ನವದೆಹಲಿ: ತಮಿಳುನಾಡಿಗೆ ಜನವರಿ ತಿಂಗಳಿನಲ್ಲಿ ಪ್ರತಿದಿನ 1,030 ಕ್ಯೂಸೆಕ್ (ಒಟ್ಟು 2.7 ಟಿಎಂಸಿ) ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿಯು ಕರ್ನಾಟಕ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಮಂಗಳವಾರ ಇಲ್ಲಿ ನಡೆದ ಸಮಿತಿಯ 91ನೇ ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಅಧಿಕಾರಿಗಳು ಭಾಗಿಯಾಗಿದ್ದರು. ಡಿಸೆಂಬರ್‌ನ ಉಳಿದ ದಿನಗಳಲ್ಲಿ ಹಾಗೂ ಜನವರಿ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಮಾರ್ಪಡಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ಪ್ರಕಾರ ನೀರು ಹರಿಸಬೇಕು ಎಂದು ಸಮಿತಿ ಶಿಫಾರಸು ಮಾಡಿತು. ಡಿಸೆಂಬರ್ ಉಳಿದ ಅವಧಿಗೆ ರಾಜ್ಯವು ಪ್ರತಿದಿನ 3,128 ಕ್ಯೂಸೆಕ್ ನೀರು ಹರಿಸಬೇಕಿದೆ.
‘ರಾಜ್ಯದ ನಾಲ್ಕು ಜಲಾಶಯಗಳಲ್ಲಿ ಈ ವರ್ಷ ಒಳಹರಿವು ಶೇ 52.84ರಷ್ಟು ಕಡಿಮೆಯಾಗಿದೆ. ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶದಲ್ಲಿ ಹಿಂಗಾರಿನಲ್ಲಿ ಮಳೆಯಾಗುತ್ತದೆ. ಹೀಗಾಗಿ, ಆ ರಾಜ್ಯಕ್ಕೆ ಬೆಳೆಗಳನ್ನು ಉಳಿಸಿಕೊಳ್ಳಲು ಯಾವುದೇ ತೊಂದರೆ ಆಗುವುದಿಲ್ಲ. ಸಾಂಬಾ ಬೆಳೆಯ ಕಟಾವು ಡಿಸೆಂಬರ್ ಮೊದಲ ವಾರದಲ್ಲೇ ಮುಗಿದಿದೆ. ಹೀಗಾಗಿ, ನೀರಿನ ಅವಶ್ಯಕತೆ ಇಲ್ಲ’ ಎಂದು ಕರ್ನಾಟಕ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಸಮಿತಿಯ ಗಮನಕ್ಕೆ ತಂದರು.
‘ಮೆಟ್ಟೂರು ಮತ್ತು ಭವಾನಿ ಸಾಗರ ಜಲಾಶಯಗಳಲ್ಲಿ 50.367 ಟಿಎಂಸಿ ಅಡಿ ನೀರಿದೆ. ಇದು ತಮಿಳುನಾಡಿನ ಬೇಡಿಕೆಗಿಂತ ಹೆಚ್ಚು. ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಒಳಹರಿವು ಸ್ಥಗಿತಗೊಂಡಿದೆ. ಮುಂದಿನ ದಿನಗಳಲ್ಲಿ ಒಳಹರಿವಿನ ನಿರೀಕ್ಷೆ ಇಲ್ಲ. ಹೀಗಾಗಿ, ನೀರು ಬಿಡುಗಡೆ ಸಾಧ್ಯವಿಲ್ಲ’ ಎಂದರು.
‘ಕರ್ನಾಟಕವು 14 ಟಿಎಂಸಿ (7.60 ಟಿಎಂಸಿ ಬಾಕಿ ಸೇರಿದಂತೆ) ನೀರು ಬಿಡಬೇಕು’ ಎಂದು ತಮಿಳುನಾಡಿನ ಅಧಿಕಾರಿಗಳು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.