ADVERTISEMENT

ಜಾತಿಗಣತಿ ಬಹಿರಂಗಪಡಿಸದಿದ್ದರೆ ಸರ್ಕಾರದ‌ ಮೇಲೆ ಆಪಾದನೆ: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 15:50 IST
Last Updated 22 ಅಕ್ಟೋಬರ್ 2024, 15:50 IST
ಜಿ. ಪರಮೇಶ್ವರ
ಜಿ. ಪರಮೇಶ್ವರ   

ಬೆಂಗಳೂರು: ‘ರಾಜ್ಯದಲ್ಲಿ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿಗಣತಿ) ವರದಿಯಲ್ಲಿ ಏನಿದೆ ಎನ್ನುವುದು ಬಹಿರಂಗ ಆಗಬೇಕು. ಈ ಬಗ್ಗೆ ಚರ್ಚೆ ಆಗದಿದ್ದರೆ ವರದಿಯನ್ನು ಮುಚ್ಚಿಹಾಕಿದರು ಎಂಬ ಆಪಾದನೆ ಸರ್ಕಾರದ‌ ಮೇಲೆ ಬರಲಿದೆ’ ಎಂದು‌ ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ಈ ವರದಿ ತಯಾರಿಸಲು ಸರ್ಕಾರ ₹160 ಕೋಟಿ ಖರ್ಚು ಮಾಡಿದೆ. ವರದಿಯನ್ನು ಜನ ಸಮುದಾಯದ ಮುಂದೆ ಇಡದಿದ್ದರೆ ಹಣ ಖರ್ಚು ಮಾಡಿರುವುದು ಪ್ರಯೋಜನ ಆಗುವುದಿಲ್ಲ’ ಎಂದರು.

‘ಜಾತಿಗಣತಿ ವರದಿಯನ್ನು ಒಪ್ಪುವುದು ಬೇರೆ ವಿಚಾರ. ಅದರ ಮಾಹಿತಿ ಹೊರಗಡೆ ಬರಬೇಕಲ್ಲವೇ? ಜಾರಿ ಮಾಡಲು ಆಗುವ ತೀರ್ಮಾನಗಳು ಬೇರೆ ಬೇರೆ ರೀತಿಯಲ್ಲಿ ಆ ನಂತರ ಆಗುತ್ತವೆ. ಈ ವಿಚಾರದಲ್ಲಿ ಯಾರೂ ಆತಂಕ‌ಪಡುವ ಅಗತ್ಯವಿಲ್ಲ’ ಎಂದರು.

ADVERTISEMENT

ಪಂಚಮಸಾಲಿ ಬೇಡಿಕೆ, ಒಳ ಮೀಸಲಾತಿ ಮತ್ತು ಜಾತಿಗಣತಿ ವರದಿ ಕುರಿತು ಪ್ರತಿಕ್ರಿಯಿಸಿದ ಅವರು, ‘ಎಲ್ಲವನ್ನೂ ನಿಭಾಯಿಸುವ ಸಾಮರ್ಥ್ಯ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿದೆ. ನಾವೆಲ್ಲರೂ ಜನಸಮುದಾಯದ ವಿಚಾರಧಾರೆಗಳನ್ನು ಯಾವ ರೀತಿ ತೀರ್ಮಾನಿಸಬೇಕು ಎಂಬುದರ ಕುರಿತು ಚರ್ಚಿಸುತ್ತೇವೆ’ ಎಂದರು.

‘ಮೀಸಲಾತಿ ಪ್ರಮಾಣ ಶೇ 50 ಮೀರಬಾರದೆಂದು ಎಂಬ ಆದೇಶವಿದೆ. ಕೆಲವು ರಾಜ್ಯಗಳು ಶೇ 50ರ ಮಿತಿಯನ್ನು ಮೀರಿವೆ. ತಮಿಳುನಾಡಿನವರು ಶೇ 69 ಮೀಸಲಾತಿಯನ್ನು ಕಾನೂನಾತ್ಮಕವಾಗಿ ಮಾಡಿದ್ದಾರೆ. ಸಂವಿಧಾನದ ಶೆಡ್ಯೂಲ್ಡ್ 9 ಕ್ಕೆ ಸೇರಿಸಿದ್ದಾರೆ. ನಮ್ಮ ರಾಜ್ಯದಲ್ಲಿಯೂ ಬೇರೆ ಬೇರೆ ಸಮುದಾಯಗಳು ಮೀಸಲಾತಿ ಕೇಳುತ್ತಿವೆ. ಅದನ್ನೆಲ್ಲ ಮಾಡಬೇಕಾದರೆ ಶೇ‌ 50ರಷ್ಟು ಮಿತಿಯನ್ನು ಮೀರಬೇಕಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.