ADVERTISEMENT

ಅಬಕಾರಿ: ‘ಜಾತಿ ಪ್ರಭಾವ’ವೇ ಬರೋಬ್ಬರಿ; ಮುಖ್ಯಮಂತ್ರಿ, ರಾಜ್ಯಪಾಲರಿಗೆ ದೂರು

ಕುರುಬ ಅಧಿಕಾರಿಗಳಿಗಾಗಿ ಅನ್ಯರ ಎತ್ತಂಗಡಿಗೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 19:30 IST
Last Updated 1 ಜುಲೈ 2024, 19:30 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

ಬೆಂಗಳೂರು: ರಾಜಧಾನಿ ವ್ಯಾಪ್ತಿಯಲ್ಲಿ ಅಬಕಾರಿ ಇಲಾಖೆಯ ಪ್ರಮುಖ ಹುದ್ದೆಗಳನ್ನು ಕುರುಬ ಸಮುದಾಯದ ಅಧಿಕಾರಿಗಳಿಗೇ ನೀಡಲು ಅನ್ಯ ಜಾತಿಯವರನ್ನು ಅಕಾಲಿಕವಾಗಿ ವರ್ಗಾವಣೆ ಮಾಡುತ್ತಿರುವುದು ಇಲಾಖೆಯೊಳಗೆ ಆಕ್ರೋಶಕ್ಕೆ ಕಾರಣವಾಗಿದೆ. ವರ್ಗಾವಣೆಯಲ್ಲಿ ‘ಜಾತಿ ಪ್ರಭಾವ’ ಮೇಲಾಟ ನಡೆಸುತ್ತಿರುವ ಕುರಿತು ಕೆಲವು ಅಧಿಕಾರಿಗಳು ಮುಖ್ಯಮಂತ್ರಿ ಕಚೇರಿ ಮತ್ತು ರಾಜಭವನಕ್ಕೂ ದೂರಿತ್ತಿದ್ದಾರೆ.

ಬೆಂಗಳೂರು ನಗರದಲ್ಲಿ ಎಂಟು ಅಬಕಾರಿ ಜಿಲ್ಲೆಗಳಿವೆ. ಇಲ್ಲಿರುವ ಎಂಟು ಅಬಕಾರಿ ಉಪ ಆಯುಕ್ತರ ಹುದ್ದೆಗಳ ಪೈಕಿ ನಾಲ್ಕರಲ್ಲಿ ಕುರುಬ ಸಮುದಾಯದ ಅಧಿಕಾರಿಗಳೇ ಇದ್ದಾರೆ. ಈಗ ಅದೇ ಸಮುದಾಯದ ಇನ್ನೂ ಕೆಲವರಿಗೆ ರಾಜಧಾನಿಯಲ್ಲೇ ಉಪ ಆಯುಕ್ತರ ಹುದ್ದೆ ನೀಡಲು ಭಾರಿ ಕಸರತ್ತು ನಡೆಯುತ್ತಿದೆ.

ADVERTISEMENT

ನಗರದ ಮೇಲೆ ಹಿಡಿತ ಹೊಂದಿರುವ ಪ್ರಭಾವಿ ಸಚಿವರೊಬ್ಬರು, ಇಲಾಖೆಯ ಮೇಲೆ ಹಿಡಿತ ಸಾಧಿಸಿರುವ ದಲ್ಲಾಳಿಗಳು ಮತ್ತು ಕೆಲವು ಅಧಿಕಾರಿಗಳು ಕುರುಬ ಸಮುದಾಯದ ಅಧಿಕಾರಿಗಳಿಗಾಗಿ ಅನ್ಯರ ಸ್ಥಾನ ಪಲ್ಲಟಕ್ಕೆ ತಯಾರಿ ಆರಂಭಿಸಿರುವುದು ಇಲಾಖೆಯೊಳಗೆ ಅಸಮಾಧಾನದ ಕಿಡಿ ಹೊತ್ತಿಸಿದೆ. ಮುಖ್ಯಮಂತ್ರಿಯವರ ಕಚೇರಿ ಮತ್ತು ರಾಜ್ಯಪಾಲರಿಗೆ ರವಾನೆಯಾಗಿರುವ ಅನಾಮಧೇಯ ಪತ್ರವು ಅಬಕಾರಿ ಇಲಾಖೆಯೊಳಗಿನ ‘ಜಾತಿ ರಾಜಕಾರಣದ ಕಂಪನ’ವನ್ನು ಬಹಿರಂಗಪಡಿಸಿದೆ.

