷ್ಠರಿಗೆ ಹೇಳಿದ್ದೆವು. ಯೋಗೇಶ್ವರ್ ಅವರಿಂದಲೇ ಬಿಜೆಪಿ ಸರ್ಕಾರ ಬಂದಿತು ಎಂಬುದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.
ಹೊಸ ಸಂಪುಟ ರಚನೆ ಆಗಲಿ: ‘ಈಗಿರುವ ಎಲ್ಲ 32 ಸಚಿವರನ್ನೂ ಕೈಬಿಟ್ಟು, ಹೊಸದಾಗಿ ಸಂಪುಟ ರಚಿಸಬೇಕು. ಕೈಬಿಟ್ಟವರಿಗೆ ಪಕ್ಷದ ಸಂಘಟನೆ ಹೊಣೆ ಮತ್ತು ಹಿರಿತನ ಆಧರಿಸಿ ಹೊಸಬರಿಗೆ ಅವಕಾಶ ನೀಡಬೇಕು’ ಎಂದು ದೇವದುರ್ಗ ಶಾಸಕ ಶಿವನಗೌಡ ನಾಯಕ್ ಒತ್ತಾಯಿಸಿದರು.
‘ಬ್ಲ್ಯಾಕ್ ಮೇಲರ್‌ಗಳಿಗೆ ಸಚಿವ ಸ್ಥಾನ ನೀಡಲಾಗಿದೆ’ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಆ ರೀತಿ ಯಾವುದೂ ಆಗಿಲ್ಲ. ಸಚಿವಾಕಾಂಕ್ಷಿಗಳು ಪರಸ್ಪರ ದೂರವಾಣಿ ಸಂಪರ್ಕದಲ್ಲಿದ್ದಾರೆ. ಅಸಮಾಧಾನ ಇರುವುದು ಸಹಜ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.