ADVERTISEMENT

ಜಾತಿ ಆಧಾರಿತ ನಿಗಮ: ಹೈಕೋರ್ಟ್ ನೋಟಿಸ್‌

ಸರ್ಕಾರದ ನಿರ್ಧಾರ ಪ್ರಶ್ನಿಸಿದ್ದ ಪಿಐಎಲ್‌

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2022, 20:25 IST
Last Updated 2 ಫೆಬ್ರುವರಿ 2022, 20:25 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು:ಜಾತಿ ಆಧಾರಿತ ನಿಗಮ-ಮಂಡಳಿಗಳನ್ನು ರದ್ದುಗೊಳಿಸುವಂತೆ ಕೋರಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ, ಪುನಃ ಏಳು ಜಾತಿ ಆಧಾರಿತ ಅಭಿವೃದ್ಧಿ ನಿಗಮ ಮಂಡಳಿಗಳಿಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ, ’ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಹಾಗೂ ಜೆ.ಶ್ರೀನಿವಾಸನ್‌ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ,ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಮತ್ತುಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ,ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ,ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ, ಕರ್ನಾಟಕ ಕಾಡುಗೊಲ್ಲ ಅಭಿವೃದ್ಧಿ ನಿಗಮ,ಕರ್ನಾಟಕ ಭೋವಿ ಅಭಿವೃದ್ಧಿ ನಿಗಮಗಳವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್‌ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿತು.

ADVERTISEMENT

ಕರ್ನಾಟಕವೀರಶೈವ–ಲಿಂಗಾಯತ ಅಭಿವೃದ್ಧಿ ನಿಗಮ,ಬ್ರಾಹ್ಮಣ ಅಭಿವೃದ್ಧಿ ನಿಗಮ ಹಾಗೂ ಆರ್ಯವೈಶ್ಯ ನಿಗಮ ಮಂಡಳಿ ಸ್ಥಾಪಿಸಿರುವುದನ್ನು ಪ್ರಶ್ನಿಸಿ ಈಗಾಗಲೇ ಹೈಕೋರ್ಟ್‌ನ ಹಿರಿಯ ವಕೀಲ ಎಸ್.ಬಸವರಾಜ್‌ ಸಾರ್ಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಇದರೊಟ್ಟಿಗೆ ಮಧ್ಯಂತರ ಅರ್ಜಿಯನ್ನೂ ಸಲ್ಲಿಸಲಾಗಿದೆ.

ಮಧ್ಯಂತರ ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ವಾದ ಮಂಡಿಸಿದರು. ’ಎಲ್ಲ ಜಾತಿ ಆಧಾರಿತ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳನ್ನು ರದ್ದುಗೊಳಿಸಬೇಕು‘ ಎಂಬುದು ಮುಖ್ಯ ಮನವಿಯಾದರೆ, ’ತಕ್ಷಣವೇ ಇವುಗಳಿಗೆ ಯಾವುದೇ ಅನುದಾನ ಬಿಡುಗಡೆ ಮಾಡದಂತೆ ನಿರ್ದೇಶಿಸಬೇಕು’ ಎಂಬುದು ಅರ್ಜಿದಾರರ ಮಧ್ಯಂತರ ಕೋರಿಕೆ. ವಿಚಾರಣೆಯನ್ನು ಮಾರ್ಚ್‌ 3ಕ್ಕೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.