ADVERTISEMENT

ಶಿಕ್ಷಕಿಯರ ವರ್ಗಾವಣೆ ರದ್ದು: ಹೈಕೋರ್ಟ್‌

ಕಟ್ಟುನಿಟ್ಟಾಗಿ ನಿಯಮ ಪಾಲಿಸಿ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 16:21 IST
Last Updated 22 ಜುಲೈ 2024, 16:21 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಐವತ್ತು ವರ್ಷ ಮೇಲ್ಪಟ್ಟ ಶಿಕ್ಷಕರ ವರ್ಗಾವಣೆಗೆ ವಿನಾಯಿತಿ ಇದ್ದರೂ ರಾಜ್ಯ ಸರ್ಕಾರ 55 ವರ್ಷ ಹಾಗೂ 58 ವರ್ಷದ ಇಬ್ಬರು ಮಹಿಳಾ ಶಿಕ್ಷಕಿಯರನ್ನು ಹೆಚ್ಚುವರಿ ಶಿಕ್ಷಕರು ಎಂದು ವರ್ಗಾವಣೆ ಮಾಡಿದ್ದ ಆದೇಶ ರದ್ದುಗೊಳಿಸಿದ್ದ ಕೆಎಟಿ ಆದೇಶವನ್ನು ಎತ್ತಿಹಿಡಿದಿರುವ ಹೈಕೋರ್ಟ್‌, ‘ನಿಯಮಗಳಲ್ಲಿ ವರ್ಗಾವಣೆ ಮಾಡುವುದಕ್ಕೆ ವಿನಾಯಿತಿ ಇದ್ದಾಗ ನೌಕರರು ಅರ್ಜಿ ಸಲ್ಲಿಸಲಿ ಅಥವಾ ಬಿಡಲಿ, ಚಾಲ್ತಿಯಲ್ಲಿ ಇರುವಂತಹ ನಿಯಮವನ್ನು ಅಧಿಕಾರಿಗಳು ಜಾರಿಗೊಳಿಸಬೇಕು’ ಎಂದು ಕಟ್ಟುನಿಟ್ಟಾಗಿ ಆದೇಶಿಸಿದೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಬೂದಿಹಾಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉಮಾದೇವಿ ಹುಂಡೇಕರ್ (55) ಮತ್ತು ಬೀಳಗಿ ತಾಲ್ಲೂಕಿನ ತೆಗ್ಗಿ ಗ್ರಾಮದ ಪ್ರಭಾವತಿ ರೋಣದ (58) ಅವರನ್ನು ಹೆಚ್ಚುವರಿ ಶಿಕ್ಷಕರೆಂದು ಸರ್ಕಾರ ವರ್ಗಾವಣೆ ಮಾಡಿತ್ತು. ಇದನ್ನು ಪ್ರಶ್ನಿಸಿ ಇಬ್ಬರೂ ಕೆಎಟಿ (ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ) ಮೊರೆ ಹೋಗಿದ್ದರು. ಕೆಎಟಿಯು ಅರ್ಜಿ ಮಾನ್ಯ ಮಾಡುವ ಮೂಲಕ ವರ್ಗಾವಣೆ ಆದೇಶವನ್ನು ಎತ್ತಿ ಹಿಡಿದಿತ್ತು.

ಕೆಎಟಿ ಆದೇಶ ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಸರ್ಕಾರ ಮೇಲ್ಮನವಿ ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ, ‘ಶಾಸನದಲ್ಲಿ ಅನೂಕೂಲಕರ ಅಂಶಗಳನ್ನು ಅಳವಡಿಸಿದಾಗ, ಅದನ್ನು ಫಲಾನುಭವಿಗಳ ಪರವಾಗಿ ಜಾರಿಗೊಳಿಸಬೇಕು. ಅದು ಬಿಟ್ಟು ಫಲಾನುಭವಿ ಅರ್ಜಿ ಸಲ್ಲಿಸಿದ್ದಾರೆಯೇ ಇಲ್ಲವೇ ಎಂಬುದನ್ನು ನೋಡಬಾರದು’ ಎಂದು ಕುಟುಕಿದೆ.

ADVERTISEMENT

‘ಇಬ್ಬರೂ ಮಹಿಳಾ ಶಿಕ್ಷಕಿಯರಿದ್ದಾರೆ. ಅವರಿಬ್ಬರಿಗೂ 50 ವರ್ಷದ ಮೇಲಾಗಿದೆ. ಇಂತಹವರನ್ನು ಹೆಚ್ಚುವರಿ ಶಿಕ್ಷಕರೆಂದು ಘೋಷಿಸಿ, ವರ್ಗಾವಣೆ ಮಾಡಬಾರದಿತ್ತು. ಕರ್ನಾಟಕ ರಾಜ್ಯ ನಾಗರಿಕ ಸೇವಾ ಕಾಯ್ದೆ–2020ರ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಲಂ 10(1)(6) ಅನ್ವಯ ಇಂತಹವರ ವರ್ಗಾವಣೆಗೆ ವಿನಾಯಿತಿ ಇದೆ. ಆದರೂ ಅವರನ್ನು ಹೆಚ್ಚುವರಿ ಶಿಕ್ಷಕರು ಎಂದು ಘೋಷಿಸಿರುವುದು ಸರಿಯಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.