ADVERTISEMENT

ಜೀವನದಿಯ ರಕ್ಷಣೆಗೆ ‘ಕಾವೇರಿ ಕೂಗು’

ಕಾವೇರಿ ಜಲಾನಯನ ಪ್ರದೇಶದಲ್ಲಿ 25 ಕೋಟಿ ಸಸಿ ನೆಡುವ ಗುರಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 20:00 IST
Last Updated 20 ಜುಲೈ 2019, 20:00 IST
ಜಗ್ಗಿ ವಾಸುದೇವ್‌
ಜಗ್ಗಿ ವಾಸುದೇವ್‌   

ಬೆಂಗಳೂರು:ರಾಜ್ಯದ ಜೀವನದಿಯಾಗಿರುವ ಕಾವೇರಿಯ ರಕ್ಷಣೆಗೆ ಈಶ ಫೌಂಡೇಷನ್‌ ಮತ್ತು ನದಿ ರಕ್ಷಿಸಿ ಮಂಡಳಿ ಸೆಪ್ಟೆಂಬರ್ 3ರಿಂದ ‘ಕಾವೇರಿ ಕೂಗು’ ಅಭಿಯಾನ ಆರಂಭಿಸಲಿದೆ. ಈಶ ಫೌಂಡೇಷನ್‌ನ ಜಗ್ಗಿ ವಾಸುದೇವ್‌ ನೇತೃತ್ವದಲ್ಲಿ ಕಾವೇರಿ ಜಲಾನಯನ ಪ್ರದೇಶದ 100 ತಾಲ್ಲೂಕುಗಳಲ್ಲಿ ಬೈಕ್‌ ರ‍್ಯಾಲಿ ನಡೆಯಲಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ 25 ಕೋಟಿ ಸಸಿಗಳನ್ನು ನೆಡುವುದು, ಅರಣ್ಯ ಕೃಷಿಯನ್ನು ಉತ್ತೇಜಿಸುವುದು, ನದಿ ಮತ್ತು ಮಣ್ಣಿನ ಸಂರಕ್ಷಣೆಯ ಜೊತೆಗೆ ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಲ್ಲಿ ಅಭಿಯಾನ ಕೈಗೊಳ್ಳಲಾಗುತ್ತಿದೆ.

‘ಕಾವೇರಿ ನೀರಿನ ಹರಿವು ಶೇ 40ರಷ್ಟು ಕಡಿಮೆಯಾಗಿದೆ. ಮಣ್ಣಿನ ಫಲವತ್ತತೆ ತೀರಾ ಕಡಿಮೆಯಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ, ಮುಂದಿನ 25 ವರ್ಷಗಳಲ್ಲಿ ಬೆಳೆ ಬೆಳೆಯಲಾರದಷ್ಟರ ಮಟ್ಟಿಗೆ ಮಣ್ಣು ತನ್ನ ಫಲವತ್ತತೆ ಕಳೆದುಕೊಳ್ಳಲಿದೆ’ ಎಂದು ಜಗ್ಗಿ ವಾಸುದೇವ್‌ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಅಭಿಯಾನದಡಿ ವಿತರಿಸಲಾಗುವ ಸಸಿಗಳನ್ನು ಬೆಳೆಸಲು ಮೊದಲ ಮೂರು ನಾಲ್ಕು ವರ್ಷ ರೈತರಿಗೆ ಸಹಾಯಧನ ನೀಡಬೇಕೆಂದು ಸರ್ಕಾರವನ್ನು ಕೋರಲಾಗುವುದು’ ಎಂದರು.

‘ಕಾವೇರಿ ಕೂಗು’ ಅಭಿಯಾನ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಅನುಷ್ಠಾನಕ್ಕೆ ಬರಲಿದೆ. ಕಾವೇರಿ ಜಲಾನಯನ ಪ್ರದೇಶದ ಸುಮಾರು 24 ಲಕ್ಷ ರೈತರಿಗೆ ತಮ್ಮ ಜಮೀನುಗಳಲ್ಲಿ ಶೇ 10ರಷ್ಟು ಜಾಗವನ್ನು ಅರಣ್ಯ ಕೃಷಿಗೆ ಮೀಸಲಿಡಲು ಕೋರಲಾಗುವುದು. ಇಷ್ಟು ಭೂಮಿಯಲ್ಲಿ ಮರ ಬೆಳೆಸಿದರೂ, ಅವರ ಆದಾಯ ಐದರಿಂದ ಹತ್ತು ಪಟ್ಟು ಹೆಚ್ಚಾಗಲಿದೆ’ ಎಂದು ಇಂಧನ ಮತ್ತು ಸಂಪನ್ಮೂಲ ಸಂಸ್ಥೆಯ ದಕ್ಷಿಣ ಪ್ರಾದೇಶಿಕ ಕೇಂದ್ರದ ನಿರ್ದೇಶಕ ನರಸಿಂಹ ರಾಜು ತಿಳಿಸಿದರು.

‘₹42 ಕೊಡಿ–ಗಿಡ ನೆಡಿ’
‘ರಾಜ್ಯದಲ್ಲಿನ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನರ್ಸರಿಗಳನ್ನು ಸ್ಥಾಪಿಸಲಾಗುವುದು. ಇದು ಬೃಹತ್‌ ಅಭಿಯಾನವಾಗಿದ್ದು, ಸಾರ್ವಜನಿಕರೂ ಕೈಜೋಡಿಸಬೇಕಾಗಿದೆ. ಒಬ್ಬರು ಕನಿಷ್ಠ ಒಂದು ಸಸಿಗೆ ₹42 ನೀಡಬೇಕು. ಈ ಸಸಿಗಳನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತದೆ. ಈ ಅಭಿಯಾನ ಯಶಸ್ವಿಯಾಗಬೇಕೆಂದರೆ ಜನರ ಬೆಂಬಲ ಅಗತ್ಯವಾಗಿದೆ. ಈ ಅಭಿಯಾನವು ಜನಾಂದೋಲನವಾಗಿ ರೂಪುಗೊಳ್ಳಬೇಕಿದೆ’ ಎಂದು ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಂದಾರ್‌ ಷಾ ವಿನಂತಿಸಿದರು.

*
ಚೆನ್ನೈನಲ್ಲಿನ ನಮ್ಮ ಮನೆಯಲ್ಲಿ ಮೂರು ತಿಂಗಳಿಂದ ಒಂದು ಹನಿ ನೀರು ಸಿಗುತ್ತಿಲ್ಲ. ಕಾವೇರಿ ಯಾರೋ ಒಬ್ಬರಿಗೆ ಸೇರಿದ್ದಲ್ಲ. ಅದು ನಮ್ಮೆಲ್ಲರ ತಾಯಿ. ಅದರ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕಿದೆ.
-ಸುಹಾಸಿನಿ ಮಣಿರತ್ನಂ, ಚಲನಚಿತ್ರ ನಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.