ADVERTISEMENT

ಅರ್ಜುನ್ ಸರ್ಜಾ ವಿರುದ್ಧ ಸ್ವಯಂಪ್ರೇರಿತ ದೂರು

ನಟಿ ಶ್ರುತಿ ಪರ ನಿಂತ ರಾಜ್ಯ ಮಹಿಳಾ ಆಯೋಗ * ಪೊಲೀಸ್‌ ಕಮಿಷನರ್‌ಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 20:15 IST
Last Updated 29 ಅಕ್ಟೋಬರ್ 2018, 20:15 IST
   

ಬೆಂಗಳೂರು: ನಟಿ ಶ್ರುತಿ ಹರಿಹರನ್ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ನಟ ಅರ್ಜುನ್ ಸರ್ಜಾ ವಿರುದ್ಧ ರಾಜ್ಯ ಮಹಿಳಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.

ಪ್ರಕರಣ ಸಂಬಂಧ ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿ ಆಧರಿಸಿ ಶನಿವಾರ (ಅ. 27) ದೂರು ದಾಖಲಿಸಿಕೊಂಡಿರುವ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ, ‘ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡಿ’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್‌ ಅವರಿಗೆ ನೋಟಿಸ್‌ ನೀಡಿದ್ದಾರೆ.

ಆ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ನಾಗಲಕ್ಷ್ಮಿಬಾಯಿ, ‘ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವುದಕ್ಕಾಗಿ ಶ್ರುತಿ ಅವರನ್ನು ಆಯೋಗದ ಕಚೇರಿಗೆ ಕರೆದಿದ್ದೇವೆ. ಅವರು ಬಂದ ಬಳಿಕ ಹೇಳಿಕೆ ಪಡೆಯಲಿದ್ದೇವೆ. ನಂತರ, ಅರ್ಜುನ್ ಸರ್ಜಾಗೆ ನೋಟಿಸ್‌ ನೀಡಿ ವಿಚಾರಣೆಗೆ ಕರೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ’ ಎಂದರು.

ADVERTISEMENT

ದಿನಕ್ಕೆ 500 ಬೆದರಿಕೆ ಕರೆ: ನಟಿ ಶ್ರುತಿ ಹರಿಹರನ್ ವಿರುದ್ಧ ನಟ ಧ್ರುವ್ ಸರ್ಜಾ ಮೆಯೋಹಾಲ್‌ನ ನ್ಯಾಯಾಲಯದಲ್ಲಿ ಹೂಡಿರುವ ಮೊಕದ್ದಮೆಗೆ, ಶ್ರುತಿ ಪರ ವಕೀಲೆ ಜಯ್ನಾ ಕೊಠಾರಿ ಸೋಮವಾರ ಆಕ್ಷೇಪಣೆ ಸಲ್ಲಿಸಿದರು.

‘ತಮ್ಮ ಸ್ಥಾನ ದುರುಪಯೋಗಪಡಿಸಿಕೊಂಡ ಅರ್ಜುನ್ ಸರ್ಜಾ, ನನ್ನ ಕಕ್ಷಿದಾರರ (ಶ್ರುತಿ) ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಆ ಬಗ್ಗೆ ಕಕ್ಷಿದಾರರು, ಮೀ–ಟೂ ಅಭಿಯಾದಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ (ಅದರ ಪ್ರತಿ ಲಗತ್ತಿಸಲಾಗಿದೆ). ಅದಾದ ನಂತರ, ಕಕ್ಷಿದಾರರಿಗೆ ದಿನಕ್ಕೆ 500 ಬೆದರಿಕೆ ಕರೆಗಳು ಬಂದಿವೆ. ಭಯಗೊಂಡ ಅವರು, ತಮ್ಮ ಮೊಬೈಲ್‌ ನಂಬರ್ ಸಹ ಬದಲಾಯಿಸಿದ್ದಾರೆ’ ಎಂದು ಆಕ್ಷೇಪಣೆಯಲ್ಲಿ ತಿಳಿಸಲಾಗಿದೆ.

‘ಕಕ್ಷಿದಾರರ ಇಡೀ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ಅದೇ ಕಾರಣಕ್ಕೆ ಕಕ್ಷಿದಾರರು, ತಮ್ಮ ತಾಯಿ ಹಾಗೂ ಅಜ್ಜಿಯ ವಾಸ್ತವ್ಯವನ್ನೇ ಬದಲಾಯಿಸಿದ್ದಾರೆ. ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದಾರೆ. ರಾಜ್ಯ ಮಹಿಳಾ ಆಯೋಗವೂ ದೂರು ದಾಖಲಿಸಿಕೊಂಡಿದೆ. ಇದರ ಮಧ್ಯೆಯೇ ಆರೋಪಿಗಳ ಪರವಿರುವ ಕೆಲವರು, ಸಾಮಾಜಿಕ ಜಾಲತಾಣಗಳಲ್ಲಿ ಕಕ್ಷಿದಾರರ ಬಗ್ಗೆ ಕೆಟ್ಟದಾಗಿ ಬರಹಗಳನ್ನು ಪ್ರಕಟಿಸುತ್ತಿದ್ದಾರೆ’ ಎಂದು ದೂರಲಾಗಿದೆ.

