ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ವ್ಯಾಪ್ತಿಗೆ ಬರುವ, ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಕ್ಯಾಮೆರಾ ಚಿತ್ರೀಕರಣ ಮತ್ತು ಡ್ರೋನ್ ಮೂಲಕ ಚಿತ್ರೀಕರಣ ನಡೆಸುವುದಕ್ಕೆ ನಿಷೇಧ ಹೇರಿ ತಹಶೀಲ್ದಾರ್ ಟಿ.ರಮೇಶ್ ಬಾಬು ಆದೇಶ ಹೊರಡಿಸಿದ್ದಾರೆ.
ಬಂಡೀಪುರದ ಜಿ.ಎಸ್. ವೆಟ್ಟ ವಲಯದ ಅರಣ್ಯ ಅಧಿಕಾರಿ ಅವರು ತಹಶೀಲ್ದಾರ್ ಅವರಿಗೆ ಪತ್ರ ಬರೆದು ಈ ಬಗ್ಗೆ ಮನವಿ ಮಾಡಿದ್ದರು.
‘ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೋರ್ ವಲಯದಲ್ಲಿ ಬರುವ ದೇವಸ್ಥಾನಕ್ಕೆ ಅತಿ ಹೆಚ್ಚು ಭಕ್ತರು, ಪ್ರವಾಸಿಗರು, ಭೇಟಿ ನೀಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರು ಮತ್ತು ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಸಂಜೆ ವೇಳೆ ದೇವಾಲಯದ ಹತ್ತಿರ ಬರುವ ಕಾಡಾನೆಯ ಬಳಿ ಪ್ರವಾಸಿಗರು ತೆರಳಿ ಛಾಯಾಚಿತ್ರ ತೆಗೆಯುವುದು, ಸೆಲ್ಫಿ ತೆಗೆದು ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಕಾಡಾನೆಯಿಂದ ಜನರಿಗೆ ಮತ್ತು ಜನರಿಂದ ಕಾಡಾನೆಗೂ ತೊಂದರೆಯಾಗಬಹುದು. ವಲಯ ಅರಣ್ಯಾಧಿಕಾರಿಯವರ ಕೋರಿಕೆ ಮೇರೆಗೆ, ಮುಂಜಾಗ್ರತಾ ಕ್ರಮವಾಗಿ ದೇವಾಲಯದ ಸುತ್ತಮುತ್ತ ಕಾಡುಪ್ರಾಣಿಗಳನ್ನು ಕ್ಯಾಮೆರಾ ಮತ್ತು ಡ್ರೋನ್ ಮೂಲಕ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ ’ ಎಂದು ತಹಶೀಲ್ದಾರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಪತ್ರಕರ್ತ ವಿಶ್ವೇಶ್ವರ ಭಟ್ ಅವರು ಇತ್ತೀಚೆಗೆ ಸಂಜೆಯ ನಿಗದಿತ ಸಮಯ ಮೀರಿದ ಬಳಿಕ ಬೆಟ್ಟಕ್ಕೆ ಭೇಟಿ ನೀಡಿದ್ದು ಮಾತ್ರವಲ್ಲದೆ, ಡ್ರೋನ್ ಕ್ಯಾಮೆರಾದಲ್ಲಿ ಕಾಡಾನೆ ಮತ್ತು ದೇವಸ್ಥಾನ ಪ್ರದೇಶವನ್ನು ಚಿತ್ರೀಕರಣ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.