ನವದೆಹಲಿ: ‘ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆಯಾದರೆ ಕರ್ನಾಟಕ, ತಮಿಳುನಾಡು, ಪುದುಚೆರಿ ಹಾಗೂ ಕೇರಳ ರಾಜ್ಯಗಳಿಗೆ ನೀರಿನ ಹಂಚಿಕೆಯನ್ನು ಪ್ರಮಾಣಾನುಗುಣವಾಗಿ ಕಡಿತ ಮಾಡಲು ಅವಕಾಶ ಇದೆ. ಈ ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ನೀರು ನಿಯಂತ್ರಣ ಸಮಿತಿ ಸೂಕ್ತ ಕ್ರಮ ಕೈಗೊಳ್ಳಬಹುದು’ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ಸ್ಪಷ್ಟಪಡಿಸಿದೆ.
ಲೋಕಸಭೆಯಲ್ಲಿ ತಮಿಳುನಾಡಿನ ಸಂಸದರಾದ ವೈಕೊ, ಸಿ.ವಿ.ಷಣ್ಮುಖಂ ಕೇಳಿರುವ ಪ್ರಶ್ನೆಗೆ ಜಲಶಕ್ತಿ ಖಾತೆಯ ರಾಜ್ಯ ಸಚಿವ ರಾಜ್‌ಭೂಷಣ್ ಚೌಧರಿ ಸೋಮವಾರ ಈ ಉತ್ತರ ನೀಡಿದ್ದಾರೆ.
‘ಕಾವೇರಿ ಜಲವಿವಾದ ನ್ಯಾಯಮಂಡಳಿಯು 2007ರಲ್ಲಿ ಅಂತಿಮ ತೀರ್ಪು ನೀಡಿದೆ. ನ್ಯಾಯಮಂಡಳಿಯು 740 ಟಿಎಂಸಿ ನೀರನ್ನು ನಾಲ್ಕು ರಾಜ್ಯಗಳಿಗೆ ಹಂಚಿಕೆ ಮಾಡಿದೆ. ಸಂಕಷ್ಟದ ವರ್ಷಗಳಲ್ಲಿ ರಾಜ್ಯಗಳ ನೀರಿನ ಪಾಲನ್ನು ಕಡಿತ ಮಾಡಬಹುದು ಎಂದು ನ್ಯಾಯಮಂಡಳಿಯ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಈ ತೀರ್ಪನ್ನು ಸುಪ್ರೀಂ ಕೋರ್ಟ್ 2018ರಲ್ಲಿ ಮಾರ್ಪಡಿಸಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಸಾಮಾನ್ಯ ವರ್ಷಗಳಲ್ಲಿ ಕರ್ನಾಟಕವು ತಮಿಳುನಾಡಿಗೆ 177.25 ಟಿಎಂಸಿ ಅಡಿ ನೀರು ಹರಿಸಬೇಕು. ನಿರ್ವಹಣಾ ಪ್ರಾಧಿಕಾರದ ಮಧ್ಯಸ್ಥಿಕೆಯಲ್ಲಿ ಸಂಕಷ್ಟದ ವರ್ಷಗಳಲ್ಲಿ ನೀರಿನ ಪ್ರಮಾಣ ಕಡಿಮೆ ಮಾಡಬಹುದು ಎಂದೂ ಸುಪ್ರೀಂ ಕೋರ್ಟ್ ಹೇಳಿದೆ’ ಎಂದು ಅವರು ಮಾಹಿತಿ ನೀಡಿದರು.
‘ಕಾವೇರಿ ನೀರು ಹರಿಸುವಿಕೆ ಸಂಬಂಧ ಪ್ರಾಧಿಕಾರ ಹಾಗೂ ಸಮಿತಿ ನಿಯಮಿತವಾಗಿ ಸಭೆ ನಡೆಸಿ ಕಾವೇರಿ ಜಲಾನಯನ ಪ್ರದೇಶದ ಜಲ–ಹವಾಮಾನ ಪರಿಸ್ಥಿತಿ ಹಾಗೂ ನೀರಿನ ಹರಿವಿನ ಪ್ರಮಾಣದ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತವೆ. ಕಾವೇರಿ ನೀರು ನಿಯಂತ್ರಣ ಸಮಿತಿಯು ಜುಲೈ 11ರಂದು ಸಭೆ ನಡೆಸಿ ಕರ್ನಾಟಕವು ತಮಿಳುನಾಡಿಗೆ ಪ್ರತಿದಿನ 1 ಟಿಎಂಸಿ ನೀರು ಬಿಡುಗಡೆ ಮಾಡಬೇಕು ಎಂದು ಶಿಫಾರಸು ಮಾಡಿದೆ’ ಎಂದು ಅವರು ವಿವರ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.