ADVERTISEMENT

ಪ್ರಜ್ವಲ್ ರೇವಣ್ಣ ವಿರುದ್ಧ ಸಿಬಿಐ ಬ್ಲೂ ಕಾರ್ನರ್ ನೋಟಿಸ್ ಜಾರಿ ಸಾಧ್ಯತೆ: SIT

ಪಿಟಿಐ
Published 4 ಮೇ 2024, 13:52 IST
Last Updated 4 ಮೇ 2024, 13:52 IST
<div class="paragraphs"><p>ಪ್ರಜ್ವಲ್ ರೇವಣ್ಣ</p></div>

ಪ್ರಜ್ವಲ್ ರೇವಣ್ಣ

   

ಬೆಂಗಳೂರು: ಹಲವು ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ, ಬೆದರಿಕೆ ಮತ್ತು ಅಪಹರಣ ಪ್ರಕರಣ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ದೇಶ ತೊರೆದಿದ್ದು, ಅವರ ವಿರುದ್ಧ ಸಿಬಿಐ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸುವ ಸಾಧ್ಯತೆ ಇದೆ ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ತಿಳಿಸಿರುವುದಾಗಿ ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ವ್ಯಕ್ತಿಯ ಪತ್ತೆಗೆ ತನ್ನ ಸದಸ್ಯ ರಾಷ್ಟ್ರಗಳಿಂದ ಮಾಹಿತಿ ಸಂಗ್ರಹಿಸಿ ಅಂತರರಾಷ್ಟ್ರೀಯ ಪೊಲೀಸ್ ಸಹಕಾರ ಕೋರುವ ಬ್ಲೂ ಕಾರ್ನರ್ ನೋಟಿಸ್ ಅನ್ನು ಜಾರಿಗೊಳಿಸಲಾಗುತ್ತದೆ. ಪ್ರಕರಣ ಕುರಿತು ಎಸ್‌ಐಟಿ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಜ್ವಲ್ ಬಂಧನಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದೆನ್ನಲಾಗಿದೆ.

ADVERTISEMENT

‘ಪ್ರಜ್ವಲ್ ಬಂಧನಕ್ಕೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸಿಬಿಐ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಿದರೆ ತನಿಖೆ ಇನ್ನಷ್ಟು ಚುರುಕು ಪಡೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗೆ ತಿಳಿಸಿರುವುದಾಗಿ’ ಅಧಿಕಾರಿಗಳು ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮೊಮ್ಮಗನಾದ 33 ವರ್ಷದ ಪ್ರಜ್ವಲ್ ರೇವಣ್ಣ ಅವರು ಹಾಸನ ಕ್ಷೇತ್ರದ ಹಾಲಿ ಸಂಸರಾಗಿದ್ದು, ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರಕ್ಕೆ ಏ. 26ರಂದು ಮತದಾನ ನಡೆದಿದೆ.

ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಎದುರಿಸುತ್ತಿರುವ ಪ್ರಜ್ವಲ್ ಇದ್ದಾರೆ ಎನ್ನಲಾದ ಹಲವು ವಿಡಿಯೊಗಳು ಹಾಸನದಲ್ಲಿ ಭಾರೀ ಸದ್ದು ಮಾಡಿದ್ದವು. ಈ ಕುರಿತಂತೆ ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಎಸ್‌ಐಟಿಗೆ ಸೂಚಿಸಿತ್ತು.

ಲೋಕಸಭಾ ಚುನಾವಣೆಯಲ್ಲಿ ಮತದಾನ ನೆರವೇರಿಸಿದ ಪ್ರಜ್ವಲ್, ಏ. 27ರಂದು ವಿದೇಶಕ್ಕೆ ಪ್ರಯಾಣಿಸಿದ್ದರು. ಎಸ್‌ಐಟಿ ಎದುರು ಹಾಜರಾಗಲು ಏಳು ದಿನಗಳ ಕಾಲಾವಕಾಶ ನೀಡುವಂತೆ ಎಸ್‌ಐಟಿಗೆ ಪ್ರಜ್ವಲ್ ಪರ ವಕೀಲರು ಕೋರಿದ್ದಾರೆ. ಆದರೆ ಇದನ್ನು ಅಧಿಕಾರಿಗಳು ನಿರಾಕರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.