ADVERTISEMENT

ಅ.18ಕ್ಕೆ ಜಾತಿಗಣತಿ ವರದಿ ಭವಿಷ್ಯ: ಪರ–ವಿರೋಧದ ನಡುವೆಯೇ ಸರ್ಕಾರದ ಮುಂದಡಿ

ಒಬಿಸಿ ನಾಯಕರ ಜತೆ ಮುಖ್ಯಮಂತ್ರಿ ಸಭೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 9:50 IST
Last Updated 7 ಅಕ್ಟೋಬರ್ 2024, 9:50 IST
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ   

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿದ್ದ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ಯ (ಜಾತಿ ಗಣತಿ) ವರದಿಯ ಕುರಿತು ಅ. 18ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.

ಹಿಂದುಳಿದ ಸಮುದಾಯದ ಸಚಿವರು, ಶಾಸಕರು, ಮುಖಂಡರ ಜೊತೆ ಸೋಮವಾರ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,  ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಗೆ ಒಪ್ಪಿಗೆ ನೀಡುವಂತೆ ಒತ್ತಾಯಿಸಿ ವಿರೋಧ ಪಕ್ಷಗಳ ನಾಯಕರೂ ಸೇರಿದಂತೆ ಹಿಂದುಳಿದ ಸಮುದಾಯದ ಸುಮಾರು 30 ಶಾಸಕರು ಮನವಿ ಸಲ್ಲಿಸಿದ್ದಾರೆ. ವರದಿಯ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ನಾನು ಈ ಹಿಂದೆಯೇ ಹೇಳಿದ್ದೆ’ ಎಂದರು.

‘ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಈ ಸಮೀಕ್ಷೆ ನಡೆದಿತ್ತು. ಬಹಳ ಸಮಯ ತೆಗೆದುಕೊಂಡು ಎಚ್. ಕಾಂತರಾಜ ಅಧ್ಯಕ್ಷತೆ ಆಯೋಗ ಈ ಸಮೀಕ್ಷೆ ನಡೆಸಿದೆ. ರಾಜ್ಯದ ಮನೆ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡಿರುವುದಾಗಿ ಕಾಂತರಾಜ ತಿಳಿಸಿದ್ದಾರೆ. ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಮೀಕ್ಷೆಯ ವರದಿ ಪೂರ್ಣಗೊಂಡಿರಲಿಲ್ಲ. ಹೀಗಾಗಿ, ಆಗ ವರದಿ ಸ್ವೀಕರಿಸಲು ಸಾಧ್ಯ ಆಗಿರಲಿಲ್ಲ. ನಂತರ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿಯವರಿಗೆ ವರದಿ ಸಲ್ಲಿಸಲು ಕಾಂತರಾಜ ಸಿದ್ಧತೆ ನಡೆಸಿದ್ದರು. ಆದರೆ, ಅವರು ವರದಿ ಸ್ವೀಕರಿಸಲು ಒಪ್ಪಿರಲಿಲ್ಲ. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಕೂಡಾ ವರದಿಯನ್ನು ಸ್ವೀಕರಿಸಲಿಲ್ಲ’ ಎಂದರು.

ADVERTISEMENT

‘ಕಾಂತರಾಜ ಅವರ ಅವಧಿ ಪೂರ್ಣಗೊಂಡ ಬಳಿಕ ಜಯಪ್ರಕಾಶ್ ಹೆಗ್ಡೆ ಆಯೋಗದ ಅಧ್ಯಕ್ಷರಾದರು. ಅವರ ಮನವಿಯಂತೆ ವರದಿಯನ್ನು ಸಲ್ಲಿಸಲು ಮೂರು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಅವರಿಂದ ವರದಿ ಸ್ವೀಕರಿಸಲಾಗಿದೆ. ಇಲ್ಲಿಯವರೆಗೂ ನಾನು ಈ ವರದಿಯನ್ನು ಪರಿಶೀಲಿಸಿಲ್ಲ. ಸ್ವೀಕರಿಸಿದ ವರದಿಗೆ ಒಪ್ಪಿಗೆ ನೀಡುವಂತೆ ಎಲ್ಲರೂ ಒತ್ತಾಯಿಸುತ್ತಿದ್ದಾರೆ. ಹಿಂದುಳಿದ ವರ್ಗಗಳ ಶಾಸಕರು ಕೂಡಾ ಸಭೆ ನಡೆಸಿ ವರದಿನ್ನು ಜಾರಿಗೊಳಿಸುವಂತೆ ಮನವಿ ಮಾಡಿದ್ದಾರೆ’ ಎಂದು ವಿವರಿಸಿದರು.

