ADVERTISEMENT

ಸಂಪುಟ ವಿಸ್ತರಣೆ: ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ,12ಕ್ಕೂ ಹೆಚ್ಚು ಶಾಸಕರು ಗರಂ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 12:37 IST
Last Updated 13 ಜನವರಿ 2021, 12:37 IST
ತಿಪ್ಪಾರೆಡ್ಡಿ, ರೇಣುಕಾಚಾರ್ಯ, ವಿಶ್ವನಾಥ್‌, ಬಸನಗೌಡ ಪಾಟೀಲ್‌ ಯತ್ನಾಳ್‌
ತಿಪ್ಪಾರೆಡ್ಡಿ, ರೇಣುಕಾಚಾರ್ಯ, ವಿಶ್ವನಾಥ್‌, ಬಸನಗೌಡ ಪಾಟೀಲ್‌ ಯತ್ನಾಳ್‌   

ಬೆಂಗಳೂರು: ರಾಜ್ಯದಲ್ಲಿ ಸಂಪುಟ ವಿಸ್ತರಣೆ ಬೆನ್ನಲೇ ಬಿಜೆಪಿಯ ಹಿರಿಯ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಸನಗೌಡ ಪಾಟೀಲ್‌ ಯತ್ನಾಳ್‌, ಎಚ್‌. ವಿಶ್ವನಾಥ್‌, ತಿಪ್ಪಾರೆಡ್ಡಿ, ರಾಮದಾಸ್‌, ಮಹೇಶ್‌ ಕುಮಠಳ್ಳಿ, ಅರವಿಂದ್‌ ಬೆಲ್ಲದ್‌, ಸತೀಶ್‌ ರೆಡ್ಡಿ, ನೆಹರೂ ಓಲೇಕಾರ್, ರೇಣುಕಾಚಾರ್ಯ, ಸೋಮಶೇಖರ ರೆಡ್ಡಿ, ಕರುಣಾಕರ ರೆಡ್ಡಿ. ಅಭಯ ಪಾಟೀಲ್‌ ಸೇರಿದಂತೆ ಹಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಧ್ಯ ಕರ್ನಾಟಕಕ್ಕೆ ಅನ್ಯಾಯವಾಗಿದೆ- ರೇಣುಕಾಚಾರ್ಯ ಆಕ್ರೋಶ

ADVERTISEMENT

'ನೇರ, ನಿಷ್ಠುರ ಮಾತುಗಳೇ ನನಗೆ ಮುಳುವಾಯಿತು. ಲಾಬಿ ಮಾಡಿದವರು ಸಚಿವರಾಗುತ್ತಾರೆ. ಯಾರ ಬಳಿಯೂ ಲಾಬಿ ಮಾಡುವ ಹವ್ಯಾಸ ನನಗೆ ಇಲ್ಲ' ಎಂದು ಸಚಿವ ಸ್ಥಾನ ಆಕಾಂಕ್ಷಿಯಾಗಿರುವ, ಶಾಸಕ ಎಂ.ಪಿ. ರೇಣುಕಾಚಾರ್ಯ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, 'ವೈಯಕ್ತಿಕವಾಗಿ ನನಗೆ ಬೇಸರವಾಗಿದೆ. ನಾನು ಯಾವುದೇ ಲಾಬಿ ಮಾಡಲಿಲ್ಲ.‌ ಅದು ನನ್ನ ಸ್ವಯಂಕೃತ ಅಪರಾಧ. ಮಂತ್ರಿಗಿರಿ ಕೊಡಿ ಎಂದು ಯಾರಿಗೂ ನಾನು ಅರ್ಜಿ ಹಾಕಲ್ಲ' ಎಂದರು.

ಯೋಗೇಶ್ವರ್ ಗೆ ಮಂತ್ರಿ ಸ್ಥಾನ ಏಕೆ: ವಿಶ್ವನಾಥ್ ಕಿಡಿ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆಯಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ. ಪುತ್ರ ವಿಜಯೇಂದ್ರ ಅವರಿಂದಾಗಿ ಯಡಿಯೂರಪ್ಪನವರ ಪ್ರತಿಷ್ಠೆ ಮಣ್ಣು ಪಾಲಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಪಿಸಿದ್ದಾರೆ.