‘ಬೆಂಗಳೂರು ನಗರದಲ್ಲಿರುವ ಎಂಟು ಅಬಕಾರಿ ಉಪ ಆಯುಕ್ತರ ಹುದ್ದೆಗಳಲ್ಲಿ ಮೂರು ಕುರುಬ ಸಮುದಾಯದ ಅಧಿಕಾರಿಗಳಿದ್ದರು. ಕೆಲವು ತಿಂಗಳ ಹಿಂದೆ ಬೇರೆ ಸಮುದಾಯದ ಒಬ್ಬರನ್ನು ಅಕಾಲಿಕವಾಗಿ ವರ್ಗಾವಣೆ ಮಾಡಿ ಕುರುಬ ಸಮುದಾಯದ ಅಧಿಕಾರಿಯನ್ನೇ ಅಲ್ಲಿಗೆ ನಿಯೋಜಿಸಲಾಗಿತ್ತು. ಈಗ ಶೇಕಡ 50ರಷ್ಟು ಹುದ್ದೆಗಳಲ್ಲಿ ಒಂದೇ ಸಮುದಾಯದ ಅಧಿಕಾರಿಗಳಿದ್ದಾರೆ. ಆದರೂ, ಅದೇ ಸಮುದಾಯದ ಮತ್ತಷ್ಟು ಮಂದಿಯನ್ನು ಉಪ ಆಯುಕ್ತರನ್ನಾಗಿ ವರ್ಗಾವಣೆ ಮಾಡಲು ಇತರರನ್ನು ಅಕಾಲಿಕವಾಗಿ ವರ್ಗಾವಣೆ ಮಾಡುವ ಪ್ರಯತ್ನ ನಡೆದಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಬಕಾರಿ ಇಲಾಖೆಯ ಕೆಲವು ಅಧಿಕಾರಿಗಳು ದೂರುತ್ತಾರೆ.

ಪ್ರಭಾವಿ ಸಚಿವರ ಹಸ್ತಕ್ಷೇಪ: ಅಬಕಾರಿ ಇಲಾಖೆಯಲ್ಲಿ ಬೆಂಗಳೂರಿನ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ  ಬೆಂಗಳೂರು ನಗರವನ್ನು ಪ್ರತಿನಿಧಿಸುವ ಅತ್ಯಂತ ಪ್ರಭಾವಿ ಸಚಿವರೊಬ್ಬರು ಹಸ್ತಕ್ಷೇಪ ಮಾಡುತ್ತಿದ್ದಾರೆ. ಒಂದೇ ಸಮುದಾಯದ ಅಧಿಕಾರಿಗಳಿಗೆ ಬೆಂಗಳೂರಿನಲ್ಲಿ ಪ್ರಮುಖ ಹುದ್ದೆಗಳನ್ನು ನೀಡುವುದರ ಹಿಂದೆ ಅವರ ಪ್ರಭಾವವೇ ಹೆಚ್ಚು ಕೆಲಸ ಮಾಡುತ್ತಿದೆ ಎನ್ನುವ ದೂರು ಇಲಾಖೆಯೊಳಗೆ ಜೋರಾಗಿ ಸದ್ದು ಮಾಡುತ್ತಿದೆ.

