ರಾಮನಗರ: ‘ನಮ್ಮ ನೀರು, ನಮ್ಮ ಹಕ್ಕು ಎಂದು ಜಾಗಟೆ ಹೊಡೆದುಕೊಂಡು ಊರೂರು ತಿರುಗಾಡಿದವರು, ಗೋಡೆಗಳ ಮೇಲೆ ಸ್ಲೋಗನ್ ಬರೆದುಕೊಂಡಿದ್ದವರು ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ದೇಕೆ?’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಹರಿಹಾಯ್ದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೀರಿನ ಹಕ್ಕು ಸಾಧಿಸಲು ಹೊರಟವರು, ರಾಜ್ಯದ ಹಿತ ಕಡೆಗಣಿಸಿ ನೆರೆ ರಾಜ್ಯಕ್ಕೆ ನೀರು ಬಿಟ್ಟಿದ್ದಾರೆ. ನೀರು ಬೇಕು ಎಂದು ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದ ತಕ್ಷಣ ರಾಜ್ಯ ಸರ್ಕಾರ ಹೆದರಿ ನೀರು ಬಿಟ್ಟಿದ್ದೇಕೆ? ಕೋರ್ಟ್‌ನಲ್ಲಿ ಏಕೆ ಆಕ್ಷೇಪ ಸಲ್ಲಿಸಲಿಲ್ಲ. ರಾಜ್ಯದ ಜಲ ಸಂಕಷ್ಟದ ಬಗ್ಗೆ ಏಕೆ ಮನವರಿಕೆ ಮಾಡಿಕೊಡಲಿಲ್ಲ’ ಎಂದು ತರಾಟಗೆ ತೆಗೆದುಕೊಂಡರು.
‘ತಮಿಳುನಾಡಿಗೆ ನೀರು ಬಿಟ್ಟ ವಿಷಯ ಗೊತ್ತಾದ ಕೂಡಲೇ ನಾನು ವಿರೋಧ ವ್ಯಕ್ತಪಡಿಸಿದೆ. ಕೂಡಲೇ ಸರ್ವಪಕ್ಷ ಸಭೆ ಕರೆಯಬೇಕು ಎಂದು ಒತ್ತಾಯಿಸಿದೆ. ಈಗ ಸರ್ವಪಕ್ಷ ಸಭೆ ಕರೆಯುತ್ತೇವೆ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕುತ್ತೇವೆ ಎಂದು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡಿದ್ದಾರೆ. ನೀರು ಬಿಡುವುದಕ್ಕೆ ಮೊದಲೇ ಇದನ್ನು ಮಾಡಬಹುದಿತ್ತಲ್ಲವೆ? ಕಾಂಗ್ರೆಸ್‌ನವರಿಂದ ರಾಜ್ಯದ ನೀರಿನ ಹಕ್ಕಿನ ರಕ್ಷಣೆ ಸಾಧ್ಯವಿಲ್ಲ’ ಎಂದು ಹೇಳಿದರು.
ಓದಿ... ಜಲ ವಿವಾದ, ಅಣೆಕಟ್ಟೆಗಳ ನೀರಿನ ಬಗ್ಗೆ ಚರ್ಚಿಸಲು 23ಕ್ಕೆ ಸರ್ವಪಕ್ಷ ಸಭೆ: ಡಿ.ಕೆ. ಶಿವಕುಮಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.