'ಯಡಿಯೂರಪ್ಪ ಸಂಪಾದಿಸಿದ್ದ ಹೆಸರು ಹಾಳಾಗುತ್ತಿದೆ. ಎಲ್ಲದಕ್ಕು ಸುಮ್ಮನೆ ಹೈಕಮಾಂಡ್ ಹೆಸರು ಬಳಸಬೇಡಿ. ಕರ್ನಾಟಕಕ್ಕೆ ಯಡಿಯೂರಪ್ಪ ಅವರೇ ಹೈಕಮಾಂಡ್' ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಎರಡು ಜಿಲ್ಲೆ, ಎರಡು ಜಾತಿ ಸಚಿವರಿಂದ ಸಂಪುಟ ಭರ್ತಿ –ಜಿ.ಎಚ್‌.ತಿಪ್ಪಾರೆಡ್ಡಿ ಅಸಮಾಧಾನ

ರಾಜ್ಯ ಸಚಿವ ಸಂಪುಟದಲ್ಲಿ ಅರ್ಧಕ್ಕಿಂತ ಹೆಚ್ಚು ಸಚಿವರು ಬೆಂಗಳೂರು, ಬೆಳಗಾವಿ ಜಿಲ್ಲೆಗೆ ಸೇರಿದ್ದಾರೆ. ಎರಡೇ ಜಾತಿಯ ಸಚಿವರು ಸಂಪುಟದಲ್ಲಿ ತುಂಬಿಕೊಂಡಿದ್ದಾರೆ. ಸಂಪುಟದಲ್ಲಿ ಸಮಾನತೆ ಕಾಣದೇ ನಗೆಪಾಟಲಿಗೆ ಈಡಾಗಿದ್ದೇವೆ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅಸಮಾಧಾನ ಹೊರಹಾಕಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆಯಲ್ಲಿ ಸೋಲು ಕಂಡಿದ್ದ ಸಿ.‍ಪಿ.ಯೋಗೇಶ್ವರ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತಿರುವುದು ಅಚ್ಚರಿ ಮೂಡಿಸಿದೆ. ಪಕ್ಷ ಅಧಿಕಾರಕ್ಕೆ ಬರಲು ಅವರು ಮಾಡಿದ ಸಹಾಯವೇನು ತಿಳಿಯದು. ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೂ ಮಣೆ ಹಾಕಲಾಗಿದೆ’ ಎಂದು ಕಿಡಿಕಾರಿದರು.

ಅನಂತಕುಮಾರ್‌ಜೀ ಇಲ್ಲದಿರುವುದು ಎದ್ದು ಕಾಣುತ್ತಿದೆ –ಸತೀಶ್‌ ರೆಡ್ಡಿ

‘ಯಡಿಯೂರಪ್ಪನವರೇ ಮಂತ್ರಿ ಮಂಡಲ ವಿಸ್ತರಣೆಯಲ್ಲಿ ಸಚಿವ ಸ್ಥಾನದ ಆಯ್ಕೆ ಪ್ರಕ್ರಿಯೆಯ ಮಾನದಂಡವೇನು? ನಿಮಗೆ ನಮ್ಮ ರಾಜ್ಯ ಮತ್ತು ರಾಷ್ಟ್ರ ನಾಯಕರಿಗೆ ನಿಷ್ಠಾವಂತ ಯುವ ನಾಯಕರು ಕಾಣುವುದಿಲ್ಲವೇ? ನಮ್ಮ ಕಷ್ಟ ಆಲಿಸುತ್ತಿದ್ದ ಅನಂತಕುಮಾರ್‌ಜೀ ಇಲ್ಲದಿರುವುದು ಎದ್ದು ಕಾಣುತ್ತಿದೆ’ ಎಂದಿದ್ದಾರೆ.