‘ಅಬಕಾರಿ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆಯಲ್ಲಿ ಜಾತಿಯ ಪ್ರಭಾವವೇ ಹೆಚ್ಚಾಗಿ ಕೆಲಸ ಮಾಡುತ್ತಿದೆ. ಇದರಿಂದ ಕುರುಬ ಸಮುದಾಯವನ್ನು ಹೊರತುಪಡಿಸಿ ಉಳಿದ ಜಾತಿಗಳ ಅಧಿಕಾರಿಗಳು ಅಕಾಲಿಕ ವರ್ಗಾವಣೆಯ ಭೀತಿಯಲ್ಲಿದ್ದಾರೆ’ ಎಂಬ ಉಲ್ಲೇಖ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ರವಾನೆಯಾಗಿರುವ ಪತ್ರದಲ್ಲಿದೆ.

ಪ್ರತಿಕ್ರಿಯಿಸದ ಸಚಿವರು: ಅಬಕಾರಿ ಇಲಾಖೆ ಅಧಿಕಾರಿಗಳ ವರ್ಗಾವಣೆಯಲ್ಲಿ ಜಾತಿ ಪ್ರಭಾವ, ಮಧ್ಯವರ್ತಿಗಳ ಹಾವಳಿ ಮತ್ತು ಭ್ರಷ್ಟಾಚಾರದ ಆರೋಪ ಕುರಿತು ಅಬಕಾರಿ ಸಚಿವ ಆರ್‌. ಬಿ. ತಿಮ್ಮಾಪುರ ಅವರ ಪ್ರತಿಕ್ರಿಯೆ ಪಡೆಯಲು ಪತ್ರಿಕೆ ಪ್ರಯತ್ನಿಸಿತು. ಸಚಿವರು ಕರೆ ಸ್ವೀಕರಿಸಲಿಲ್ಲ, ವಾಟ್ಸ್‌ ಆ್ಯಪ್‌ ಸಂದೇಶದ ಮೂಲಕ ಕೇಳಿದ ಪ್ರಶ್ನೆಗೂ ಪ್ರತಿಕ್ರಿಯಿಸಲಿಲ್ಲ.

ಮಂಗಳೂರಿನ ಮಧ್ಯವರ್ತಿಯ ‘ರಹದಾರಿ’

ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಅಬಕಾರಿ ಉಪ ಆಯುಕ್ತರ ಎಂಟು ಹುದ್ದೆಗಳ ಜತೆಗೆ ಅಧೀಕ್ಷಕರ ಎಂಟು, 16 ಡಿವೈಎಸ್‌ಪಿ ಮತ್ತು 54 ಇನ್‌ಸ್ಪೆಕ್ಟರ್‌ ಹುದ್ದೆಗಳಿವೆ. ಈ ಅಧಿಕಾರಿಗಳ ವರ್ಗಾವಣೆಗೆ ಮಂಗಳೂರಿನ ಮಧ್ಯವರ್ತಿಯೊಬ್ಬರು ‘ರಹದಾರಿ’ ಒದಗಿಸುವ ಕೆಲಸ ಮಾಡುತ್ತಿರುವುದನ್ನು ಅಧಿಕಾರಿಗಳೇ ಬಹಿರಂಗಪಡಿಸಿದ್ದಾರೆ.

‘ಈ ಹುದ್ದೆಗಳ ವರ್ಗಾವಣೆಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಮೂಲಕ ಮಂಗಳೂರಿನ ವ್ಯಕ್ತಿಯೊಬ್ಬರು ಮಧ್ಯವರ್ತಿಯಾಗಿ ‘ವ್ಯವಹಾರ’ದ ಪ್ರಸ್ತಾವ ಮುಂದಿಡುತ್ತಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ವರ್ಗಾವಣೆಗೆ ದುಪ್ಪಟ್ಟು ‘ದರ’ ಪ್ರಸ್ತಾಪಿಸುತ್ತಿದ್ದಾರೆ’ ಎಂದು ಅಧಿಕಾರಿಗಳು ಆರೋಪಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.