ಮಡಿಕೇರಿ: ಕಾವೇರಿ ತೀರ್ಥೋದ್ಭವ ಇದೇ 17ರಂದು ಬೆಳಗಿನ ಜಾವ ಜರುಗಲಿದ್ದು ಪೂಜಾ ಕಾರ್ಯದಲ್ಲಿ ಯಾವುದೇ ಚ್ಯುತಿ ಆಗಬಾರದು. ಈಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಅವರು ಸೂಚನೆ ನೀಡಿದರು.
ಭಾಗಮಂಡಲದ ಭಗಂಡೇಶ್ವರ ದೇವಾಲಯ ಮುಡಿ ಕಟ್ಟಡದಲ್ಲಿ ತುಲಾ ಸಂಕ್ರಮಣ ತೀರ್ಥೋದ್ಭವ ಜಾತ್ರಾ ಮಹೋತ್ಸವ ಸಂಬಂಧ ಶನಿವಾರ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಹೆಚ್ಚಳವಾಗುತ್ತಿದ್ದು ಈ ಹಿನ್ನೆಲೆ ಬಹಳ ಎಚ್ಚರಿಕೆಯಿಂದ ಜನ ದಟ್ಟಣೆ ಹೆಚ್ಚಾಗದಂತೆ ಸರ್ಕಾರದ ನಿಯಮದಂತೆ ಜಾತ್ರಾ ಮಹೋತ್ಸವವನ್ನು ಸಾಂಪ್ರದಾಯಿಕವಾಗಿ ಆಚರಿಸಬೇಕಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಸ್ವಯಂ ನಿಯಂತ್ರಣ ಮಾಡಿಕೊಳ್ಳುವುದು ಅಗತ್ಯ ಎಂದು ಹೇಳಿದರು.
ಮಡಿಕೇರಿ-ಭಾಗಮಂಡಲ-ತಲಕಾವೇರಿ, ಕರಿಕೆ-ಭಾಗಮಂಡಲ, ವಿರಾಜಪೇಟೆ-ನಾಪೋಕ್ಲು ರಸ್ತೆ ಗುಂಡಿ ಮುಚ್ಚುವ ಕೆಲಸವಾಗಬೇಕು. ಸದ್ಯ, 2-3 ದಿನಗಳ ಕಾಲ ವ್ಯಾಪಕವಾಗಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಅದನ್ನು ಗಮನಿಸಿ, ಅ.15ರ ಒಳಗೆ ಗುಂಡಿ ಮುಚ್ಚುವ ಕಾರ್ಯ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗೆ ತಿಳಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲೆಯ ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದ್ದಾರೆ. ಆ ದಿಸೆಯಲ್ಲಿ ಜಿಲ್ಲೆಯ ರಸ್ತೆಗಳು ಅಭಿವೃದ್ಧಿಯಾಗಲಿವೆ ಎಂದು ಬೋಪಯ್ಯ ತಿಳಿಸಿದರು.
ಲೋಕೋಪಯೋಗಿ ರಸ್ತೆಯ ಅಭಿವೃದ್ಧಿಗೆ ಮುಖ್ಯಮಂತ್ರಿ ಅವರ ವಿಶೇಷ ಕಾಳಜಿಯಿಂದ ಹಣ ಬಿಡುಗಡೆ ಮಾಡಿದ್ದಾರೆ. ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಂತೆ ತಿಳಿಸಿದರು.
ತಲಕಾವೇರಿ ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ, ತಲಕಾವೇರಿ ತುಲಾ ಸಂಕ್ರಮಣ ಜಾತ್ರೆಗೆ ಭಕ್ತಾದಿಗಳನ್ನು ಬರಬೇಡಿ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಸರ್ಕಾರದ ನಿಯಮದಂತೆ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳಬೇಕು. ಸ್ಯಾನಿಟೈಸರ್ ಬಳಕೆ ಮಾಡಬೇಕು ಎಂದರು.
ತೀರ್ಥ ಕುಂಡಿಕೆಯ ಬಳಿ 6 ಮಂದಿ ಅರ್ಚಕರು, ತಕ್ಕ ಮುಖ್ಯಸ್ಥರು, ಭಂಡಾರ ತೆಗೆದುಕೊಂಡು ಬರುವವರು ಇರುತ್ತಾರೆ ಎಂದು ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಗಳು ಭಾಗಮಂಡಲ ಮತ್ತು ತಲಕಾವೇರಿಗೆ ಆಗಮಿಸುವವರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕು. ಕೋವಿಡ್ ಸಂಬಂಧ ಜಾಗೃತಿ ಮೂಡಿಸುವ ಕಾರ್ಯವಾಗಬೆಕು ಎಂದು ಹೇಳಿದರು.
ತೀರ್ಥೋದ್ಭವ ಬಳಿಕ 1 ಗಂಟೆಯ ನಂತರ ತೀರ್ಥ ಪ್ರೋಕ್ಷಣೆ ಮತ್ತು ಮಂಗಳಾರತಿ ಮಾಡಲಾಗುತ್ತದೆ. ಗೂಡ್ಸ್ ವಾಹನಗಳಿಗೆ ಅವಕಾಶವಿಲ್ಲ. ತುಲಾ ಸಂಕ್ರಮಣ ಜಾತ್ರೆಯ ಒಂದು ತಿಂಗಳ ಮಟ್ಟಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಭಾಗಮಂಡಲ ತಲಕಾವೇರಿಯಲ್ಲಿ ಇರಬೇಕು ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಗೋಪಿನಾಥ್ ಅವರು ತನಾಡಿ ಥರ್ಮಲ್ ಸ್ಕ್ಯಾನಿಂಗ್ ಮಾಡಬಹುದೇ ಹೊರತು ರ್‍ಯಾಪಿಡ್ ಆಂಟಿಜನ್ ಪರೀಕ್ಷೆ ಮಾಡುವುದು ಕಷ್ಟ ಸಾಧ್ಯ ಎಂದರು.
