ADVERTISEMENT

ಮೀಸಲಾತಿ ಹೆಚ್ಚಳಕ್ಕೆ ಜಾತಿಗಣತಿ ಅಗತ್ಯ: ಕೇಂದ್ರ ಸಚಿವ ರಾಮದಾಸ್‌ ಅಠವಳೆ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 16:11 IST
Last Updated 17 ಫೆಬ್ರುವರಿ 2024, 16:11 IST
ರಾಮದಾಸ ಅಠವಳೆ
ರಾಮದಾಸ ಅಠವಳೆ   

ಬೆಂಗಳೂರು: ಎಲ್ಲ ಸಮುದಾಯಗಳಿಗೂ ಅರ್ಹತೆಯ ಆಧಾರದಲ್ಲಿ ಮೀಸಲಾತಿ ಕಲ್ಪಿಸಲು ದೇಶದಲ್ಲಿ ಜಾತಿ ಗಣತಿ ಅಗತ್ಯ ಎಂದು ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ್‌ ಅಠವಳೆ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಬಲ ಜಾತಿಗಳೂ ಸೇರಿದಂತೆ ಎಲ್ಲ ಸಮುದಾಯಗಳೂ ಮೀಸಲಾತಿ ಹೆಚ್ಚಳಕ್ಕೆ ಬೇಡಿಕೆ ಸಲ್ಲಿಸುತ್ತಲೇ ಇವೆ. ಆಯಾ ಜಾತಿಯ ಜನಸಂಖ್ಯೆ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಿಂದುಳಿದಿರುವಿಕೆ ಆಧಾರದಲ್ಲಿ ಮೀಸಲಾತಿ ಹೆಚ್ಚಳ ಮಾಡಿದಾಗ ಮಾತ್ರ ಎಲ್ಲ ಸಮುದಾಯಗಳಿಗೂ ನ್ಯಾಯ ದೊರಕಿಸಬಹುದು. ಜಾತಿ ಗಣತಿ ನಡೆಸಲು ಪ್ರಧಾನಿಗೂ ಮನಸ್ಸಿದೆ. ಆದರೆ, ಕೆಲ ತಾಂತ್ರಿಕ ಸಮಸ್ಯೆಗಳಿಂದ ಅದು ಸಾಧ್ಯವಾಗಿಲ್ಲ ಎಂದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಜನ ಸಂಖ್ಯೆಯೂ ಹೆಚ್ಚಾಗಿದೆ. ಹಿಂದುಳಿದ ವರ್ಗಗಳ ಮೀಸಲಾತಿಯನ್ನೂ ಹೆಚ್ಚಿಸಬೇಕಿದೆ. ಮಹಾರಾಷ್ಟ್ರದಲ್ಲಿ ಮರಾಠರು, ಕರ್ನಾಟಕದಲ್ಲಿ ಲಿಂಗಾಯತರು ಸೇರಿದಂತೆ ಪ್ರಬಲ ಜಾತಿಗಳು ಮೀಸಲಾತಿಯ ಬೇಡಿಕೆ ಇಟ್ಟಿವೆ. ಕೇಂದ್ರ ಸರ್ಕಾರ ಆರ್ಥಿಕ ದುರ್ಬಲ ವರ್ಗಗಳಿಗೆ ಈಗಾಗಲೇ ಶೇ 10ರಷ್ಟು ಮೀಸಲಾತಿ ಕಲ್ಪಿಸಿದೆ. ಕೆಲ ಸಮುದಾಯಗಳನ್ನು  ಸೇರಿಸುವ ಚಿಂತನೆಯೂ ಇದೆ. ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ADVERTISEMENT

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಜಾತಿ ಗಣತಿ ಕುರಿತು ನಿರಂತರವಾಗಿ ಆಗ್ರಹ ಮಾಡುತ್ತಿದ್ದಾರೆ. ಅವರದೇ ಸರ್ಕಾರ 10 ವರ್ಷಗಳು ಆಡಳಿತ ನಡೆಸುವಾಗ ಏಕೆ ಸುಮ್ಮನಿದ್ದರು?. ರಾಜಕೀಯ ಕಾರಣಗಳಿಗಾಗಿ ಧ್ವನಿ ಎತ್ತುವುದರಿಂದ ಸಾಮಾಜಿಕ ನ್ಯಾಯ ಕೊಡಿಸಲು ಸಾಧ್ಯವಿಲ್ಲ ಎಂದು ಟೀಕಿಸಿದರು.

ಲಿಂಗಾಯತ ಧರ್ಮ ಶ್ಲಾಘಿಸಿದ ಅಠವಳೆ

ಕರ್ನಾಟಕದಲ್ಲಿ ಇರುವ ಲಿಂಗಾಯತ ಧರ್ಮ ಸಜ್ಜನ ಧರ್ಮ. ಸಂಸ್ಥಾಪಕ ಬಸವಣ್ಣ ಅವರು 12ನೇ ಶತಮಾನದಲ್ಲೇ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಿದ್ದರು. ಅವರ ಸಾಮಾಜಿಕ ಸಮಾನತೆಯ ಪರಿಕಲ್ಪನೆಯೇ ಅಂಬೇಡ್ಕರ್‌ ಅವರ ಸಂವಿಧಾನದ ತಳಹದಿ ಎಂದು ಸಚಿವ ಅಠವಳೆ ಶ್ಲಾಘಿಸಿದರು.

ಉದ್ಯೋಗದಲ್ಲೂ ಮಹಿಳಾ ಮೀಸಲಾತಿ

ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿಯ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದ ಕೇಂದ್ರ ಸರ್ಕಾರ ಉದ್ಯೋಗದಲ್ಲೂ ಮಹಿಳೆಯರಿಗೆ ಮೀಸಲಾತಿ ನೀಡುವ ಕುರಿತು ಚಿಂತನೆ ನಡೆಸಿದೆ. ಇಂತಹ ನಿರ್ಧಾರಗಳು ಮಹಿಳಾ ಸಬಲೀಕರಣದಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದು ಅಠವಳೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.