ADVERTISEMENT

ಕಸ್ತೂರಿ ರಂಗನ್‌ ವರದಿ: ಕೇಂದ್ರದ ಬಳಿಗೆ ಸರ್ವಪಕ್ಷ ನಿಯೋಗ

ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 16:05 IST
Last Updated 20 ಸೆಪ್ಟೆಂಬರ್ 2024, 16:05 IST
ಪಶ್ಚಿಮ ಘಟ್ಟ
ಪಶ್ಚಿಮ ಘಟ್ಟ   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಪಶ್ವಿಮಘಟ್ಟ ಪರಿಸರ ಸೂಕ್ಷ್ಮವಲಯ ಪ್ರದೇಶದ ಗ್ರಾಮಗಳ ಜನರ ಅಹವಾಲು ಆಲಿಸಲು ಹೊಸ ಸಮಿತಿ ಕಳುಹಿಸಿಕೊಡುವಂತೆ ಕೋರಲು ಕೇಂದ್ರದ ಬಳಿಗೆ ಸರ್ವಪಕ್ಷಗಳ ನಿಯೋಗ ಕರೆದುಕೊಂಡು ಹೋಗಲು ಶುಕ್ರವಾರ ನಡೆದ ಸಂಪುಟ ಉಪ ಸಮಿತಿ ಸಭೆ ನಿರ್ಧರಿಸಿದೆ.

ಅರಣ್ಯ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಸ್ತೂರಿ ರಂಗನ್‌ ವರದಿ ಅನುಷ್ಠಾನ ಕುರಿತು ಚರ್ಚೆ ನಡೆಸಲಾಗಿದೆ. ವರದಿ ತಿರಸ್ಕರಿಸುವುದೂ ಸೇರಿ ಮೂರು ಸಾಧ್ಯತೆಗಳನ್ನು ಒಳಗೊಂಡ ವರದಿ ಸಿದ್ಧಪಡಿಸಿ ಸಂಪುಟ ಸಭೆಯ ಮುಂದಿಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಂಪುಟದ ನಿರ್ಣಯ ಆಧರಿಸಿ ಸೆ. 27ರಂದು ಕೇಂದ್ರಕ್ಕೆ ರಾಜ್ಯ ಸರ್ಕಾರ ತನ್ನ ಅಭಿಪ್ರಾಯ ಸಲ್ಲಿಸಲಿದೆ.

ADVERTISEMENT

ಕಸ್ತೂರಿ ರಂಗನ್‌ ವರದಿಯ ಅನುಷ್ಠಾನ ಸಾಧ್ಯತೆಗಳ ಕುರಿತು ಪಶ್ವಿಮಘಟ್ಟ ವ್ಯಾಪ್ತಿಯ 11 ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಸರ್ಕಾರ ಗುರುವಾರ ಚರ್ಚೆ ನಡೆಸಿತ್ತು. ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕರು ವರದಿ ತಿರಸ್ಕರಿಸುವಂತೆ ಸಲಹೆ ನೀಡಿದ್ದರು. ಆದರೆ, ಏಳನೇ ಬಾರಿಯೂ ಇದೇ ಕ್ರಮ ಅನುಸರಿಸಿದರೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆಯಾಗಬಹುದು ಎಂಬ ಕಾರಣಕ್ಕೆ ಅರಣ್ಯ ಇಲಾಖೆ ಕೆಲ ಆಯ್ಕೆಗಳನ್ನು ಮುಂದಿಟ್ಟಿತ್ತು.

ಸಂಪುಟ ಉಪ ಸಮಿತಿ ಸಭೆಯಲ್ಲೂ ಆಯ್ಕೆಗಳ ಕುರಿತು ಚರ್ಚೆ ನಡೆಸಲಾಗಿದೆ. ಪರಿಸರಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಬರುವ 1,433 ಗ್ರಾಮಗಳ ಜನರ ಅಹವಾಲು ಆಲಿಸಲು ನೇಮಿಸಲಾಗಿದ್ದ ಸಂಜಯ್‌ ಕುಮಾರ್ ನೇತೃತ್ವದ ಸಮಿತಿ ಇದುವರೆಗೂ ರಾಜ್ಯಕ್ಕೆ ಭೇಟಿ ನೀಡಿ, ಜನರ ಅಹವಾಲು ನೇರವಾಗಿ ಆಲಿಸಿಲ್ಲ. ಹಾಗಾಗಿ, ಬೇರೆ ಸಮಿತಿ ಕಳುಹಿಸಬೇಕು. ಅಲ್ಲಿಯವರೆಗೂ ನಿರ್ಧಾರ ತೆಗೆದುಕೊಳ್ಳಲು ಕಾಲಾವಕಾಶ ನೀಡಬೇಕು ಎಂದು ನಿಯೋಗ ಕೇಂದ್ರವನ್ನು ಕೋರಲಿದೆ.

ಮತ್ತೊಂದು ಆಯ್ಕೆಯಲ್ಲಿ ವನ್ಯಜೀವಿ ಸಂರಕ್ಷಿತ ಅರಣ್ಯ ಒಳಗೊಂಡ 16,114 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮದ ವ್ಯಾಪ್ತಿಗೆ ತರಲು ಒಪ್ಪಿಗೆ ನೀಡುವುದು, ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಕೆಲವನ್ನು ಮತ್ತೆ ಕೈಬಿಡುವ ಅಥವಾ ವಿಶೇಷ ಪ್ಯಾಕೇಜ್‌ ಘೋಷಿಸುವ ವಿಚಾರಗಳನ್ನು ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಸಂಪುಟದ ಮುಂದೆ ತರಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಸಭೆಯಲ್ಲಿ ಸಚಿವರಾದ ಕೆ.ಜೆ. ಜಾರ್ಜ್‌, ದಿನೇಶ್‌ ಗುಂಡೂರಾವ್‌, ಮಧು ಬಂಗಾರಪ್ಪ, ಮಂಕಾಳ ವೈದ್ಯ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.