ಅನ್ಯ ಮಾರ್ಗದಲ್ಲಿ ಸಚಿವನಾಗುವುದು ನನ್ನ ಆತ್ಮ ಸಾಕ್ಷಿಗೆ ವಿರುದ್ಧ: ರಾಮದಾಸ್‌

ಮೈಸೂರು: ಪಕ್ಷ ನನ್ನ ತಾಯಿ ಇದ್ದಂತೆ, ಪಕ್ಷದ ಘನತೆಯೇ ನನ್ನ ಕರ್ತವ್ಯ ಎಂದು ಅರಿತವನಾದ್ದರಿಂದ ಅನ್ಯ ಮಾರ್ಗದಲ್ಲಿ ಸಚಿವನಾಗುವುದು ನನ್ನ ಆತ್ಮ ಸಾಕ್ಷಿಗೆ ವಿರುದ್ಧವಾದುದು ಎಂದು ಶಾಸಕ ರಾಮದಾಸ್‌ ಟ್ವೀಟ್‌ ಮಾಡಿದ್ದಾರೆ.

ನಾನು ಮೈಸೂರು ನಗರದ ಯುವಮೋರ್ಚಾ ಅಧ್ಯಕ್ಷನಾಗಿ ಪಕ್ಷದ ಕೆಲಸ ಪ್ರಾರಂಭ ಮಾಡಿದವನು. ರಾಜ್ಯದ ಬಿಜೆಪಿ ಯುವಮೋರ್ಚಾ ಅಧ್ಯಕ್ಷನಾಗಿ ಸತತ 2 ಬಾರಿ ಕೆಲಸ ಮಾಡಿದವನು. ಸತತ 28 ವರ್ಷಗಳಿಂದ ಸಾಕಷ್ಟು ನಿಷ್ಠೆಯಿಂದ ಪಕ್ಷದ ಕೆಲಸ ಮಾಡುತ್ತಿದ್ದೇನೆ. ಈ ವಿಭಾಗದಲ್ಲಿ ಗೆದ್ದ 11 ಜನ ಬಿಜೆಪಿ ಶಾಸಕರಲ್ಲಿ 10 ಜನ ಪಕ್ಷ ಬಿಟ್ಟು ಅನ್ಯ ಪಕ್ಷಕ್ಕೆ ತೆರಳಿದ್ದರು ಎಂದು ಟ್ವೀಟ್‌ ಮಾಡಿದ್ದಾರೆ.

ಕಾಲ ಕೂಡಿ ಬಂದಾಗ ಸಚಿವನಾಗುವೆ: ಕುಮಠಳ್ಳಿ

‘ಕಾಲ ಕೂಡಿ ಬಂದಾಗ ನನಗೂ ಸಚಿವ ಸ್ಥಾನ ಸಿಗುತ್ತದೆ’ ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಹೇಳಿದರು.

ಇಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನನ್ನನ್ನು ಸಚಿವರನ್ನಾಗಿ ಮಾಡದಿರುವುದಕ್ಕೆ ಏನು ಸಮಸ್ಯೆ ಇದೆಯೋ ಗೊತ್ತಿಲ್ಲ. ಅದಕ್ಕೆ ಅವರ (ಮುಖ್ಯಮಂತ್ರಿ) ಬಳಿಯೂ ಉತ್ತರವಿಲ್ಲ. ಸಚಿವ ಸ್ಥಾನದ ಭರವಸೆ ಕೊಟ್ಟಿದ್ದರು. ಈಗ ಏನೋ ತೊಂದರೆ ಆಗಿರಬಹುದು. ಹಾಗೆಂದು ಪಕ್ಷಕ್ಕೆ ಮುಜುಗರ ಆಗುವಂತಹ ಹೇಳಿಕೆ ನೀಡುವುದಿಲ್ಲ’ ಎಂದರು.