ಸಮಿತಿ ಸದಸ್ಯರಾದ ಕೋಡಿ ಚಂದ್ರ ಶೇಖರ್ ಮಾತನಾಡಿ, ಕೋವಿಡ್-19 ಸಂಬಂಧ ಥರ್ಮಲ್ ಸ್ಕ್ಯಾನಿಂಗ್ ಮಾಡಬಹುದು. ಆದರೆ ಪ್ರತಿಯೊಬ್ಬರಿಗೂ ರ್‍ಯಾಪಿಡ್ ಆಂಟಿಜನ್ ಪರೀಕ್ಷೆ ಮಾಡಲಾಗುವುದಿಲ್ಲ. ಈ ಸಂಬಂಧ ಭಕ್ತಾದಿಗಳಲ್ಲಿ ಜಾಗೃತಿ ಮೂಡಿಸುವಂತೆ ತಿಳಿಸಿದರು.
ಸ್ಥಳೀಯ ಮುಖಂಡ ಕೆ.ಜೆ.ಭರತ್ ಮಾತನಾಡಿ ತುಲಾ ಸಂಕ್ರಮಣ ಜಾತ್ರೆಯ ಸಂದರ್ಭದಲ್ಲಿ ಸಂಘ ಸಮಿತಿಯು ಸಹ ಕಡಿಮೆಯಾಗಬೇಕು ಎಂದು ಅವರು ಕೋರಿದರು.
ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ, ಜಿ.ಪಂ.ಸದಸ್ಯರಾದ ಹೊಸಮನೆ ಕವಿತಾ ಪ್ರಭಾಕರ್, ಬೊಳ್ಳಡ್ಕ ಅಪ್ಪಾಜಿ, ತಹಶೀಲ್ದಾರ್ ಮಹೇಶ್, ಭಾಗಮಂಡಲ- ತಲಕಾವೇರಿ ದೇವಾಲಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ಪೊನ್ನಣ್ಣ ಹಾಜರಿದ್ದರು.
‘ಮಕ್ಕಳು, ವೃದ್ಧರು ಬರುವುದು ಬೇಡ’
ಈ ವರ್ಷ ಬೆಳಿಗ್ಗೆ ತೀರ್ಥೋದ್ಭವ ನಡೆಯುತ್ತಿದ್ದು ಆಗ ಚಳಿಯ ವಾತಾವರಣ ಇರಲಿದೆ. ಚಳಿ ವಾತಾವರಣದಲ್ಲಿ ಕೋವಿಡ್ ಹೆಚ್ಚಾಗಿ ಹರಡುವುದರಿಂದ ಮಕ್ಕಳು, 60 ವರ್ಷ ಮೇಲ್ಪಟ್ಟವರನ್ನು ಕರೆತರುವುದನ್ನು ಸ್ವಯಂ ನಿಯಂತ್ರಣ ಮಾಡಿಕೊಳ್ಳಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಮನವಿ ಮಾಡಿದರು.
ಜಾತ್ರೆಯು ಒಂದು ನಡೆಯಲಿದ್ದು ಭಕ್ತಾದಿಗಳು ಆ ಸಂದರ್ಭದಲ್ಲಿ ಆಗಮಿಸಬಹುದು. ಅ.16 ಮತ್ತು 17ರಂದು ಜನ ದಟ್ಟಣೆ ಕಡಿಮೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳವಾಗುತ್ತಿದ್ದು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪರಿಸ್ಥಿತಿ ಕೈಮೀರಿದರೆ ಕಷ್ಟವಾಗಲಿದೆ. ಆದ್ದರಿಂದ, ಎಚ್ಚರಿಕೆ ವಹಿಸುವುದು ಅಗತ್ಯ ಎಂದರು.
ಪೊಲೀಸರ ಜೊತೆ ಸಂಘರ್ಷಕ್ಕೆ ಅವಕಾಶ ನೀಡಬಾರದು. ಪವಿತ್ರ ದಿನದಂದು ಪ್ರತಿಯೊಬ್ಬವರು ಶ್ರದ್ಧಾಭಕ್ತಿಯಿಂದ ತುಲಾ ಸಂಕ್ರಮಣ ಆಚರಿಸಬೇಕು. ಈ ಬಾರಿ ಯಾವುದೇ ರೀತಿಯ ವಾಹನ ಪಾಸ್ ಇಲ್ಲ. ತಲಕಾವೇರಿ ವಾಹನ ಪಾರ್ಕಿಂಗ್ ಬಳಿ ಮಣ್ಣು ತೆಗೆಸಬೇಕು. ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮ ಇರುವುದಿಲ್ಲ. 1 ತಿಂಗಳ ಮಟ್ಟಿಗೆ ಕರಿಕೆ ಗೇಟ್ ಬಂದ್ ಮಾಡಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.