ADVERTISEMENT

‘ತೆರವಾಗದ 22,173 ಎಕರೆ ಅರಣ್ಯ ಒತ್ತುವರಿ’

ಶೇ 74ರಷ್ಟು ಒತ್ತುವರಿ ಮುಂದುವರಿಕೆ: ಸಿಎಜಿ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 18:15 IST
Last Updated 25 ಜುಲೈ 2024, 18:15 IST
<div class="paragraphs"><p>ಒತ್ತುವರಿ ತೆರವು </p></div>

ಒತ್ತುವರಿ ತೆರವು

   

ಬೆಂಗಳೂರು: ಹೈಕೋರ್ಟ್‌ನ ಸೂಚನೆ ಇದ್ದರೂ ಅರಣ್ಯ ಇಲಾಖೆಯು 22,173 ಎಕರೆಯಷ್ಟು ಅರಣ್ಯ ಜಮೀನಿನ ಒತ್ತುವರಿ ತೆರವಿಗೆ ಕ್ರಮ ತೆಗೆದುಕೊಂಡಿಲ್ಲ. ಒತ್ತುವರಿ ತೆರವಿನಲ್ಲಿ ಇಲಾಖೆ ವಿಫಲವಾಗಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.

ಸಿಎಜಿಯ ‘ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳ ಲೆಕ್ಕಪರಿಶೋಧನಾ’ ವರದಿಯಲ್ಲಿ ಈ ಮಾಹಿತಿ ಇದೆ. 

ADVERTISEMENT

ಅರಣ್ಯ ಪ್ರದೇಶ ಒತ್ತುವರಿಗೆ ಸಂಬಂಧಿಸಿದಂತೆ 4,026 ಪ್ರಕರಣಗಳು ಇಲಾಖೆಯಲ್ಲಿ ದಾಖಲಾಗಿದ್ದವು. ಈ ಪ್ರಕರಣಗಳಲ್ಲಿ ಒಟ್ಟು 29,688 ಎಕರೆಗಳಷ್ಟು ಅರಣ್ಯ ಜಮೀನು ಒತ್ತುವರಿಯಾಗಿತ್ತು. ‘ಅಷ್ಟೂ ಪ್ರಕರಣಗಳಲ್ಲಿ ಒತ್ತುವರಿಯನ್ನು 2016ರ ಜೂನ್‌ ವೇಳೆಗೆ ಸಂಪೂರ್ಣವಾಗಿ ತೆರವು ಮಾಡುತ್ತೇವೆ’ ಎಂದು ಇಲಾಖೆಯು ಕರ್ನಾಟಕ ಹೈಕೋರ್ಟ್‌ಗೆ ಕ್ರಿಯಾಯೋಜನೆಯನ್ನು ಸಲ್ಲಿಸಿತ್ತು. ಅದರಂತೆ ಕ್ರಮ ತೆಗೆದುಕೊಳ್ಳಲು ಹೈಕೋರ್ಟ್‌ ಸೂಚಿಸಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಆದರೆ, 2022ರ ಮಾರ್ಚ್‌ ಅಂತ್ಯದ ವೇಳೆಗೆ ಇಲಾಖೆ ತೆರವು ಮಾಡಿದ್ದು 7,515 ಎಕರೆಗಳಷ್ಟು ಮಾತ್ರ. ತೆರವು ಮಾಡಬೇಕಿದ್ದ ಒಟ್ಟು ಅರಣ್ಯ ಜಮೀನಿನಲ್ಲಿ ಇದು ಶೇಕಡ 25.31ರಷ್ಟಾಗುತ್ತದೆ. ಶೇ 74.69ರಷ್ಟು ಅರಣ್ಯ ಜಮೀನು ಇನ್ನೂ ಒತ್ತುವರಿಯಲ್ಲೇ ಇದೆ ಎಂದು ಸಿಎಜಿ ಹೇಳಿದೆ.

ಅರಣ್ಯ ಜಮೀನು ಒತ್ತುವರಿ ಪ್ರಕರಣಗಳಲ್ಲಿ ಒತ್ತುವರಿಯನ್ನು ಸಕ್ರಮಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿ ಇದ್ದರೆ, ತೆರವು ಕಾರ್ಯಾಚರಣೆ ನಡೆಸುವಂತಿಲ್ಲ ಎಂದು 2015ರ ಮಾರ್ಚ್‌ನಲ್ಲಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಸಕ್ರಮ ಅರ್ಜಿ ತಿರಸ್ಕೃತವಾದರೆ ತೆರವು ಕಾರ್ಯಾಚರಣೆ ನಡೆಸಬೇಕು ಎಂದೂ ಹೇಳಿತ್ತು. ಆದರೆ ಹೀಗೆ ಸಕ್ರಮ ಅರ್ಜಿ ತಿರಸ್ಕೃತವಾಗಿದ್ದರೂ 2,965 ಎಕರೆಗಳಷ್ಟು ಅರಣ್ಯ ಜಮೀನಿನ ಒತ್ತುವರಿ ತೆರವು ಮಾಡಿಲ್ಲ ಎನ್ನುತ್ತದೆ ವರದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.