‘ಕಕ್ಷಿದಾರರ ವಿರುದ್ಧ ಹೂಡಿರುವ ಮೊಕದ್ದಮೆಯಲ್ಲಿ ಯಾವುದೇ ಹುರುಳಿಲ್ಲ. ಹೀಗಾಗಿ, ಅವರ ಅರ್ಜಿಯನ್ನು ವಜಾಗೊಳಿಸಬೇಕು’ ಎಂದು ಆಕ್ಷೇಪಣೆಯಲ್ಲಿ ಕೋರಲಾಗಿದೆ.

ಆಕ್ಷೇಪಣೆ ಸ್ವೀಕರಿಸಿದ ನ್ಯಾಯಾಲಯ, ಪ್ರಕರಣದ ವಿಚಾರಣೆಯನ್ನು ಅ. 30ಕ್ಕೆ ಮುಂದೂಡಿತು.

ನ್ಯಾಯಾಲಯಕ್ಕೆ ಅರ್ಜಿ ಇಲ್ಲ

‘ಶ್ರುತಿ ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿ ಹೇಳಿಕೆ ದಾಖಲಿಸಲಾಗುವುದು’ ಎಂದು ಹೇಳಿದ್ದ ಕಬ್ಬನ್‌ಪಾರ್ಕ್‌ ಪೊಲೀಸರು, ಆ ಬಗ್ಗೆ ನ್ಯಾಯಾಲಯಕ್ಕೆ ಯಾವುದೇ ಅರ್ಜಿ ಸಲ್ಲಿಸಿಲ್ಲ.

ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ದೂರುದಾರರಿಂದ ನ್ಯಾಯಾಧೀಶರ ಸಮ್ಮುಖದಲ್ಲಿ ಹೇಳಿಕೆ ದಾಖಲಿಸಲಾಗುತ್ತದೆ. ಈ ಪ್ರಕರಣದಲ್ಲಿ ಶ್ರುತಿ ಅವರನ್ನು 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಬೇಕು. ಅದಕ್ಕೂ ಮುನ್ನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ದಿನಾಂಕ ನಿಗದಿಪಡಿಸಬೇಕು. ಆದರೆ, ಸೋಮವಾರದವರೆಗೂ ಪೊಲೀಸರು ಯಾವುದೇ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ ಎಂದು ಗೊತ್ತಾಗಿದೆ.

ಸಾಕ್ಷ್ಯಗಳ ನಾಶ ಸಾಧ್ಯತೆ

ಅರ್ಜುನ್ ಸರ್ಜಾ ವಿರುದ್ಧ ದಾಖಲಿಸಲಾದ ಪ್ರಕರಣದ ತನಿಖೆ ಬಗ್ಗೆ ಮಾಹಿತಿ ಪಡೆಯುವುದಕ್ಕಾಗಿ ಶ್ರುತಿ ಹರಿಹರನ್ ಪರ ವಕೀಲ ಅನಂತ ನಾಯಕ್, ಕಬ್ಬನ್ ಪಾರ್ಕ್ ಠಾಣೆಗೆ ಸೋಮವಾರ ಭೇಟಿ ನೀಡಿದರು.

ಆ ಬಗ್ಗೆ ಮಾತನಾಡಿದ ಅನಂತ ನಾಯಕ್‌, ‘ಇದು ಲೈಂಗಿಕ ದೌರ್ಜನ್ಯದ ಪ್ರಕರಣ. ಒಬ್ಬನೇ ಆರೋಪಿ ಇದ್ದಾನೆ. ಈ ಹಿಂದೆ ಇಂಥ ಪ್ರಕರಣಗಳಲ್ಲಿ ಆರೋಪಿಯನ್ನು ತ್ವರಿತವಾಗಿ ಬಂಧಿಸಲಾಗಿದೆ. ಆದರೆ, ಅರ್ಜುನ್ ಸರ್ಜಾ ಪ್ರಭಾವಿ ಎಂಬ ಕಾರಣಕ್ಕೆ ಅವರನ್ನು ಬಂಧಿಸಲು ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.