ಬೆಂಗಳೂರು: ಪಕ್ಷದ ಶಾಸಕರ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಜಿಂದಾಲ್‌ಗೆ 3,667 ಎಕರೆ ಭೂಮಿ ಪರಭಾರೆ ಮಾಡುವ ನಿರ್ಧಾರವನ್ನು ಕೈಬಿಟ್ಟಿದೆ.
ಪ್ರತಿ ಎಕರೆಗೆ ₹ 1.27 ಲಕ್ಷ ದರದಲ್ಲಿ ಜಮೀನು ಪರಭಾರೆ ಮಾಡಲು ಈ ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರವು ನಿರ್ಣಯಿಸಿತ್ತು. ಅದಕ್ಕೆ ಪಕ್ಷದೊಳಗಿಂದಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಗುರುವಾರ ನಡೆದ ಸಚಿವ ಸಂಪುಟದಲ್ಲಿ ಈ ಹಿಂದಿನ ತೀರ್ಮಾನವನ್ನು ಕೈಬಿಡಲು ತೀರ್ಮಾನಿಸಲಾಯಿತು.
ಸಚಿವ ಸಂಪುಟ ಸಭೆಯ ಬಳಿ ಮಾತನಾಡಿದ ಕಾನೂನು ಸಚಿವ ಬಸವರಾಜ ಬೊಮ್ಮಾಯಿ, ‘ಈ ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ಜಿಂದಾಲ್‌ಗೆ ಭೂಮಿಯನ್ನು ಶುದ್ಧಕ್ರಯ ಮಾಡಿಕೊಡಲು ನಿರ್ಧರಿಸಲಾಗಿತ್ತು.ಆ ನಿರ್ಣಯವನ್ನು ಇವತ್ತಿನ ಸಂಪುಟ ಸಭೆಯಲ್ಲಿ ದೃಢೀಕರಿಸಲಿಲ್ಲ’ ಎಂದು ಹೇಳಿದರು.
ಸರ್ಕಾರದ ನಿರ್ಣಯವನ್ನು ವಿರೋಧಿಸಿ ಬಿಜೆಪಿಯ ಕೆಲವು ಶಾಸಕರು ಮುಖ್ಯಮಂತ್ರಿ ಮತ್ತು ಪಕ್ಷದ ವರಿಷ್ಠರಿಗೆ ಪತ್ರ ಬರೆಯುವ ಮೂಲಕ ತೀವ್ರ ಅತೃಪ್ತಿ ಹೊರಹಾಕಿದ್ದರು. ಅಲ್ಲದೆ, ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನೂ ದಾಖಲಿಸಲಾಗಿತ್ತು. ಹೈಕೋರ್ಟ್ ನಿರ್ದೇಶನದ ಅನ್ವಯ ಸಚಿವ ಸಂಪುಟದ ಎಲ್ಲ ಸದಸ್ಯರಿಗೂ ನೋಟಿಸ್ ಜಾರಿ ಮಾಡಲಾಗಿತ್ತು.
ಹಿಂದಿನ ಸಚಿವ ಸಂಪುಟದ ನಿರ್ಣಯವನ್ನು ತಡೆ ಹಿಡಿಯಲಾಗಿದೆ. ಸಂಪುಟ ತನ್ನ ವಿವೇಚನೆಯ ಮೇರೆಗೆ ಬಾಕಿ ಉಳಿದ ಪ್ರಕರಣಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತದೆ. ಈ ಸಂಬಂಧ ಸುಪ್ರೀಂಕೋರ್ಟ್‌ನಲ್ಲೂ ಪ್ರಕರಣ ಬಾಕಿ ಉಳಿದಿದೆ. ರಾಜ್ಯ ಸರ್ಕಾರ ಭವಿಷ್ಯದಲ್ಲಿ ತನ್ನ ನಿರ್ಣಯವನ್ನು ಬದಲಿಸಲೂಬಹುದು ಎಂದು ಬೊಮ್ಮಾಯಿ ಹೇಳಿದರು.
ಈ ವಿಷಯ ಚರ್ಚಿಸಲು ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಬೇಕು. ಅಲ್ಲಿ ತೀರ್ಮಾನವನ್ನು ಸಮರ್ಥಿಸಿಕೊಳ್ಳಬೇಕು ಎಂದು ಕೆಲವು ಶಾಸಕರು ಒತ್ತಡ ಹೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.