ಬೆಳಗಾವಿ: ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ನೀಡಲಾದ ಅನು ದಾನದ ಮೊತ್ತದ ಮೇಲೆ ಬಂದಿದ್ದ ಬಡ್ಡಿಯನ್ನು ಅನಧಿಕೃತ ಉದ್ದೇಶಗಳಿಗಾಗಿ ಬಳಸಿದ ಜಿಲ್ಲಾಧಿಕಾರಿಗಳ ವಿರುದ್ಧ ಶೀಘ್ರ ಕ್ರಮ ಕೈಗೊಂಡು, ಮುಖ್ಯಕಾರ್ಯದರ್ಶಿಗೆ ವರದಿ ಸಲ್ಲಿಸುವಂತೆ ಭಾರತದ ಲೆಕ್ಕ ಪರಿಶೋಧಕರು ಮತ್ತು ಮಹಾಲೇಖಪಾಲರು (ಸಿಎಜಿ) ಸೂಚಿಸಿದ್ದಾರೆ.
ಮಹಾನಗರಪಾಲಿಕೆಗಳಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ (ಹಂತ–3) ಮೇಲಿನ ಲೆಕ್ಕಪರಿಶೋಧನಾ ವರದಿಯನ್ನು ವಿಧಾನಮಂಡಲದಲ್ಲಿ ಶುಕ್ರವಾರ ಮಂಡಿಸಲಾಯಿತು.
ಸಂಬಂಧ ಪಟ್ಟ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೇ ಕಾಮಗಾರಿ ನಡೆಸಿರುವ ಎಲ್ಲ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು, ಉನ್ನತ ಅಧಿಕಾರಿಗಳ ಮಂಜೂರಾತಿ ತಪ್ಪಿಸಲಿ ಕಾಮಗಾರಿ ವಿಭಜನೆ ಮಾಡಿದ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಬೇಕು ಎಂದೂ ವರದಿ ವರದಿ ಶಿಫಾರಸು ಮಾಡಿದೆ.
ಗುತ್ತಿಗೆದಾರರ ಆಯ್ಕೆಯಲ್ಲಿ ಮಾನದಂಡವನ್ನೇ ನಿಗದಿ ಮಾಡದೇ ಅಕ್ರಮ ಎಸಗಲಾಗಿದೆ. ಇದಕ್ಕೆ ಕಾರಣ ಕರ್ತರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಪೂರ್ಣ ರಸ್ತೆ ಕಾಮಗಾರಿ ನಡೆಸಿದ ಲೋಪಕ್ಕೆ ಕಾರಣರಾದ ಅಧಿಕಾರಿಗಳಿಂದ ₹11.36 ಲಕ್ಷ ವಸೂಲಿ ಮಾಡಬೇಕು ಎಂದು ಶಿಫಾರಸು ಮಾಡಿದೆ.
ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ₹108.75 ಕೋಟಿಗಳನ್ನು ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ವೆಚ್ಚ ಮಾಡಲಾಗಿದೆ ಎಂದು ವರದಿ ಉಲ್ಲೇಖಿದೆ.
10 ಮಹಾನಗರ ಪಾಲಿಕೆಗಳ ಪೈಕಿ ಬಳ್ಳಾರಿ, ಮೈಸೂರು, ತುಮಕೂರು ಹಾಗೂ ವಿಜಯಪುರ ಪಾಲಿಕೆಗಳ ದಾಖಲೆಗಳನ್ನು ಸಿಎಜಿ ಪರಿಶೀಲನೆಗೆ ಒಳಪಡಿಸಿದೆ. ಲಭ್ಯವಿರುವ ₹931.63 ಕೋಟಿಯಲ್ಲಿ ₹922.35 ಕೋಟಿ ವೆಚ್ಚ ಮಾಡಲಾಗಿದೆ. ನಾಲ್ಕು ಪಾಲಿಕೆಗಳಲ್ಲಿನ 277 ಪ್ಯಾಕೇಜ್‌ಗಳಲ್ಲಿ 52 ಪ್ಯಾಕೇಜ್‌ಗಳನ್ನು (ಶೇ 23ರಷ್ಟು) ಪರಿಶೀಲನೆ ಮಾಡಲಾಗಿದೆ.
