ADVERTISEMENT

ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ: ಶಿವಕುಮಾರ್‌

ಕೇಂದ್ರ ಜಲಶಕ್ತಿ ಸಚಿವರಿಗೆ ರಾಜ್ಯ ಪತ್ರ *ಶೆಖಾವತ್‌ ಭೇಟಿ ಮಾಡಿದ ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2023, 15:51 IST
Last Updated 14 ಸೆಪ್ಟೆಂಬರ್ 2023, 15:51 IST
ಮುಖ್ಯಮಂತ್ರಿ ಬರೆದ ಪತ್ರವನ್ನು ಗಜೇಂದ್ರ ಸಿಂಗ್‌ ಶೆಖಾವತ್‌ ಅವರಿಗೆ ಡಿ.ಕೆ.ಶಿವಕುಮಾರ್ ಹಸ್ತಾಂತರಿಸಿದರು. 
ಮುಖ್ಯಮಂತ್ರಿ ಬರೆದ ಪತ್ರವನ್ನು ಗಜೇಂದ್ರ ಸಿಂಗ್‌ ಶೆಖಾವತ್‌ ಅವರಿಗೆ ಡಿ.ಕೆ.ಶಿವಕುಮಾರ್ ಹಸ್ತಾಂತರಿಸಿದರು.     

ನವದೆಹಲಿ: ಕಾವೇರಿ ನೀರಿನ ಮೇಲೆ ಅವಲಂಬಿತರಾಗಿರುವ ಜನರು ಹಾಗೂ ಜಾನುವಾರುಗಳ ಹಿತಾಸಕ್ತಿಯನ್ನು ಸಂಕಷ್ಟಕ್ಕೆ ದೂಡಿ ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸನ್ನು ಅನುಷ್ಠಾನ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಸರ್ಕಾರ ತಿಳಿಸಿದೆ. 

ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ರಾಜಸ್ಥಾನದ ಜೈಪುರದಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಗುರುವಾರ ಭೇಟಿ ಮಾಡಿ ರಾಜ್ಯದ ನಿಲುವನ್ನು ತಿಳಿಸಿದರು. ಕರ್ನಾಟಕದಲ್ಲಿ ಕಾವೇರಿ ಜಲ ಸಂಕಷ್ಟ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಜಲಶಕ್ತಿ ಸಚಿವರಿಗೆ ಬರೆದಿರುವ ಪತ್ರವನ್ನು ಹಸ್ತಾಂತರಿಸಿದರು.

ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸಿನ ಪ್ರಕಾರ, 15 ದಿನಗಳ ಕಾಲ ಕೆಆರ್‌ಎಸ್‌ ಹಾಗೂ ಕಬಿನಿಯಿಂದ 5000 ಕ್ಯೂಸೆಕ್‌ ನೀರನ್ನು ಬಿಳಿಗುಂಡ್ಲುವಿನಿಂದ ಹರಿಸುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ರಾಜ್ಯ ಸರ್ಕಾರ, ಕರ್ನಾಟಕದ ಮನವಿಯನ್ನು ಪರಿಗಣಿಸಿ ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸನ್ನು ಮರುಪರಿಶೀಲಿಸುವಂತೆ ಕೋರಿದೆ. 

ಜೂನ್ ತಿಂಗಳಿನಿಂದ ಸೆಪ್ಟೆಂಬರ್ ಮಧ್ಯದವರೆಗೂ 92 ದಿನಗಳ ಕಾಲ 100 ಟಿಎಂಸಿ ಅಡಿ ನೀರನ್ನು ತಮಿಳುನಾಡು ಬಳಸಿಕೊಂಡಿದೆ. ಇದು ಹಿಂದೆ 1987-88, 2002-03, 2012-13, 2016-17 ಹಾಗೂ 2017-18ರ ಬರಪರಿಸ್ಥಿತಿಯಲ್ಲಿ ಬಳಕೆಯಾದ ನೀರಿಗಿಂತಲೂ ಹೆಚ್ಚಾಗಿದೆ. ಕರ್ನಾಟಕದ ಜಲಾಶಯಗಳಲ್ಲಿ ಸಂಕಷ್ಟದ ಸ್ಥಿತಿಯಿದ್ದರೂ ತಮಿಳುನಾಡು ಭತ್ತವನ್ನು ವ್ಯಾಪಕವಾಗಿ ಬೆಳೆಯುತ್ತಿದೆ ಎಂದು ರಾಜ್ಯ ದೂರಿದೆ. 

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಕಾವೇರಿ ಜಲಾಯನ ಪ್ರದೇಶದಲ್ಲಿ ಸೆಪ್ಟೆಂಬರ್ 24ವರೆಗೆ  ಮಳೆಯಾಗುವ ಲಕ್ಷಣಗಳಿಲ್ಲ. ಮೆಟ್ಟೂರು ಜಲಾಶಯದಲ್ಲಿ ಪ್ರಸ್ತುತ 24 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಪ್ರಸ್ತುತ ಬಿಡುಗಡೆಯಾಗಿರುವ ನೀರನ್ನು ಪರಿಗಣಿಸಿದರೆ, ತಮಿಳುನಾಡಿನ ಅವಶ್ಯಕತೆಯನ್ನು ಪೂರೈಸಲು ಸಾಕಾಗುವಷ್ಟು ನೀರು ಲಭ್ಯವಿದೆ. ಕರ್ನಾಟಕದ ಬೆಳೆಗಳ ರಕ್ಷಣೆಗೆ 70 ಟಿಎಂಸಿ ಅಡಿ, ಕುಡಿಯುವ ನೀರಿಗೆ 33 ಟಿಎಂಸಿ ಅಡಿ ಹಾಗೂ ಕೈಗಾರಿಕೆಗಳಿಗೆ 3 ಟಿಎಂಸಿ ನೀರು ಅಗತ್ಯವಿದೆ. ನಮ್ಮಲ್ಲಿ 53 ಟಿಎಂಸಿ ಅಡಿ  ಮಾತ್ರ ಸಂಗ್ರಹವಿದ್ದು, ನಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಈ ಸಂಗ್ರಹ ಸಾಕಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. 

ಇನ್ನೊಂದೆಡೆ, ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸನ್ನು ತಿರಸ್ಕರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ರಾಜ್ಯ ಪತ್ರ ಬರೆದಿದೆ. 

ಈ ಸಂಬಂಧ ಗುರುವಾರ ಪತ್ರ ಬರೆದಿರುವ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಶೇ 54ರಷ್ಟು ಒಳ ಹರಿವು‌ ಕಡಿಮೆ ಆಗಿದೆ. ಇದು ಕಳೆದ 30 ವರ್ಷಗಳಲ್ಲೇ ಕಡಿಮೆ ಎಂದು ಗಮನ ಸೆಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.