ADVERTISEMENT

ಡಿಕೆಶಿ ವಿರುದ್ಧದ CBI ತನಿಖೆ ವಾಪಸ್; ಸಚಿವ ಸಂಪುಟಕ್ಕೆ ಕಪ್ಪು ಚುಕ್ಕೆ –ಆರ್.ಅಶೋಕ

ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಕಿಡಿ: ಚಿತ್ರದುರ್ಗದಲ್ಲಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2023, 13:17 IST
Last Updated 25 ನವೆಂಬರ್ 2023, 13:17 IST
<div class="paragraphs"><p>ಚಿತ್ರದುರ್ಗದ ಹೊರವಲಯದ ಮಾದಾರ ಚನ್ನಯ್ಯ ಗುರು‍ಪೀಠಕ್ಕೆ ಶನಿವಾರ ಭೇಟಿ ನೀಡಿದ್ದ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್ ಅವರನ್ನು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸನ್ಮಾನಿಸಿದರು</p></div>

ಚಿತ್ರದುರ್ಗದ ಹೊರವಲಯದ ಮಾದಾರ ಚನ್ನಯ್ಯ ಗುರು‍ಪೀಠಕ್ಕೆ ಶನಿವಾರ ಭೇಟಿ ನೀಡಿದ್ದ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್ ಅವರನ್ನು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸನ್ಮಾನಿಸಿದರು

   

ಚಿತ್ರದುರ್ಗ: ಉ‍ಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದು ಕಾನೂನು ಕಣ್ಣಿಗೆ ಮಣ್ಣೆರೆಚುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಈ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಲಿದ್ದು, ಸಚಿವ ಸಂಪುಟಕ್ಕೆ ಕಪ್ಪುಚುಕ್ಕೆ ಆಗಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಕಿಡಿಕಾರಿದರು.

‘ಪ್ರಕರಣದ ತನಿಖೆ ಪೂರ್ಣಗೊಂಡು ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಕೆಯಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಂಪುಟದ ಸದಸ್ಯರೊಬ್ಬರ ಪರವಾಗಿ ಕೈಗೊಂಡ ತೀರ್ಮಾನ ಕಾನೂನಿನ ಸ್ಪಷ್ಟ ಉಲ್ಲಂಘನೆ. ಇದೇ ರೀತಿಯ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಿದ ನಿದರ್ಶನಗಳಿವೆ’ ಎಂದು ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ADVERTISEMENT

‘ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್‌ ಕೈಗೆತ್ತಿಕೊಂಡಿದೆ. ಡಿ.ಕೆ.ಶಿವಕುಮಾರ್ ಪರ ವಕೀಲರ ಕೋರಿಕೆ ಮೇರೆಗೆ ವಿಚಾರಣೆ ಮುಂದೂಡಲಾಗಿದೆ. ಸಚಿವ ಸಂಪುಟದಲ್ಲಿ ಈ ನಿರ್ಧಾರ ಕೈಗೊಳ್ಳುವ ಉದ್ದೇಶದಿಂದಲೇ ನ್ಯಾಯಾಲಯದ ಕಾಲಾವಕಾಶ ಕೋರಲಾಗಿತ್ತು ಎಂಬ ಅನುಮಾನಗಳಿವೆ. ಸಚಿವ ಸಂಪುಟದ ಸಭೆಯ ತೀರ್ಮಾನಕ್ಕೂ ಮುನ್ನ ಗೋಪ್ಯತೆ ಕಾಪಾಡಿಕೊಂಡ ರೀತಿ ಸಂಶಯ ಮೂಡಿಸುತ್ತಿದೆ’ ಎಂದು ಆರೋಪಿಸಿದರು.

‘ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಪ್ರಕರಣ 2014ರಲ್ಲಿ ಹೊರಬಂದಿತ್ತು. 380ಪಟ್ಟು ಹೆಚ್ಚು ಆದಾಯ ಹೊಂದಿದ್ದು ಸರ್ಕಾರದ ಗಮನಕ್ಕೆ ಬಂದಿತ್ತು. 2019ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಅನುಮತಿ ನೀಡಿತು. ಆಗ ಅಡ್ವೊಕೇಟ್‌ ಜನರಲ್‌ ಆಗಿದ್ದ ಪ್ರಭುಲಿಂಗ ಕೆ.ನಾವದಗಿ ಅವರ ಸಲಹೆ ಪಡೆಯಲಾಗಿತ್ತು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಡಿ.ಕೆ.ಶಿವಕುಮಾರ್ ಅವರನ್ನು ರಕ್ಷಣೆ ಮಾಡುವ ಉದ್ದೇಶದಿಂದ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಕಾನೂನು ಅರಿವು ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಪ್ಪಿಗೆ ಇರಲಿಲ್ಲ. ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆಯ ಮೇರೆಗೆ ಸಂಪುಟದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕಾಂಗ್ರೆಸ್‌ ಚಾಪೆ ಕೆಳಗೆ ತೂರಲು ಪ್ರಯತ್ನಿಸಿದರೆ ಕಾನೂನು ರಂಗೋಲಿ ಕೆಳಗೆ ನುಸಳುತ್ತದೆ. ಕಾನೂನು ಬಾಹುಗಳು ದೊಡ್ಡದಿವೆ’ ಎಂದು ಹೇಳಿದರು.

‘ಇಬ್ಬರಲ್ಲಷ್ಟೇ ಅಸಮಾಧಾನ’

ಪಕ್ಷದ ಬೆಳವಣಿಗೆಯ ಬಗ್ಗೆ ಬೇಸರಗೊಂಡಿದ್ದ ಮಾಜಿ ಸಚಿವ ಸಿ.ಟಿ.ರವಿ, ರಮೇಶ್‌ ಜಾರಕಿಹೊಳಿ ಸೇರಿ ಅನೇಕರೊಂದಿಗೆ ವರಿಷ್ಠರು ಚರ್ಚಿಸಿದ್ದಾರೆ. ಇಬ್ಬರು ಮಾತ್ರ ಬಹಿರಂಗ ಹೇಳಿಕೆ ನೀಡುತ್ತಿದ್ದು, ಪಕ್ಷದ ಹೈಕಮಾಂಡ್‌ ಇದನ್ನೂ ಸರಿಪಡಿಸಲಿದೆ’ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಮಾಹಿತಿ ನೀಡಿದರು.

‘ವಿ.ಸೋಮಣ್ಣ ಅವರೊಂದಿಗೆ ನಾನು ಮಾತನಾಡಲಿದ್ದೇನೆ. ಪಕ್ಷದ ವರಿಷ್ಠರು ಕೂಡ ಚರ್ಚಿಸಲಿದ್ದಾರೆ. ಎಲ್ಲವನ್ನು ಮಾತನಾಡಿಕೊಂಡು ಬಗೆಹರಿಸಿಕೊಳ್ಳಲಿದ್ದೇವೆ. ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಳದು, ತೂಗಿ ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.