ಮುಖ್ಯಮಂತ್ರಿ ನಗರೋತ್ಥಾನ ಮೊದಲ ಪಟ್ಟಿಯ ಅನುಷ್ಠಾನ ಕ್ಕಾಗಿ ಸರ್ಕಾರ 2013ರಲ್ಲಿ ಮಾರ್ಗಸೂಚಿ ಹೊರಡಿಸಿತು. ಅದರಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸುವ ಮಾನದಂಡವೇ ಇರಲಿಲ್ಲ. ಹೀಗಾಗಿ, ಮಾನದಂಡವೇ ಇಲ್ಲದೇ ಕ್ರಿಯಾಯೋಜನೆಗಳು ಸಿದ್ಧಗೊಂಡವು. 2014ರಲ್ಲಿ ವಿವರವಾದ ಮಾರ್ಗಸೂಚಿ ಹೊರಡಿಸಲಾಯಿತಾದರೂ ಹಿಂದೆ ಸಿದ್ಧಗೊಂಡಿದ್ದ ಕ್ರಿಯಾಯೋಜನೆಯನ್ನು ಪರಿಷ್ಕರಿಸುವಂತೆ ಸೂಚಿಸಲಿಲ್ಲ. ಪರಿಶೀಲನೆಗೆ ಒಳಪಡಿಸಿದ ಪಾಲಿಕೆಗಳಲ್ಲಿ ಕ್ರಿಯಾ ಯೋಜನೆಗಳಿಗೆ ನಂತರದ ನಾಲ್ಕೈದು ಬಾರಿ ಪರಿಷ್ಕರಣೆ ಮಾಡಿದವು. ಸರ್ಕಾರ ತನ್ನದೇ ಸೂಚನೆಗಳನ್ನು ಕಡೆಗಣಿಸಿ ಪರಿಷ್ಕೃತ ಯೋಜನೆಗಳಿಗೆ ಅನುಮೋದನೆ ನೀಡುವ ಪ್ರಮಾದ ಮಾಡಿತು ಎಂದು ವರದಿ ಉಲ್ಲೇಖಿಸಿದೆ.
ಪರೀಕ್ಷೆಗೆ ಗುರಿಪಡಿಸಲಾದ ಪಾಲಿಕೆಗಳಲ್ಲಿ ವಿಜಯಪುರ ಪಾಲಿಕೆ ಯಲ್ಲಿ ಮಾತ್ರ ಸಂಚಾರ ನಿರ್ವಹಣೆ ಕಾಮಗಾರಿ ನಡೆದಿದೆ. ಉಳಿದ ಪಾಲಿಕೆಗಳಲ್ಲಿ ಈ ಉದ್ದೇಶಕ್ಕೆ ₹269.28 ಕೋಟಿ ನಿಗದಿಪಡಿಸಲಾಗಿದ್ದು, ₹108.75 ಕೋಟಿಯನ್ನು(ಶೇ 40ರಷ್ಟು) ಯೋಜನಾ ಮಾರ್ಗಸೂಚಿಗೆ ವಿರುದ್ಧವಾಗಿ ಕೈಗೊಳ್ಳಲಾದ ಯೋಜನೆಗಳಡಿ ತೆಗೆದುಕೊಳ್ಳಲಾಗಿದೆ. ಉದ್ದೇಶಿತ ಕಾಮಗಾರಿಗೆ ವಿರುದ್ಧವಾಗಿ ಮತ್ತೊಂದಕ್ಕೆ ಹಂಚಿಕೆ ಮಾಡಿವೆಚ್ಚ ಮಾಡಲಾಗಿದೆ.
ನಗರೋತ್ಥಾನ ಹಂತ 2ರಿಂದ ಹಂತ 3ಕ್ಕೆ ಹೆಚ್ಚಿನ ಬಡ್ಡಿ ದರದಲ್ಲಿ ಪಡೆದ ಸಾಲವನ್ನು ಮರುಪಾವತಿ ಮಾಡದೇ ಇರುವುದರಿಂದ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯು ₹5 ಕೋಟಿ ಬಡ್ಡಿ ಮಾಡಿತು.
ಇದಲ್ಲದೇ, ಸಾಲ ತೆಗೆದುಕೊಳ್ಳುವಾಗ ನಮೂದಿಸಿದ ಬಡ್ಡಿ ದರಕ್ಕಿಂತ ಹೆಚ್ಚಿದ ದರದಲ್ಲಿ ಸಾಲ ಪಡೆದಿರುವುದು, ಕಡಿಮೆ ಬಡ್ಡಿದರದಲ್ಲಿ ಸಾಲ ಲಭ್ಯವಿದ್ದರೂ ಅದನ್ನು ಪಡೆಯದಿರುವುದು ಹಾಗೂ ಸಾಲ ಮರುಪಾವತಿ ವಿಳಂಬಮಾಡಿದ್ದರಿಂದಾಗಿ ₹4.87 ಕೋಟಿ ಹೆಚ್ಚುವರಿ ಹೊರೆಯಾಯಿತು. ವಿಜಯನಗರ ಪಾಲಿಕೆಯು ಕಾನೂನು ಅನುಸರಿಸದೇ ಭೂ ಪರಿಹಾರ ಪಾವತಿಯಲ್ಲಿ ವಿಳಂಬ ಮಾಡಿದ್ದರಿಂದಾಗಿ ₹3.96 ಕೋಟಿ ಹೆಚ್ಚುವರಿ ಹೊರೆಯಾಯಿತು ಎಂದು ವರದಿ ವಿವರಿಸಿದೆ.
