ಬೆಂಗಳೂರು: ಕ್ಯಾಂಟೀನ್ ಮಾಲೀಕರಿಗೆ ಬಾಕಿ ಬಿಲ್ ಪಾವತಿಸಲು ₹ 50,000 ಲಂಚ ಪಡೆಯುತ್ತಿದ್ದ ಇಲ್ಲಿನ ಕೊಟ್ಟಿಗೆಪಾಳ್ಯದ ರಾಷ್ಟ್ರೀಯ ಯುನಾನಿ ವೈದ್ಯಕೀಯ ಸಂಸ್ಥೆಯ ಆಡಳಿತಾಧಿಕಾರಿ ನದೀಂ ಎ. ಸಿದ್ದಿಕ್ಕಿ ಅವರನ್ನು ಸಿಬಿಐ ಶುಕ್ರವಾರ ಬಂಧಿಸಿದೆ.
ರಾಷ್ಟ್ರೀಯ ಯುನಾನಿ ವೈದ್ಯಕೀಯ ಸಂಸ್ಥೆಯ ಕಚೇರಿ ಆವರಣದಲ್ಲಿ ನಾರಾಯಣ ಕುಂದಾಪುರ ಎಂಬುವವರು ಕ್ಯಾಂಟೀನ್ ನಡೆಸುತ್ತಿದ್ದಾರೆ. ಸಂಸ್ಥೆಗೆ ಆಹಾರ ಪೂರೈಸಿದ ಬಾಬ್ತು ₹ 3 ಲಕ್ಷ ಬಿಲ್ ಬಾಕಿ ಇತ್ತು. ಅದನ್ನು ಪಾವತಿಸಲು ₹ 1.10 ಲಕ್ಷ ಲಂಚ ನೀಡುವಂತೆ ಆಡಳಿತಾಧಿಕಾರಿ ಬೇಡಿಕೆ ಇಟ್ಟಿದ್ದರು. ಈ ಕುರಿತು ಕ್ಯಾಂಟೀನ್ ಮಾಲೀಕರು ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳದ ಬೆಂಗಳೂರು ಘಟಕಕ್ಕೆ ದೂರು ಸಲ್ಲಿಸಿದ್ದರು.
ಪ್ರಾಥಮಿಕ ವಿಚಾರಣೆ ನಡೆಸಿದ್ದ ಡಿವೈಎಸ್‌ಪಿ ಸುರೇಶ್ ಕುಮಾರ್, ರಾಷ್ಟ್ರೀಯ ಯನಾನಿ ವೈದ್ಯಕೀಯ ಸಂಸ್ಥೆಯ ಆಡಳಿತಾಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ಸಾಕ್ಷ್ಯಗಳಿವೆ ಎಂದು ವರದಿ ಸಲ್ಲಿಸಿದ್ದರು. ವರದಿಯ ಆಧಾರದಲ್ಲಿ ನದೀಂ ವಿರುದ್ಧ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸುವಂತೆ ಸಿಬಿಐ ಡಿಐಜಿ ಆರ್. ಜಯಲಕ್ಷ್ಮಿ ನಿರ್ದೇಶನ ನೀಡಿದ್ದರು.
ಮೊದಲ ಹಂತದಲ್ಲಿ ₹ 50,000ವನ್ನು ಶುಕ್ರವಾರ ಸಂಜೆ ತಲುಪಿಸುವಂತೆ ಆರೋಪಿಯು ಕ್ಯಾಂಟೀನ್ ಮಾಲೀಕರಿಗೆ ಸೂಚಿಸಿದ್ದರು. ತರಕಾರಿ ಇರುವ ಕೈ ಚೀಲದಲ್ಲಿ ಹಣ ಇರಿಸಿ ಮನೆಯೊಳಕ್ಕೆ ತಂದು ಕೊಡುವಂತೆ ಸೂಚನೆ ನೀಡಿದ್ದರು. ಅದೇ ಪ್ರಕಾರ, ಶುಕ್ರವಾರ ರಾತ್ರಿ ನಾರಾಯಣ ಅವರು ರಾಷ್ಟ್ರೀಯ ಯುನಾನಿ ವೈದ್ಯಕೀಯ ಸಂಸ್ಥೆಯ ಆವರಣದಲ್ಲೇ ಇರುವ ಆಡಳಿತಾಧಿಕಾರಿಯ ವಸತಿಗೃಹಕ್ಕೆ ಹಣ ತಲುಪಿಸಿದ್ದರು. ತಕ್ಷಣ ದಾಳಿಮಾಡಿದ ಸಿಬಿಐ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಇನ್‌ಸ್ಪೆಕ್ಟರ್ ಕಿರಣ್ ರಾಜ್ ಮತ್ತು ತಂಡ ಆರೋಪಿಯನ್ನು ಬಂಧಿಸಿದೆ.
₹ 2 ಲಕ್ಷ ನಗದು ವಶ: ಬಂಧನದ ಬಳಿಕ ಸಿಬಿಐ ಅಧಿಕಾರಿಗಳು ಆರೋಪಿಯ ಮನೆಯಲ್ಲಿ ಶೋಧ ನಡೆಸಿದ್ದಾರೆ. ₹ 2 ಲಕ್ಷ ನಗದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಾಥಮಿಕ ತನಿಖೆಯ ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.