ADVERTISEMENT

ಕಾವೇರಿ: ತಮಿಳುನಾಡು ಮನವಿ ಪುರಸ್ಕರಿಸದ ನೀರು ನಿಯಂತ್ರಣ ಸಮಿತಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 19:38 IST
Last Updated 14 ಜೂನ್ 2024, 19:38 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಜೂನ್‌ ತಿಂಗಳಲ್ಲಿ 9 ಟಿಎಂಸಿ ಅಡಿ ನೀರನ್ನು ಬಿಡಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂಬ ತಮಿಳುನಾಡು ಸರ್ಕಾರದ ಮನವಿಯನ್ನು ಕಾವೇರಿ ನೀರು ನಿಯಂತ್ರಣ ಸಮಿತಿಯು ಶುಕ್ರವಾರ ಪುರಸ್ಕರಿಸಿಲ್ಲ. ಕುಡಿಯುವ ನೀರು ಹಾಗೂ ಪರಿಸರದ ಹರಿವಿನ ಅವಶ್ಯಕತೆಗಳನ್ನು ಪೂರೈಸಲು ಜೂನ್‌ ತಿಂಗಳಲ್ಲಿ ಆದ್ಯತೆ ನೀಡಬೇಕು ಎಂದು ಸಮಿತಿ ಸೂಚಿಸಿದೆ. 

ಸುಪ್ರೀಂ ಕೋರ್ಟ್‌ 2018ರ ಫೆಬ್ರುವರಿ 16ರಂದು ನೀಡಿರುವ ಆದೇಶದ ಪ್ರಕಾರ, ಪ್ರತಿ ವರ್ಷ ಕರ್ನಾಟಕವು ತಮಿಳುನಾಡಿಗೆ 177.25 ಟಿಎಂಸಿ ಅಡಿ ನೀರು ಬಿಡಬೇಕಿದೆ.

ADVERTISEMENT

ಈ ವರ್ಷ ಸಾಮಾನ್ಯ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಹಾಗಾಗಿ, ಕಾವೇರಿ ಜಲಾನಯನ ಪ್ರದೇಶದ ಮೇಲ್ಭಾಗದಲ್ಲಿ ಉತ್ತಮ ಮಳೆಯಾಗುವುದು ನಿಶ್ಚಿತ. ಸುಪ್ರೀಂ ಕೋ‌ರ್ಟ್‌ ಆದೇಶದ ಪ್ರಕಾರ ಕರ್ನಾಟಕ ಸರ್ಕಾರವು ಜೂನ್ ತಿಂಗಳ ಕಂತಿನ ನೀರನ್ನು ಬಿಡುಗಡೆ ಮಾಡಬೇಕು. ಬಿಳಿಗುಂಡ್ಲುವಿನಲ್ಲಿ ಸಾಮಾನ್ಯ ಹರಿವನ್ನು ಖಚಿತಪಡಿಸಬೇಕು ಎಂದು ತಮಿಳುನಾಡು ಸರ್ಕಾರವು ಸಮಿತಿಯ ಮುಂದೆ ಬೇಡಿಕೆ ಮುಂದಿರಿಸಿತು. 

ಕರ್ನಾಟಕ ಸರ್ಕಾರದ ಪ್ರತಿನಿಧಿಗಳು, ‘2023ರ ಜೂನ್‌ ನಿಂದ 2024ರ ಜೂನ್‌ 14ರ ವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಸಂಚಿತ ಒಳಹರಿವಿನ ಕೊರತೆ ಶೇ 70ರಷ್ಟಿದೆ. ಮಳೆಯ ಮುನ್ಸೂಚನೆಗಳ ಆಧಾರದಲ್ಲಿ ಕರ್ನಾಟಕವು ತನ್ನ ಜಲಾಶಯಗಳಿಂದ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಹಿಂದಿನ ನೀರಿನ ವರ್ಷದ ಕ್ಯಾರಿ ಓವರ್ ಸಂಗ್ರಹವನ್ನು ಕುಡಿಯಲು ಮತ್ತು ಕೈಗಾರಿಕೆಗಳಿಗೆ ಮೀಸಲಿರಿಸಲಾಗಿದೆ. ಜಲಾಶಯಗಳಲ್ಲಿ ನೀರಿನ ಸಂಗ್ರಹ ಭಾರಿ ಕಡಿಮೆ ಇದೆ. ಇಂತಹ ಸನ್ನಿವೇಶದಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಉಭಯ ಸರ್ಕಾರಗಳ ವಾದ ಆಲಿಸಿದ ಸಮಿತಿಯು, ’ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಪೂರ್ಣ ಪ್ರಮಾಣದಲ್ಲಿ ಇನ್ನಷ್ಟೇ ಆರಂಭವಾಗಬೇಕಿದೆ. ಕಾವೇರಿ ನದಿ ಪಾತ್ರದ ಭೂಮಿಯಲ್ಲಿನ ತೇವಾಂಶ ಪ್ರಮಾಣ ಇನ್ನಷ್ಟೇ ವೃದ್ಧಿಯಾಗಬೇಕಿದೆ. ಜೂನ್‌ನಲ್ಲಿ ಕರ್ನಾಟಕದ ನಾಲ್ಕು ಜಲಾಶಯಗಳ ನಿವ್ವಳ ಒಳಹರಿವು 1.70 ಟಿಎಂಸಿ ಅಡಿಯಷ್ಟಿದೆ. ಸದ್ಯ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಬೇಕು’ ಎಂದು ಹೇಳಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.