ADVERTISEMENT

ಇನಾಂ ಜಮೀನುಗಳಲ್ಲಿ ಕೃಷಿ ಮಾಡುವ ರೈತರಿಗೆ ಪಹಣಿ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2021, 11:31 IST
Last Updated 9 ಡಿಸೆಂಬರ್ 2021, 11:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯ ವಿವಿಧೆಡೆ ಇನಾಂ ಜಮೀನು ಸಾಗುವಳಿ ಮಾಡುತ್ತಿರುವ ರೈತರಿಗೆ ಪಹಣಿ ನೀಡುವ ಸಂಬಂಧ ಅರ್ಜಿ ಸಲ್ಲಿಸುವ ಅವಧಿಯನ್ನು ಇನ್ನೂ ಒಂದು ವರ್ಷ ಮುಂದುವರೆಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಇದಕ್ಕಾಗಿ ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗುವುದು. ರಾಜ್ಯದಲ್ಲಿ ಕಳೆದ 50–60 ವರ್ಷಗಳಿಂದ ಲಕ್ಷಾಂತರ ಎಕರೆ ಇನಾಂ ಭೂಮಿಯಲ್ಲಿ ರೈತರು ಉಳುಮೆ ಮಾಡುತ್ತಿದ್ದಾರೆ. ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಬಹಳಷ್ಟು ರೈತರು ಪಹಣಿ ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಮೂಲಗಳು ಹೇಳಿವೆ.

ಭೂಮಿಯ ಹಕ್ಕನ್ನು ರೈತರಿಗೆ ನೀಡುವುದರಿಂದ ಅವರು ಬ್ಯಾಂಕ್‌ಗಳಿಂದ ಸಾಲ ಪಡೆಯಲು, ಸರ್ಕಾರಿ ಉದ್ದೇಶಕ್ಕೆ ಭೂಸ್ವಾದೀನ ಮಾಡಿಕೊಂಡಾಗ ಪರಿಹಾರ ಪಡೆದುಕೊಳ್ಳಲು ಅನುಕೂಲವಾಗುತ್ತದೆ. ಕೆಲವರು ಇಂತಹ ಭೂಮಿಗಳ ನಕಲಿ ದಾಖಲೆ ಸೃಷ್ಟಿಸಿ ಅಕ್ರಮ ನಡೆಸುತ್ತಿದ್ದಾರೆ ಎಂದು ಸಂಪುಟ ಸಭೆಯಲ್ಲಿ ಕಂದಾಯ ಸಚಿವ ಆರ್‌.ಅಶೋಕ ಹೇಳಿದರು ಎಂದು ಮೂಲಗಳು ಹೇಳಿವೆ.

ADVERTISEMENT

11 ಇ ಅಡಿ ಕಂದಾಯ ಭೂಮಿ ನಕ್ಷೆ ತಯಾರಿಸಲು ಪರವಾನಗಿ ಪಡೆದ ಸರ್ವೆಯರ್‌ಗಳ ಜತೆ ಇನ್ನು ಮುಂದೆ ಸರ್ಕಾರಿ ಸರ್ವೆಯರ್‌ಗಳನ್ನು ಬಳಸಬಹುದಾಗಿದ್ದು, ಇದಕ್ಕಾಗಿ ಕರ್ನಾಟಕ ಭೂ ಕಂದಾಯ(ತಿದ್ದುಪಡಿ) ಮಸೂದೆ2021 ಕ್ಕೂ ಸಂಪುಟ ಸಭೆ ಒಪ್ಪಿಗೆ ನೀಡಿತು.

ಸಂಪುಟ ಸಭೆಯ ಮುಖ್ಯಾಂಶಗಳು
* 2022–23 ನೇ ಶೈಕ್ಷಣಿಕ ಸಾಲಿಗೆ ವಿದ್ಯಾವಿಕಾಸ ಯೋಜನೆಯಡಿ ಪ್ರೋತ್ಸಾಹದಾಯಕ ಕಾರ್ಯಕ್ರಮದಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಒಟ್ಟು ₹152.87 ಕೋಟಿ ವೆಚ್ಚದಲ್ಲಿ ಉಚಿತ ಪಠ್ಯ ಪುಸ್ತಕಗಳು ಮತ್ತು ಇತರ ಕಲಿಕಾ ಸಾಮಗ್ರಿಗಳನ್ನು ವಿತರಿಸಲು ಅನುಮೋದನೆ.
* ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ (ತಿದ್ದುಪಡಿ)ಮಸೂದೆಗೆ 2021 ಕ್ಕೆ ಅನುಮೋದನೆ, ಕರ್ನಾಟಕ ರಾಜ್ಯ ಆಯುಷ್‌ ವಿಶ್ವವಿದ್ಯಾಲಯ ಮಸೂದೆ2021 ಕ್ಕೆ ತಿದ್ದುಪಡಿ.
* ಕರ್ನಾಟಕ ಮಹಾನಗರ ಪಾಲಿಕೆಗಳು ಮತ್ತು ಇತರೆ ಕಾನೂನು (ಮೂರನೇ ತಿದ್ದುಪಡಿ) ಮಸೂದೆ 2021 ಕ್ಕೆ ಅನುಮೋದನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.