ಸಚಿವರಾದ ಬೈರತಿ ಸುರೇಶ್, ಎನ್.ಎಸ್. ಬೋಸರಾಜು, ಕಾಂಗ್ರೆಸ್ ಶಾಸಕರಾದ ಅಜಯ್‌ ಸಿಂಗ್‌, ಬೇಳೂರು ಗೋಪಾಲಕೃಷ್ಣ, ರಾಘವೇಂದ್ರ ಹಿಟ್ನಾಳ್‌, ವಿಧಾನಪರಿಷತ್ ಕಾಂಗ್ರೆಸ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್‌, ಎಂ.ಆರ್‌. ಸೀತಾರಾಮ್‌, ನಾಗರಾಜ್‌ ಯಾದವ್‌, ವಿಧಾನಪರಿಷತ್‌ ಬಿಜೆಪಿ ಸದಸ್ಯ ಎನ್. ರವಿಕುಮಾರ್‌, ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷರಾದ ಸಿ.ಎಸ್‌‍. ದ್ವಾರಕನಾಥ್‌, ಎಚ್. ಕಾಂತರಾಜು, ಕೆ. ಜಯಪ್ರಕಾಶ್‌ ಹೆಗ್ಡೆ, ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್‌‍. ಪೊನ್ನಣ್ಣ, ವಿಧಾನಪರಿಷತ್‌ನ ಮಾಜಿ ಸದಸ್ಯ ಎಚ್‌.ಎಂ. ರೇವಣ್ಣ ಮತ್ತು ಹಿಂದುಳಿದ ವರ್ಗಗಳ ಮುಖಂಡರು ಸಭೆಯಲ್ಲಿದ್ದರು. ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯ ಕುರಿತು ಎಲ್ಲರಿಂದಲೂ ಮುಖ್ಯಮಂತ್ರಿ ಅಭಿಪ್ರಾಯ ಪಡೆದರು.

ವರದಿಯನ್ನು ಒಪ್ಪಲು ಪಟ್ಟು

ಜಾತಿ ಗಣತಿ ವರದಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿಯೇ ಮಂಡಿಸಬೇಕು ಎಂದು ಹಿಂದುಳಿದ ವರ್ಗಗಳ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.

‘ನೀವು ಸಾಮಾಜಿಕ ನ್ಯಾಯದ ಪರವಾಗಿದ್ದೀರಿ. ನಿಮ್ಮಂಥ ನಾಯಕರೇ ವರದಿಗೆ ಒಪ್ಪಿಗೆ ಕೊಡದಿದ್ದರೆ ಇನ್ಯಾರು ಕೊಡುತ್ತಾರೆ? ದೃಢನಿರ್ಧಾರ ತೆಗೆದುಕೊಳ್ಳಿ. ಪಕ್ಷ ಅಧಿಕಾರಕ್ಕೆ ಬಂದರೆ ಇಡೀ ದೇಶದಲ್ಲಿ ಜಾತಿಗಣತಿ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲೂ ಈ ವಿಚಾರವಿದೆ. ಹೀಗಾಗಿ, ವರದಿಯನ್ನು ಒಪ್ಪಲೇಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್ ಸೇರಿ ದಂತೆ ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ನಾಯಕರು ಸಭೆಯಲ್ಲೇ ಪಟ್ಟು ಹಿಡಿದರು.

‘ನಾಲ್ವಡಿ‌ ಕೃಷ್ಣ ದೇವರಾಜ ಒಡೆಯರ್ ಸ್ವಾತಂತ್ರ್ಯ ಪೂರ್ವದಲ್ಲೇ ಸಮೀಕ್ಷೆ ನಡೆಸಿದ್ದರು. ಕಾಲಮಿತಿ ನಿಗದಿಪಡಿಸಿ ನಂತರ ಬಿಡುಗಡೆ ಮಾಡಿದರು. ಈಗ ನೀವು ಮೀನಮೇಷ ಎಣಿಸದೆ ಒಪ್ಪಿಗೆ ನೀಡಬೇಕು’ ಎಂದು ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್ ಪ್ರತಿಪಾದಿಸಿದರು.

ಸಿ.ಎಂ.ಗೆ ಸಲ್ಲಿಸಿದ ಮನವಿಯಲ್ಲಿ ಏನಿದೆ?

  •  1931ರ ನಂತರ ಇಡೀ ದೇಶದಲ್ಲಿ ಜಾತಿವಾರು ಸಮೀಕ್ಷೆ ನಡೆದಿಲ್ಲ. ಈ ಕಾರಣಕ್ಕೆ ಶೋಷಿತ, ತಳ ಸಮುದಾಯ, ಕಾಯಕ ವರ್ಗಗಳೂ ಸೇರಿದಂತೆ ಎಲ್ಲ ಬಡ ಸಮುದಾಯಗಳಿಗೆ ಮೀಸಲಾತಿ, ಸರ್ಕಾರಿ ಸವಲತ್ತು, ಅನುದಾನ ಸಮರ್ಪಕವಾಗಿ ದೊರಕುತ್ತಿಲ್ಲ. ರಾಜ್ಯ– ಕೇಂದ್ರ ಸರ್ಕಾರಗಳ ಯೋಜನೆಗಳೂ ಸರಿಯಾಗಿ ತಲುಪುತ್ತಿಲ್ಲ

