ADVERTISEMENT

ರಾಜ್ಯದಲ್ಲಿ ಕ್ಯಾನ್ಸರ್ ಪ್ರಕರಣ ಹೆಚ್ಚಳ, ಸ್ತನ ಕ್ಯಾನ್ಸರ್ ಪ್ರಮಾಣ ಅಧಿಕ

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಿಂದ ವಿಶ್ಲೇಷಣೆ *ವಾರ್ಷಿಕ 87 ಸಾವಿರ ಪ್ರಕರಣ ಹೊಸದಾಗಿ ದೃಢ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2023, 3:10 IST
Last Updated 4 ನವೆಂಬರ್ 2023, 3:10 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ರಾಜ್ಯದಲ್ಲಿ ಕ್ಯಾನ್ಸರ್ ಪ್ರಕರಣಗಳು ಪ್ರತಿ ವರ್ಷ ಶೇ 1ರಷ್ಟು ಹೆಚ್ಚಳವಾಗುತ್ತಿದ್ದು, ಸ್ತನ ಕ್ಯಾನ್ಸರ್ ಪ್ರಕರಣ ಏರುಗತಿ ಪಡೆದಿರುವುದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಡೆಸಿದ ವಿಶ್ಲೇಷಣೆಯಿಂದ ದೃಢಪಟ್ಟಿದೆ.

ಸಂಸ್ಥೆಯ ಕ್ಯಾನ್ಸರ್ ನೋಂದಣಿ ಆಧಾರದಲ್ಲಿ ಕ್ಯಾನ್ಸರ್ ತಜ್ಞರು ಈ ವಿಶ್ಲೇಷಣೆ ನಡೆಸಿದ್ದಾರೆ. ರಾಜ್ಯದಲ್ಲಿ ಸದ್ಯ 2.3 ಲಕ್ಷ ಸಕ್ರಿಯ ಕ್ಯಾನ್ಸರ್ ಪ್ರಕರಣಗಳಿದ್ದು, ವಾರ್ಷಿಕ 87 ಸಾವಿರ ಪ್ರಕರಣಗಳು ಹೊಸದಾಗಿ ದೃಢಪಡುತ್ತಿವೆ. ಇದರ ಆಧಾರದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ದೃಢಪಡುವ ಪ್ರಕರಣಗಳನ್ನು ಅಂದಾಜಿಸಿದ್ದಾರೆ.

ADVERTISEMENT

ಪುರುಷರಲ್ಲಿ ಹೆಚ್ಚಾಗಿ ಪ್ರಾಸ್ಪೇಟ್, ಬಾಯಿ, ಜಠರ ಮತ್ತು ಅನ್ನನಾಳದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಸ್ತನ ಮತ್ತು ಗರ್ಭಕಂಠದ ಗರ್ಭಾಶಯದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಪತ್ತೆಯಾಗುತ್ತಿದೆ. ಪಾಶ್ಚಾತ್ಯ ಆಹಾರ ಪದ್ಧತಿ, ಬದಲಾದ ಜೀವನ ವಿಧಾನ ಹಾಗೂ ಧೂಮಪಾನದಂತಹ ವ್ಯಸನವೇ ಕ್ಯಾನ್ಸರ್‌ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ಸಂಸ್ಥೆ ವಿಶ್ಲೇಷಿಸಿದೆ. 

ಮಕ್ಕಳಲ್ಲೂ ಕ್ಯಾನ್ಸರ್ ಪ್ರಕರಣಗಳೂ ಹೆಚ್ಚಳವಾಗುತ್ತಿವೆ. 14 ವರ್ಷದೊಳಗಿನವರಲ್ಲಿ ಲ್ಯುಕೇಮಿಯಾ ಮತ್ತು ಲಿಂಫೋಮಾ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಒಟ್ಟಾರೆ ಪ್ರಕರಣಗಳಲ್ಲಿ ಶೇ 7.9 ರಷ್ಟು ಈ ಮಾದರಿಯ ಕ್ಯಾನ್ಸರ್ ಪತ್ತೆಯಾಗುತ್ತಿವೆ. ರಾಜ್ಯದಲ್ಲಿ ಸರಾಸರಿ ಒಂದು ಲಕ್ಷ ಪುರುಷರಲ್ಲಿ 46 ಮಂದಿ ಹಾಗೂ ಮಹಿಳೆಯರಲ್ಲಿ 23 ಮಂದಿ ತಂಬಾಕು ಸಂಬಂಧಿತ ಕ್ಯಾನ್ಸರ್‌ಗೆ ಒಳಪಡುತ್ತಿದ್ದಾರೆ.