ಬ್ಲಾಕ್ ಮೇಲ್ ಮಾಡಿದವರಿಗೆ, ಹಣ ನೀಡಿದವರಿಗೆ ಸಚಿವ ಸ್ಥಾನ: ಯತ್ನಾಳ ಆರೋಪ

ಬ್ಲಾಕ್ ಮೇಲ್ ಮಾಡುವವರಿಗೆ, ಹಣ ನೀಡಿದವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂವರ ಪೈಕಿ ಯಾರೊಬ್ಬರ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.
ಇದೇ ಮೂವರು ಈ ಹಿಂದೆ ನನ್ನ ಭೇಟಿಯಾಗಿದ್ದರು.ನಾವೆಲ್ಲರೂ ಕೂಡಿ ಸಿಎಂ ಯಡಿಯೂರಪ್ಪರನ್ನ ಕೆಳಗಿಳಿಸೋಣ ಎಂದು ಬೆಂಬಲ ಕೋರಿದರು.ಅವರ ಮಾತು ಕೇಳಿ ನನಗೆ ಆಶ್ಚರ್ಯವಾಗಿತ್ತು ಎಂದರು.

ಪಕ್ಷಕ್ಕೆ ನಿಷ್ಟೆ ದೌರ್ಬಲ್ಯ ಅಲ್ಲ –ಅಭಯ ಪಾಟೀಲ

ಸ್ಥಾನ‌ ಮಾನ ಪಡೆಯಲು ಅನ್ಯ ಮಾರ್ಗಗಳನ್ನು ಅನುಸರಿಸದೆ ಪಕ್ಷಕ್ಕೆ ನಿಷ್ಟೆ ಮತ್ತು ವಿಚಾರಕ್ಕೆ ಬದ್ಧತೆ ಇರುವ ಕಾರ್ಯಕರ್ತರಿಗೆ ಇಂದಿನ ದಿನಮಾನಗಳಲ್ಲಿ ಸ್ಥಾನವಿಲ್ಲ ಅನ್ನುವ ತಾತ್ಕಾಲಿಕ, ಇಂದಿನ‌ ಈ ನಡೆ ವಿಷಾದಕರ ಸಂಗತಿ.ವಿಚಾರಕ್ಕೆ ಬದ್ಧತೆ ಮತ್ತು ಪಕ್ಷಕ್ಕೆ ನಿಷ್ಟೆ ಇದು ದೌರ್ಬಲ್ಯ ಅಲ್ಲ ಎಂದು ಶಾಸಕ ಅಭಯ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಕ್ಷನಿಷ್ಠರಿಗೆ ಅನ್ಯಾಯವಾಗಿದೆ: ಶಾಸಕ ಅರವಿಂದ ಬೆಲ್ಲದ್

ಸಂಪುಟ ವಿಸ್ತರಣೆಯಲ್ಲಿ ಪಕ್ಷನಿಷ್ಠ ಶಾಸಕರು ಮತ್ತು ಯುವಕರಿಗೆ ಅನ್ಯಾಯವಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ್ ಆರೋಪಿಸಿದರು.

ರಾಜಭವನದ ಬಳಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, 'ಕೆಲಸ ಮಾಡುವ ಅರ್ಹತೆ ಇರುವವರು, ಪಕ್ಷನಿಷ್ಠರು ಮತ್ತು ಯುವಕರಿಗೆ ಅನ್ಯಾಯ ಮಾಡಲಾಗಿದೆ. ಪಕ್ಷದ ವರಿಷ್ಠರನ್ನು ಭೇಟಿಯಾಗಿ ಈ ವಿಷಯ ತಿಳಿಸುತ್ತೇನೆ' ಎಂದರು.

ಬಳ್ಳಾರಿಯ ರೆಡ್ಡಿ ಸಹೋದರರಾದ ಸೋಮಶೇಖರ ರೆಡ್ಡಿ ಮತ್ತು ಕರುಣಾಕರ ರೆಡ್ಡಿ ಅವರು ಮುನಿಸಿಕೊಂಡು ಹೊಸಪೇಟೆಯಲ್ಲಿ ನಡೆದ ಜನಸೇವಕ ಸಮಾವೇಶ ಬಹಿಷ್ಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.