  •  ಈ ಸತ್ಯ ಮನಗಂಡು ತಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆಸಿರುವ ಜಾತಿವಾರು ಸಮೀಕ್ಷೆಯನ್ನು ತ್ವರಿತವಾಗಿ ಸಂಪುಟ ಸಭೆಯ ಮುಂದಿಟ್ಟು ಚರ್ಚಿಸಿ, ಒಪ್ಪಿಗೆ ಸೂಚಿಸಬೇಕು

  •  ಗ್ರಾಮೀಣ, ನಗರ, ಪಟ್ಟಣ ಸೇರಿದಂತೆ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತಿತರ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನಿಗದಿಪಡಿಸುವ ಕುರಿತು ಗೊಂದಲಗಳಿದ್ದು, ಆದಷ್ಟು ಬೇಗ ಪರಿಹರಿಸಿ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು

  •  ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಅಧ್ಯಕ್ಷ, ಸದಸ್ಯರನ್ನು ತಕ್ಷಣ ನೇಮಿಸಬೇಕು

  • ಅನೇಕ ಸಣ್ಣ-ಪುಟ್ಟ ಜಾತಿಗಳ ನಿಗಮಗಳಿಗೆ ಅಧ್ಯಕ್ಷ– ಸದಸ್ಯರ ನೇಮಕಾತಿ ಆಗಿಲ್ಲ. ಈ ಲೋಪ ಸರಿಪಡಿಸಿ, ಈ ನಿಗಮಗಳ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸಬೇಕು

ಇದು ಕೇವಲ ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆ ಅಲ್ಲ. ರಾಜ್ಯದ ಏಳು ಕೋಟಿ ಕನ್ನಡಿಗರ ಸಮೀಕ್ಷೆ. ದೇಶದಲ್ಲಿ ಇಂತಹ ಸಮೀಕ್ಷೆ ನಡೆಸಿದ ಪ್ರಥಮ ರಾಜ್ಯ ಕರ್ನಾಟಕ
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಕಾಂಗ್ರೆಸ್‌ ನಾಯಕರಿಗೆ ತಾಕತ್ತು ಇದ್ದರೆ ವಿಧಾನಸಭೆ‌ ವಿಸರ್ಜನೆ ಮಾಡಿ, ಜಾತಿ ಜನಗಣತಿಯನ್ನು ಮುಂದಿಟ್ಟುಕೊಂಡು ಮಧ್ಯಂತರ ಚುನಾವಣೆ ಎದುರಿಸಲಿ
-ಎಚ್‌.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ
ಮುಖ್ಯಮಂತ್ರಿಗೆ ಜಾತಿಗಣತಿ ವಿಚಾರದಲ್ಲಿ ಪ್ರಾಮಾಣಿಕತೆ ಇದ್ದಿದ್ದರೆ, ಹಿಂದಿನ ಅವಧಿಯಲ್ಲೇ ಈ ವರದಿಗೆ ಒಪ್ಪಿಗೆ ನೀಡಲು ಹಿಂದೇಟು ಹಾಕುತ್ತಿರಲಿಲ್ಲ. ಅವರಿಗೆ ಪ್ರಾಮಾಣಿಕತೆಯ ಕೊರತೆಯಿದೆ
-ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಪಕ್ಷಾತೀತವಾಗಿ ಸಭೆಯಲ್ಲಿ ಚರ್ಚೆಯಾಗಿದೆ. ಸರ್ಕಾರಕ್ಕೆ ಸಂಕಷ್ಟ ಬಂದರೂ ಪರವಾಗಿಲ್ಲ, ವರದಿ ಅಂಗೀಕರಿಸಿ ಜಾರಿ ಮಾಡಬೇಕೆಂದು ಆಗ್ರಹಿಸಿದ್ದೇವೆ.
-ಬಿ.ಕೆ. ಹರಿಪ್ರಸಾದ್, ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯ
ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡನೆಗೆ ನಮ್ಮ ಅಭ್ಯಂತರ ಇಲ್ಲ. ವರದಿಯ ಅಂಶ ಬಹಿರಂಗವಾದ ನಂತರ ಪಕ್ಷ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ
-ಎನ್‌. ರವಿಕುಮಾರ್, ವಿಧಾನ ಪರಿಷತ್‌ ಬಿಜೆಪಿ ಸದಸ್ಯ
ಜಾತಿ ಗಣತಿಗೆ ಹಿಂದಿನಿಂದಲೂ ವೀರಶೈವ ಲಿಂಗಾಯತ ಮಹಾ ಸಭಾದ ವಿರೋಧ ಇದೆ. ಈಗಲೂ ಅದೇ ನಿಲುವಿಗೆ ಬದ್ಧ.
-ಶಾಮನೂರು ಶಿವಶಂಕರಪ್ಪ, ಶಾಸಕ, ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.