ಬೆಂಗಳೂರು: ನ್ಯಾಯಾಲಯಗಳಲ್ಲಿ ಸಾಕ್ಷಿ ಮತ್ತು ಆರೋಪಿಗಳ ಹೆಸರುಗಳನ್ನು ಪೂರ್ವಪ್ರತ್ಯಯವಿಲ್ಲದೆ (ಗೌರವಸೂಚಕಗಳು) ಕೂಗುವ ಹಳೆಯ ಮತ್ತು ಮುಜುಗರವನ್ನು ಉಂಟು ಮಾಡುವಂಥ ಪದ್ಧತಿಗೆ ರಾಜ್ಯವು ಕೊನೆಹಾಡಲಿದೆ. ಈ ಸಂಬಂಧ ರಾಜ್ಯ ಸರ್ಕಾರವು ನೀತಿ ಮಟ್ಟದಲ್ಲಿ ಬದಲಾವಣೆ ತರುತ್ತಿದೆ.
‘ಕಾನೂನು ಮತ್ತು ನೀತಿ– 2023’ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಹಲವು ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.
‘ಈಗ ಜಾರಿಯಲ್ಲಿರುವ ಪದ್ಧತಿಯಲ್ಲಿ ಸಾಕ್ಷಿ, ಪರಿಣತ ಸಾಕ್ಷಿ ಮತ್ತು ಆರೋಪಿಗಳನ್ನು ಕರೆಯುವಾಗ, ಅವರ ಹೆಸರಿನೊಂದಿಗೆ ಪೂರ್ವಪ್ರತ್ಯಯಗಳನ್ನು ಬಳಸದೇ, ಅವರ ಹೆಸರನ್ನು ಬಹಿರಂಗವಾಗಿ ಕೂಗಲಾಗುತ್ತದೆ. ಹೀಗೆ ಕರೆಯುವುದು ಮುಜುಗರವನ್ನುಂಟು ಮಾಡುತ್ತದೆ’ ಎಂದು ವಿವರಿಸಲಾಗಿದೆ.
‘ನ್ಯಾಯವನ್ನು ಕೋರಿ ನ್ಯಾಯಾಲಯಗಳಿಗೆ ಬರುವವರು ಮತ್ತು ನ್ಯಾಯದಾನ ಪ್ರಕ್ರಿಯೆಯಲ್ಲಿ ನ್ಯಾಯಾಲಯಕ್ಕೆ ನೆರವು ನೀಡಲು ಬರುವ ಸಾಕ್ಷಿಗಳನ್ನು ಗೌರವಯು ತವಾಗಿ ನಡೆಸಿಕೊಳ್ಳಬೇಕು. ಹೀಗಾಗಿ ಈ ಪದ್ಧತಿಗೆ ಕೊನೆಹಾಡಲು ಸಂಬಂಧಿತ ಅಧಿನಿಯಮ ಮತ್ತು ನಿಯಮಗಳಿಗೆ ತಿದ್ದುಪಡಿ ತರಲಾಗುತ್ತದೆ. ವಿಚಾರಣಾ ಸಮಯದಲ್ಲಿ ನ್ಯಾಯಾಲಯಗಳ ಕಟಕಟೆಯಲ್ಲಿ ಕುಳಿತುಕೊಳ್ಳುವ ಸೌಲಭ್ಯ ಒದಗಿಸಲಾಗುವುದು’ ಎಂದು ನೀತಿಯಲ್ಲಿ ವಿವರಿಸಲಾಗಿದೆ.
ನೀತಿಯಲ್ಲಿರುವ ಪ್ರಮುಖ ಅಂಶಗಳು
ಮಾನವ ಹಕ್ಕುಗಳನ್ನು ಗೌರವಿಸುವ ವ್ಯವಸ್ಥೆಗೆ ಬಲ ತುಂಬುವುದು
ನ್ಯಾಯಾಲಯಗಳು, ಅರೆ– ನ್ಯಾಯಾಂಗ ಸಂಸ್ಥೆಗಳು ಮತ್ತು ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆಗಳ ಮೂಲಕ ವಿವಾದಗಳಿಗೆ ತ್ವರಿತ ಪರಿಹಾರ ಒದಗಿಸುವ ಮೂಲಕ ಜೀವನ ಗುಣಮಟ್ಟ ಉತ್ತಮಪಡಿಸುವುದು
ಶಾಂತಿ, ಪ್ರಗತಿಗಾಗಿ ‘ವ್ಯಾಜ್ಯ ಮುಕ್ತ ಗ್ರಾಮ’ ರೂಪಿಸುವುದು
ನ್ಯಾಯವನ್ನು ಸಾಮಾನ್ಯ ಜನರ ಮನೆ ಬಾಗಿಲಿಗೆ ಕೊಂಡೊಯ್ಯುವುದು, ಸಾಕ್ಷಿಗಳ ಘನತೆ ಮತ್ತು ಗೌರವವನ್ನು ರಕ್ಷಿಸುವುದು. ವ್ಯಾಜ್ಯಗಳತ್ತ ಸರ್ಕಾರದ ಧೋರಣೆಯಲ್ಲಿ ಬದಲಾವಣೆ ತರುವುದು
