ADVERTISEMENT

ಕೆಪಿಎಸ್‌ಸಿ: ಅಂಗವಿಕಲ ಅಭ್ಯರ್ಥಿಗಳು ಅತಂತ್ರ

ಸಹಾಯಕ ಎಂಜಿನಿಯರ್ ಹುದ್ದೆ: ಆನ್‌ಲೈನ್‌ನಲ್ಲಿ ಸ್ವೀಕಾರವಾಗದ ಅರ್ಜಿ

ಮೋಹನ್ ಕುಮಾರ ಸಿ.
Published 2 ಮೇ 2024, 23:50 IST
Last Updated 2 ಮೇ 2024, 23:50 IST
ಕರ್ನಾಟಕ ಲೋಕಸೇವಾ ಆಯೋಗದ ಲೋಗೊ
ಕರ್ನಾಟಕ ಲೋಕಸೇವಾ ಆಯೋಗದ ಲೋಗೊ   

ಮೈಸೂರು: ಬಿಬಿಎಂಪಿ ಹಾಗೂ ಜಲಸಂಪನ್ಮೂಲ ಇಲಾಖೆಯ ಸಹಾಯಕ ಎಂಜಿನಿಯರ್‌ ಅಂಗವಿಕಲರ ಮೀಸಲು ಹುದ್ದೆಗಳಿಗೆ ಕೈ– ಕಾಲು ಇಲ್ಲದ ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಅತಂತ್ರ ಪರಿಸ್ಥಿತಿ ಎದುರಾಗಿದೆ. ಉಳಿದ ಅಂಗವಿಕಲರಿಗೆ ಈ ಸಮಸ್ಯೆ ಇಲ್ಲ.

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ‘ಗ್ರೂಪ್‌–ಬಿ’ ಹುದ್ದೆಗಳ ನೇಮಕಾತಿಗೆ ಮಾರ್ಚ್ 13ರಂದು ಅಧಿಸೂಚನೆ ಹೊರಡಿಸಿದ್ದು, 227 ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಸಲಿದೆ. 

ಬಿಬಿಎಂಪಿಯಲ್ಲಿ 8 ಹಾಗೂ ಜಲಸಂಪನ್ಮೂಲ ಇಲಾಖೆಯಲ್ಲಿ 7 ಹುದ್ದೆಗಳು ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಿವೆ. ಅವುಗಳಲ್ಲಿ ಸಾಮಾನ್ಯ ವರ್ಗದಲ್ಲಿ ತಲಾ ಒಂದು ಹುದ್ದೆ ಕೈ ಹಾಗೂ ಕಾಲು ಇಲ್ಲದವರಿಗೆ ಮೀಸಲಿದೆ‌. ಉಳಿದವು ದೃಷ್ಟಿದೋಷವುಳ್ಳವರಿಗೆ ಮೀಸಲಾಗಿವೆ. ಅವರಿಗೆ ಮೀಸಲಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆ ಇಲ್ಲ. ಆದರೆ, ಕೈ ಹಾಗೂ ಕಾಲು ಇಲ್ಲದ ಅಂಗವಿಕಲರಿಗೆ ಮೀಸಲಾದ 2 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ. ಅರ್ಜಿ ಸಲ್ಲಿಸಲು ಮೇ 15 ಕಡೇ ದಿನವಾಗಿದ್ದು, ಆಕಾಂಕ್ಷಿಗಳಿಗೆ ಆತಂಕ ಉಂಟಾಗಿದೆ.  

ADVERTISEMENT

12 ದಿನವಿದೆ: ‘ಹಾಸನದಲ್ಲಿ ಸಿವಿಲ್‌ ಎಂಜಿನಿಯರಿಂಗ್ ಮಾಡಿರುವೆ. ಶೇ 50ರಷ್ಟು ದೃಷ್ಟಿದೋಷವುಳ್ಳ ಅಂಗವಿಕಲರು ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಆದರೆ, ಒಂದು ಕೈ ಅಥವಾ ಕಾಲು ಇಲ್ಲದ ನನ್ನಂಥ ಅಂಗವಿಕಲರ ಅರ್ಜಿ ತೆಗೆದುಕೊಳ್ಳುತ್ತಿಲ್ಲ. ‘ಕೆಟಗರಿ ಮಿಸ್‌ಮ್ಯಾಚ್‌’ ಎಂದು ಬರುತ್ತಿದೆ. ಈ ಬಗ್ಗೆ ಆಯೋಗಕ್ಕೆ ದೂರು ನೀಡಲಾಗಿದೆ’ ಎಂದು ಬೇಲೂರಿನ ಸ್ಪರ್ಧಾರ್ಥಿ ಸುಮೇರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಬಗ್ಗೆ ಆಯೋಗಕ್ಕೆ ಕರೆ ಮಾಡಿದಾಗ, ಸಮಸ್ಯೆ ಪರಿಹಾರವಾಗುತ್ತದೆ ಎಂದಿದ್ದರು. ಆದರೆ, ಸಮಸ್ಯೆ ಹಾಗೇ ಉಳಿದಿರುವ ಬಗ್ಗೆ ತಿಳಿಸಲೆಂದು ಕರೆ ಮಾಡಿದರೆ ಅಧಿಕಾರಿಗಳು ಸಂಪರ್ಕಕ್ಕೇ ಸಿಗುತ್ತಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ತಾಂತ್ರಿಕ ಸಮಸ್ಯೆ ಕುರಿತು ಪ್ರತಿಕ್ರಿಯೆ ಪಡೆಯಲು ಕೆಪಿಎಸ್‌ಸಿ ಕಾರ್ಯದರ್ಶಿ ಕೆ.ರಾಕೇಶ್‌ಕುಮಾರ್‌ ಅವರು ಲಭ್ಯರಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.