ಅನರ್ಹ ಗುತ್ತಿಗೆದಾರರಿಗೆ ಟೆಂಡರ್
ಮೈಸೂರು ಮತ್ತು ಬಳ್ಳಾರಿ ಮಹಾನಗರ ಪಾಲಿಕೆಗಳು 31ಪ್ಯಾಕೇಜ್‌ಗಳಲ್ಲಿ ಆರು ಪ್ಯಾಕೇಜ್‌ಗಳನ್ನು ಅನರ್ಹ ಗುತ್ತಿಗೆದಾರರಿಗೆ ನೀಡಿವೆ ಎಂದು ವರದಿ ಆಕ್ಷೇಪಿಸಿದೆ.
ಬಿಡ್ ಸಾಮರ್ಥ್ಯದ ತಪ್ಪು ಲೆಕ್ಕಾಚಾರ, ನಕಲಿ ಪ್ರಮಾಣಪತ್ರ ಗಳ ಸಲ್ಲಿಕೆ ಬಗ್ಗೆ ಗೊತ್ತಿದ್ದರೂ ಅಂತಹ ಗುತ್ತಿಗೆದಾರರನ್ನು ತಿರಸ್ಕರಿಸಿಲ್ಲ. ಟೆಂಡರ್ ದಾಖಲೆಗಳಲ್ಲಿ ನಿಗದಿಪಡಿಸಿದ ಕನಿಷ್ಠ ಅನರ್ಹತೆಯ ಮಾನದಂಡವನ್ನೇ ಅನುಸರಿಸಿಲ್ಲ ಎಂದು ವರದಿ ಹೇಳಿದೆ.
ಬಳ್ಳಾರಿ, ಮೈಸೂರು, ತುಮಕೂರು ಪಾಲಿಕೆಗಳು ಬಿಡ್ ಮಾನ್ಯತೆ ಅವಧಿ ಮುಗಿದ ಬಳಿಕ 43 ಪ್ಯಾಕೇಜ್‌ಗಳಲ್ಲಿ 18 ಪ್ಯಾಕೇಜ್‌ಗಳನ್ನು (ಶೇ 42) ಗುತ್ತಿಗೆ ನೀಡಿವೆ.
ಕಾಮಗಾರಿ ಮಾಡದಿದ್ದರೂ ₹1.4 ಕೋಟಿ
ಬಳ್ಳಾರಿ, ತುಮಕೂರು ಹಾಗೂ ವಿಜಯಪುರ ಪಾಲಿಕೆಗಳಲ್ಲಿ ಕೈಗೊಳ್ಳಲಾದ 30 ಪ್ಯಾಕೇಜ್‌ಗಳಲ್ಲಿ ಆರು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ಮಾಡದೇ ಇದ್ದರೂ ₹1.4 ಕೋಟಿ ಹಣವನ್ನು ಗುತ್ತಿಗೆದಾರರಿಗೆ ನೀಡಲಾಗಿದೆ.
ಸಲಹೆಗಾರರಿಗೆ ಅನುಭವವೇ ಇಲ್ಲ
ಕಾಮಗಾರಿಗಳ ಗುಣಮಟ್ಟಕ್ಕೆ ಪರಿಶೀಲನೆಗೆ ನೇಮಕ ಮಾಡಿಕೊಳ್ಳಲಾದ ಯೋಜನಾ ನಿರ್ವಹಣಾ ಸಲಹೆಗಾರರಲ್ಲಿ(ಪಿಎಂಸಿ) ಮೂವರಿಗೆ ಹಣಕಾಸಿನ ವಹಿವಾಟು, ಅನುಭವ ಹಾಗೂ ತಾಂತ್ರಿಕ ತಿಳಿವಳಿಕೆಯೇ ಇರಲಿಲ್ಲ. ಅನರ್ಹ ಸಲಹೆಗಾರರಿಗೆ ಕೆಲಸವನ್ನು ವಹಿಸಲಾಗಿದೆ. ಹೀಗಾಗಿ, ಪಿಎಂಸಿ ಸಲ್ಲಿಸಿದ ಗುಣಮಟ್ಟ ಪರಿಶೀಲನಾ ವರದಿಯಲ್ಲಿ ಅಕ್ರಮ ಗಳು ನಡೆದಿವೆ. ನಿರ್ವಹಿಸಿದ ಕಾಮಗಾರಿಗಳ ಪರಿಮಾಣದಲ್ಲಿ ವ್ಯತ್ಯಾಸ, ಪರಿಶೀಲಿಸಿದ ಕಾಮಗಾರಿಗಳ ಗುಣಮಟ್ಟವನ್ನೇ ಪ್ರಮಾಣೀಕರಿಸದಿರುವುದು, ದಾಖಲೆ ಹಾಗೂ ಲೆಕ್ಕಪತ್ರಗಳ ನಿರ್ವಹಣೆ ಸಮರ್ಪಕವಾಗಿಲ್ಲ ಎಂದು ವರದಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.