ಸ್ತನ ಕ್ಯಾನ್ಸರ್ ಪ್ರಮಾಣ ಅಧಿಕ:

ಸಂಸ್ಥೆಯ ಪ್ರಕಾರ ರಾಜ್ಯದಲ್ಲಿ ವರದಿಯಾಗುತ್ತಿರುವ ಕ್ಯಾನ್ಸರ್ ಪ್ರಕರಣಗಳಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣ ಶೇ 29.4 ರಷ್ಟಿದೆ. ಗರ್ಭಕಂಠದ ಗರ್ಭಾಶಯ ಕ್ಯಾನ್ಸರ್ ಶೇ 10.8, ಶ್ವಾಸಕೋಶ ಕ್ಯಾನ್ಸರ್ ಶೇ 9.4, ಅಂಡಾಶಯ ಕ್ಯಾನ್ಯರ್ ಶೇ 7, ಉದರ ಹಾಗೂ ಮೂತ್ರನಾಳ ಕ್ಯಾನ್ಸರ್ ತಲಾ ಶೇ 6.6ರಷ್ಟು ದೃಢಪಡುತ್ತಿದೆ. ಇನ್ನುಳಿದ ಕ್ಯಾನ್ಸರ್ ಪ್ರಮಾಣ ಶೇ 6ಕ್ಕಿಂತ ಕಡಿಮೆಯಿದೆ. 

‘ಹಿಂದೆ ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿ ದೃಢಪಡುತ್ತಿತ್ತು, ಈಗ ಈ ಪ್ರಕರಣಗಳ ಸಂಖ್ಯೆ ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಸ್ತನ ಕ್ಯಾನ್ಸರ್ ಪ್ರಕರಣ ಹೆಚ್ಚಿನ ಸಂಖ್ಯೆಯಲ್ಲಿ ಖಚಿತಪಡುತ್ತಿವೆ. ಆದ್ದರಿಂದ ತಪಾಸಣೆಯನ್ನೂ ವಿವಿಧೆಡೆ ನಡೆಸಲಾಗುತ್ತಿದೆ. ಕ್ಯಾನ್ಸರ್ ಕಾಯಿಲೆ ಹಾಗೂ ಚಿಕಿತ್ಸೆ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಆದರೂ ರೋಗಿಗಳು ತಡವಾಗಿ ಆಸ್ಪತ್ರೆಗೆ ಬರುತ್ತಿದ್ದಾರೆ. ಬೇಗ ಆಸ್ಪತ್ರೆಗಳಿಗೆ ತೆರಳಿ, ತಪಾಸಣೆ ಮಾಡಿಸಿಕೊಂಡಲ್ಲಿ ಜೀವಕ್ಕೆ ಅಪಾಯವಾಗುವುದನ್ನು ತಪ್ಪಿಸಲು ಸಾಧ್ಯ’ ಎಂದು ಸಂಸ್ಥೆಯ ಡಾ. ಸುರೇಶ್ ಬಾಬು ತಿಳಿಸಿದರು.

‘ಸ್ತನದಲ್ಲಿ ಕಾಣಿಸಿಕೊಳ್ಳುವ ಗಡ್ಡೆಯಲ್ಲಿ ನೋವು ಕಾಣಿಸಿಕೊಳ್ಳುವುದು ಕಡಿಮೆ. ಇದನ್ನು ಮಹಿಳೆಯರು ಕಡೆಗಣಿಸುತ್ತಾರೆ. ಹೀಗಾಗಿ, ಸ್ತನ ಕ್ಯಾನ್ಸರ್ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.