ADVERTISEMENT

ಸುಪ್ರೀಂಕೋರ್ಟ್‌ಗೆ ಮೇಲ್ಮನವಿ | ಸರ್ವಪಕ್ಷ ಸಭೆ ಬಳಿಕ ತೀರ್ಮಾನ: ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2023, 23:30 IST
Last Updated 21 ಆಗಸ್ಟ್ 2023, 23:30 IST
ಡಿ.ಕೆ ಶಿವಕುಮಾರ್‌
ಡಿ.ಕೆ ಶಿವಕುಮಾರ್‌   

ಬೆಂಗಳೂರು: ‘ತಮಿಳುನಾಡಿಗೆ ಕೊಡಲು ನಮ್ಮಲ್ಲಿ ನೀರಿಲ್ಲ. ಇದೇ 31ರವರೆಗೆ ನಿತ್ಯ ತಮಿಳುನಾಡಿಗೆ 10 ಸಾವಿರ  ಕ್ಯೂಸೆಕ್ ನೀರು ಬಿಡಬೇಕೆಂಬ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆಯನ್ನು ಪುನರ್‌ಪರಿಶೀಲಿಸುವಂತೆ ನಾವು ಮನವಿ ಮಾಡಿದ್ದೇವೆ. ಸರ್ವಪಕ್ಷ ಸಭೆಯ ಬಳಿಕ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ನಿರ್ಧರಿಸಲಾಗುವುದು’ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ನಮಗೆ ಒಟ್ಟು 124 ಟಿಎಂಸಿ ಅಡಿ ನೀರು ಅಗತ್ಯವಿದೆ. ಆದರೆ, ಈಗ ಇರುವುದು 55 ಟಿಎಂಸಿ ಅಡಿಗಳು ಮಾತ್ರ. ಬೆಂಗಳೂರಿಗೆ ಕುಡಿಯಲು 24 ಟಿಎಂಸಿ ಅಡಿ ನೀರು ಬೇಕು. ಮೈಸೂರು, ಮಂಡ್ಯ, ರಾಮನಗರಕ್ಕೆ 20 ಟಿಎಂಸಿ ಅಡಿ ಬೇಕು. ಕೆಆರ್‌ಎಸ್‌ನಲ್ಲಿ 22 ಟಿಎಂಸಿ, ಕಬಿನಿಯಲ್ಲಿ 6.5 ಟಿಎಂಸಿ, ಹಾರಂಗಿಯಲ್ಲಿ 7 ಟಿಎಂಸಿ, ಹೇಮಾವತಿಯಲ್ಲಿ 20 ಟಿಎಂಸಿ ಅಡಿ ನೀರು ಇದೆ’ ಎಂದರು.

‘ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಪ್ರತ್ಯೇಕ ಪೀಠ ರಚಿಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ. ನಾವು ನಮ್ಮ ರಾಜ್ಯದ ಪರಿಸ್ಥಿತಿಯ ವಾಸ್ತವಾಂಶವನ್ನು ನ್ಯಾಯಾಲಯದ ಮುಂದಿಡುತ್ತೇವೆ’ ಎಂದರು.

ADVERTISEMENT

‘ಕಾವೇರಿ, ಮೇಕೆದಾಟು ಮತ್ತು ಮಹದಾಯಿ ವಿಚಾರವಾಗಿ ಇದೇ 23ರಂದು ಕರೆದಿರುವ ಸರ್ವಪಕ್ಷ ಸಭೆಯಲ್ಲಿ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ದು ಒತ್ತಡ ಹಾಕಲು ಒಪ್ಪಿದರೆ ಅದಕ್ಕೆ ನಾವು ಸಿದ್ಧ’ ಎಂದು ಹೇಳಿದರು.

‘ತಮಿಳುನಾಡು ಸರ್ಕಾರವು ಪ್ರಾಧಿಕಾರದ ವಿರುದ್ದ ಹೋಗಿದೆಯೇ ಹೊರತು ಕರ್ನಾಟಕ ಸರ್ಕಾರದ ವಿರುದ್ಧ ಅಲ್ಲ. ತಮಿಳುನಾಡಿನ ಅರ್ಜಿಯ ವಿರುದ್ಧ ಕೇಂದ್ರ ಸರ್ಕಾರ ಪ್ರಮಾಣಪತ್ರ ಸಲ್ಲಿಸಬಹುದಿತ್ತು. ಏಕೆ ಸಲ್ಲಿಸಿಲ್ಲ ಎನ್ನುವುದು ಬೊಮ್ಮಾಯಿ ಮತ್ತು ಕುಮಾರಸ್ವಾಮಿ‌ಗೆ ಗೊತ್ತಿದೆ. ಆದರೂ ಬೊಮ್ಮಾಯಿ ಅವರು ನೀರು ಬಿಡಬೇಡಿ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮೈತ್ರಿ ಕಾರಣಕ್ಕೆ ನೀರು ಹರಿಸಲಾಗಿದೆ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ’ ಎಂದರು.

‘ತಮಿಳುನಾಡಿನವರು 64 ಟಿಎಂಸಿ ಅಡಿ ನೀರು ಬಳಸಿಕೊಂಡಿದ್ದಾರೆ ಎಂದು ಬೊಮ್ಮಾಯಿ ಆರೋಪ ಮಾಡುತ್ತಿದ್ದಾರೆ. ಅವರ ಪಾಲಿನ ನೀರು ಬಳಸಿಕೊಳ್ಳುವುದಕ್ಕೆ ನಾವು ಅಡ್ಡಿಪಡಿಸಲು ಆಗುತ್ತದೆಯೇ?ಅದನ್ನು ಪ್ರಶ್ನಿಸುವ ಹಕ್ಕು ನಮಗಿಲ್ಲ. ನಾವು ಪ್ರತಿ ಹನಿ ನೀರನ್ನು ಲೆಕ್ಕಾಚಾರದಲ್ಲಿ ನೀಡುತ್ತಿದ್ದೇವೆ. ನಾವು ಹೆಚ್ಚುವರಿಯಾಗಿ ನೀರು ಬಿಟ್ಟಿಲ್ಲ. ಮಾಜಿ ಮುಖ್ಯಮಂತ್ರಿಗಳಾದ ಇಬ್ಬರೂ ಕಾವೇರಿ ನೀರಿನ ವಿಚಾರ ಸರಿಯಾಗಿ ಗೊತ್ತಿಲ್ಲದೇ ಏಕೆ ಮಾತನಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.