ಸಾರ್ವಜನಿಕ ಕಾನೂನು ಶಿಕ್ಷಣಕ್ಕಾಗಿ ಕ್ರಮಗಳನ್ನು ಆರಂಭಿಸುವುದು. ಗುಣಾತ್ಮಕ, ಸ್ಪಂದನಾತ್ಮಕ ಮತ್ತು ವೃತ್ತಿಪರ ಮೌಲ್ಯಗಳಿಗೆ ಬದ್ಧರಾಗಿರುವ ಪದವೀಧರರಿಗೆ ತರಬೇತಿಗಾಗಿ ಕಾನೂನು ಶಿಕ್ಷಣವನ್ನು ಬಲಪಡಿಸುವುದು
ವ್ಯಾಜ್ಯಗಳನ್ನು ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ರೂಪಿಸುವುದು ಮತ್ತು ಅನಗತ್ಯವಾಗಿ ನಾಗರಿಕರನ್ನು ನ್ಯಾಯಾಲಯಗಳಿಗೆ ಓಡಾಡಿಸುವುದನ್ನು ತಡೆಯುವುದು
ಕಾನೂನು ಶಿಕ್ಷಣವನ್ನು ಒದಗಿಸಲು ವಕೀಲರ ಅಕಾಡೆಮಿ ಸ್ಥಾಪನೆ, ಅಗತ್ಯವಿರುವ ಕಡೆಗಳಲ್ಲಿ ಮಾದರಿ
ನ್ಯಾಯಾಲಯಗಳನ್ನು ಸ್ಥಾಪಿಸುವುದು. ರೈತರು ಮತ್ತು ದುರ್ಬಲ ವರ್ಗದವರಿಗೆ ಕಾನೂನು ನೆರವಿನ ಮೂಲಕ ಒಳಿತು ಮಾಡುವುದು
ಅಂತರ್ಜಾಲ ಬಳಸುವುದರಿಂದ ಹದಿಹರೆಯದವರು ಹವ್ಯಾಸಗಳಿಗೆ ವ್ಯಸನಿಗಳಾಗದಂತೆ ರಕ್ಷಿಸಲು ನೀತಿ ರೂಪಿಸುವುದು. ಕೆಲವು ಚಟುವಟಿಕೆಯನ್ನು ನಿಯಂತ್ರಿಸಲು ಅಥವಾ ನಿಷೇಧಿಸಲು ಕಾನೂನು ಜಾರಿಗೊಳಿಸುವುದು
ಗ್ರಾಮ ನ್ಯಾಯಾಲಯಗಳ ಸ್ಥಾಪನೆ, ಮಧ್ಯಸ್ಥಗಾರರಿಗೆ ಅಗತ್ಯ ತರಬೇತಿ. ಅಗತ್ಯವಿರುವ ಕಡೆ 100 ತ್ವರಿತ ನ್ಯಾಯಾಲಯ, ವಿಶೇಷ ನ್ಯಾಯಾಲಯಗಳ ಸ್ಥಾಪನೆ
ಎಲ್ಲ ಹೊಸ ತಾಲ್ಲೂಕುಗಳಲ್ಲಿ ನ್ಯಾಯಾಲಯ ಸ್ಥಾಪನೆ ಮತ್ತು ನ್ಯಾಯಾಂಗದ ಮೂಲಸೌಕರ್ಯವನ್ನು ನವೀಕರಿಸುವುದು. ನ್ಯಾಯಾಲಯಗಳ ಆಧುನೀಕರಣ ಮತ್ತು ತಂತ್ರಜ್ಞಾನದ ಬಳಕೆ. ಅರೆ ನ್ಯಾಯಾಂಗ ಸಂಸ್ಥೆ ತರಬೇತಿ ಮತ್ತು ಆಧುನೀಕರಣ ಮಾಡುವುದು
ಆಧುನಿಕ ಸಂವಹನ ವಿಧಾನಗಳ ಮೂಲಕ ಸಮನ್ಸ್ ಜಾರಿಗೊಳಿಸುವುದು. ಹಳೆಯ ಕಾನೂನುಗಳನ್ನು ರದ್ದುಗೊಳಿಸುವುದು. ಮಾದರಿ ನ್ಯಾಯಾಲಯಗಳ ಸ್ಥಾಪನೆ. ಸಾಮಾನ್ಯ ಜನರು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸರಳ ಭಾಷೆಯಲ್ಲಿ ಕಾನೂನುಗಳನ್ನು ರಚಿಸುವುದು
ಕಾನೂನು ಶಿಕ್ಷಣ ನಿರ್ದೇಶನಾಲಯ ಸ್ಥಾಪನೆ. ಎಲ್ಲ ಅನುದಾನಿತ ಕಾನೂನು ಕಾಲೇಜುಗಳನ್ನು ಕಾನೂನು ಶಿಕ್ಷಣ ನಿರ್ದೇಶನಾಲಯದ ಅಡಿ ತರುವುದು
ಉತ್ತರ ಕರ್ನಾಟಕದಲ್ಲಿ ವಕೀಲರ ಅಕಾಡೆಮಿ ಸ್ಥಾಪಿಸುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.