ADVERTISEMENT

‘ಕೈ’ಗೆ ಗ್ಯಾರಂಟಿ ಯೋಜನೆಗಳು ನುಂಗಲಾರದ, ಉಗಿಯಲಾರದ ಬಿಸಿ ತುಪ್ಪವಾಗಿದೆ: ಆರ್.ಅಶೋಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ನವೆಂಬರ್ 2024, 6:59 IST
Last Updated 19 ನವೆಂಬರ್ 2024, 6:59 IST
ಆರ್.ಅಶೋಕ
ಆರ್.ಅಶೋಕ   

ಬೆಂಗಳೂರು: ಅನ್ನಭಾಗ್ಯ ಯೋಜನೆಯ ಹೊರೆ ಹೊರಲಾಗದೆ ಲಕ್ಷಾಂತರ ಬಿಪಿಎಲ್‌ ಕಾರ್ಡ್‌ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರದ್ದು ಮಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ತೆರಿಗೆದಾರರು, ಸರ್ಕಾರಿ ನೌಕರರಿಗೆ ಉಚಿತ ಅಕ್ಕಿ ಕೊಡಬೇಕಾ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಹಾಗಾದರೆ, ಶಕ್ತಿ ಯೋಜನೆ ‌‌‌ಅಡಿಯಲ್ಲಿ ತೆರಿಗೆದಾರರು, ಸರ್ಕಾರಿ ನೌಕರರು ಉಚಿತ ಬಸ್‌ ಸೇವೆ ಬಳಸುತ್ತಿಲ್ಲವೇ?, ಗೃಹಜ್ಯೋತಿ ಯೋಜನೆಯಡಿಯಲ್ಲಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಪಡೆಯುತ್ತಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಅವರೇ, ನೀವು ನೀಡಿರುವ ಹೇಳಿಕೆ ಶಕ್ತಿ ಯೋಜನೆ ಮತ್ತು ಗೃಹಜ್ಯೋತಿ ಯೋಜನೆಗಳ ಫಲಾನುಭವಿಗಳಿಗೆ ಶೀಘ್ರದಲ್ಲೇ ಕೊಕ್‌ ನೀಡಲಾಗುತ್ತದೆ ಎಂಬುದರ ಮುನ್ಸೂಚನೆಯೇ ಎಂದು ಅಶೋಕ ಪ್ರಶ್ನಿಸಿದ್ದಾರೆ.

ADVERTISEMENT

‘ಎಡಬಿಡಂಗಿ ಕಾಂಗ್ರೆಸ್‌ ಸರ್ಕಾರಕ್ಕೆ ಒಂದು ದೂರದೃಷ್ಟಿ, ಪೂರ್ವ ಸಿದ್ಧತೆ ಹಾಗೂ ಯೋಜನೆ ಯಾವುದು ಇಲ್ಲ. ಕೇವಲ ಚುನಾವಣೆ ಗೆಲ್ಲಲ್ಲು ಮನಸ್ಸಿಗೆ ಬಂದ ಹಾಗೆ ಕಾಕಾ ಪಾಟೀಲನಿಗೂ ಉಚಿತ, ಮಹಾದೇವಪ್ಪನಿಗೂ ಉಚಿತ ಎಂದು ಸುಳ್ಳು ಪ್ರಚಾರ ಮಾಡಿ ಅಧಿಕಾರಕ್ಕೆ ಬಂದಿದೆ. ಆದರೆ, ಈಗ ಕಾಂಗ್ರೆಸ್‌ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳು ನುಂಗಲಾರದ, ಉಗಿಯಲಾರದ ಬಿಸಿ ತುಪ್ಪವಾಗಿದೆ. ಇದೇ ಸತ್ಯ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.